compensation-sites 
ಬೆಂಗಳೂರು

ಕಾರಂತ ಬಡಾವಣೆ: ಆ.31ಕ್ಕೆ ರೈತರಿಗೆ ಪರಿಹಾರದ ಸೈಟ್ ಹಂಚಿಕೆ

ಪ್ರಮುಖ ಮುಖ್ಯಾಂಶಗಳು

  • ಬಿಡಿಎ ಕಚೇರಿಯಲ್ಲಿ ಮುಖ್ಯಮಂತ್ರಿ ಡಿಕೆಶಿ ಅವರಿಂದ ಚಾಲನೆ
  • ಸಾರ್ವಜನಿಕರಿಗೆ ಸೈಟ್​​ ಹಂಚಿಕೆ ದಿನಾಂಕ ಘೋಷಣೆ ಸಾಧ್ಯತೆ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಯಲಹಂಕ ಬಳಿ ನಿರ್ಮಿಸಿರುವ ಡಾ. ಶಿವರಾಮ ಕಾರಂತ ಬಡಾವಣೆಗೆ ಜಮೀನು ನೀಡಿರುವ ರೈತರಿಗೆ ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದೆ.

ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಸೋಮವಾರ (ಆ.31) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರಿಗೆ ಪರಿಹಾರ ಸೈಟ್‌ಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಸುಮಾರು 18 ಸಾವಿರ ಸೈಟ್‌ಗಳನ್ನು ಹಂಚಿಕೆ ಮಾಡಲಿದ್ದು, ನ್ಯಾಯಾಲಯ ಸೂಚಿಸಿರುವಂತೆ ಮೊದಲ ಆದ್ಯತೆಯನ್ನು ಬಡಾವಣೆ ನಿರ್ಮಿಸಲು ಜಮೀನು ಬಿಟ್ಟುಕೊಟ್ಟಿರುವವರಿಗೆ ನೀಡಲಿದ್ದೇವೆ ಎಂದು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ತಿಳಿಸಿದ್ದಾರೆ.
ರೈತರಿಗೆ ಪ್ರತಿ ಎಕರೆಗೆ ಶೇ.40 ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲಾಗುತ್ತಿದೆ. ಈ ಬಾಬ್ತಿನಲ್ಲಿ 3 ಕೋಟಿ ಚದರ ಅಡಿ ವಿಸ್ತೀರ್ಣದ ಜಾಗವನ್ನು ನಿವೇಶನದ ರೂಪದಲ್ಲಿ ಹಂಚಿಕೆ ಮಾಡಬೇಕಿದ್ದು, ಮೊದಲ ಹಂತದಲ್ಲಿ 1 ಕೋಟಿ ಚದರ ಅಡಿಯಷ್ಟು ವಿತರಿಸಲಿದ್ದೇವೆ. ನಂತರ ಕಾಲಮಿತಿಯೊಳಗೆ ಬಾಕಿ ನಿವೇಶನಗಳನ್ನು ಹಂಚಿಕೆ ಮಾಡುತ್ತೇವೆ. ಜಮೀನಿನ ದಾಖಲೆಗಳನ್ನು ಒದಗಿಸುತ್ತಿದ್ದಂತೆ ನಮ್ಮ ಅಧಿಕಾರಿಗಳು ಅದನ್ನು ದೃಢೀಕರಿಸಿಕೊಂಡು ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದಿದ್ದಾರೆ.
ಹಂಚಿಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲು ಪ್ರತ್ಯೇಕ ಸ್‌ಟಾವೇರ್ ರೂಪಿಸಲಾಗಿದೆ. ಇದರಲ್ಲಿ ರೈತರೊಬ್ಬರು ಬಡಾವಣೆಗೆ ನೀಡಿರುವ ಜಮೀನಿನ ವಿಸ್ತೀರ್ಣ ಸೇರಿ ಇತರ ದಾಖಲೆಗಳನ್ನು ಅಪ್‌ಲೊಡ್ ಮಾಡಲಾಗಿದೆ. ಇದನ್ನಾಧರಿಸಿ ಶೇ.40 ಪರಿಹಾರದ ಸೈಟ್‌ಗಳನ್ನು ಹಂಚಿಕೆ ಮಾಡಬೇಕಾದ ವಿಸ್ತೀರ್ಣ ಆಧರಿಸಿ 20/30, 30/40 ಹಾಗೂ 40/60 ಅಳತೆಯ ನಿವೇಶನಗಳನ್ನು ವಿತರಿಸಲಾಗುತ್ತದೆ. ಇದರಲ್ಲಿ ಮಾನವ ಹಸ್ತಕ್ಷೇಪಕ್ಕೆ ಅವಕಾಶ ಇರದಂತೆ ಎಚ್ಚರ ವಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಸಾರ್ವಜನಿಕರಿಂದ ಶೀಘ್ರ ಅರ್ಜಿ ಆಹ್ವಾನ:

ಕಾರಂತ ಲೇಔಟ್‌ನಲ್ಲಿ ರೈತರಿಗೆ ಪರಿಹಾರದ ಸೈಟ್ ಹಂಚಿಕೆ ಮಾಡಿದ ಬಳಿಕ ಸಾರ್ವಜನಿಕರಿಗೂ ಒಂದಿಷ್ಟು ನಿವೇಶನಗಳನ್ನು ವಿತರಿಸಲಾಗುತ್ತದೆ. 20/30, 30/40, 40/60 ಹಾಗೂ 50/80 ಅಡಿ ಅಳತೆಯ ಸೈಟ್‌ಗಳನ್ನು ಹಂಚಿಕೆ ಮಾಡಲು ಶೀಘ್ರವೇ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಅರ್ಜಿ ಕರೆಯುವ ದಿನಾಂಕ, ಸೈಟ್ ದರ ಹಾಗೂ ಇತರ ಮಾಹಿತಿಯನ್ನು ಸ್ವತ: ಮುಖ್ಯಮಂತ್ರಿಯವರೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಬಿಡಿಎ ಅಧ್ಯಕ್ಷರು ತಿಳಿಸಿದ್ದಾರೆ.