ಬೆಂಗಳೂರು: ಬೀಸು ಕಂಸಾಳೆ ಕಲಾವಿದರ ನೆಲ ನಡುಗಿಸುವ ತಾಳ, ಪಟಾ ಕುಣಿತದ ಜೋಶಿನ ಹೆಜ್ಜೆಗಳು ಹಾಗೂ ಹಸಿರು ಪ್ರಕೃತಿಯ ಮಡಿಲಲ್ಲಿ ಹುಟ್ಟಿದ ಹಾಲಕ್ಕಿ ಕುಣಿತದ ವರ್ಣರಂಜಿತ ಉಡುಪು ಮತ್ತು ಸಂಭ್ರಮದ ನೃತ್ಯ ಕಣ್ಮನ ಸೆಳೆದಿತ್ತು.
ಸಪ್ನ ಬುಕ್ ಹೌಸ್ ಮುಂಭಾಗ ರಾಜ್ಯೋತ್ಸವ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಪುಸ್ತಕ ಜಾತ್ರೆಯಲ್ಲಿ ಕಂಡು ಬಂದ ದೃಶ್ಯವಿದು. ನಾಡಿನ ಪ್ರಸಿದ್ಧ ಲೇಖಕರು, ಶಿಕ್ಷಕರು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರು ಜನಪದ ಕಲೆಗಳ ಸೊಬಗನ್ನು ಕಣ್ತುಂಬಿಕೊಂಡರು.
ರಿಯಾಯಿತಿ ಮೇಳ ಉದ್ಘಾಟಿಸಿದ ಚಲನಚಿತ್ರ ನಟ ದೊಡ್ಡಣ್ಣನವರು, ಆಂಗ್ಲರ ಆಡಳಿತದಲ್ಲಿ ಕನ್ನಡ ಸುಭದ್ರವಾಗಿತ್ತು. ಅವರೇ ಕನ್ನಡದಲ್ಲಿ ವ್ಯವಹರಿಸುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಕನ್ನಡದ ಬದಲಿಗೆ ಪರ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಂದಿಗೂ ಮಾತೃ ಭಾಷೆ ಮರೆಯಬಾರದು. ಮಾತೃ ಭಾಷೆ ಮರೆತರೆ ತಾಯಿ ಮತ್ತು ತಾಯಿನಾಡನ್ನೆ ಮರೆತಂತೆ. ಹಾಗಾಗಿ ಕನ್ನಡ ಮತ್ತು ಕನ್ನಡದ ನೆಲವನ್ನು ಎಂದಿಗೂ ಮರೆಯಬಾರದು ಎಂದು ತಿಳಿಸಿದರು.
ವಿದ್ವಾಂಸ ನಾಡೋಜ ಹಂಪ ನಾಗರಾಜಯ್ಯ ಮಾತನಾಡಿ, ಕನ್ನಡ ಪುಸ್ತಕಗಳು ಒಂದೆಡೆ ಸಿಗಬೇಕು ಎಂಬ ಆಸೆ ಎಲ್ಲ ಕನ್ನಡಿಗರಾಗಿತ್ತು. ಇದನ್ನು ಈಡೇರಿಸುವ ಜತೆಗೆ ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಸಪ್ನ ಬುಕ್ ಹೌಸ್ ಯಶಸ್ವಿಯಾಗಿದೆ ಎಂದರು.
ಸಪ್ನ ಬುಕ್ ಹೌಸ್, ಕನ್ನಡ ಲೇಖಕರು ಸೇರುವ ಜಾಗವಾಗಿದೆ. ಇಲ್ಲಿ ಜಾತಿ, ಮತ, ಧರ್ಮ ಹಾಗೂ ಪ್ರಾಂತದ ಬೇಧವಿಲ್ಲದೆ ಎಲ್ಲ ಲೇಖಕರಿಗೂ ಪ್ರೋತ್ಸಾಹ ಕೊಡುವ ಸಂಸ್ಥೆಯಾಗಿದೆ. ಇದು ಇಂದಿಗೂ ಪ್ರಾಮಾಣಿಕತೆಯ ಹಾದಿಯಲ್ಲಿ ಹೆಜ್ಜೆ ಇಡುವ ಜತೆಗೆ ಮಾತೃ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಶ್ಲಾಸಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಆರ್. ಸುನಂದಮ್ಮ ದೀಪಾರಾಧನೆ ನೆರವೇರಿಸಿದರೆ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ.ಸಿ ಸೋಮಶೇಖರ್ ಉಚಿತ ಕನ್ನಡ ಪುಸ್ತಕ ವಿತರಣೆಗೆ ಚಾಲನೆ ನೀಡಿದರು.
40ಕ್ಕೂ ಹೆಚ್ಚು ಪ್ರಕಾಶಕ ದಾನಿಗಳು ಹಾಗೂ ಸಪ್ನ ಬುಕ್ ಹೌಸ್ ವತಿಯಿಂದ ಹೊಸ ಓದುಗರನ್ನು ಸೃಷ್ಟಿಸಲು ಪ್ರಸಿದ್ಧ ಲೇಖಕರ ಒಟ್ಟು 20 ಲಕ್ಷಕ್ಕೂ ಅಧಿಕ ಮೌಲ್ಯದ 10 ಸಾವಿರ ಕನ್ನಡ ಪುಸ್ತಕಗಳನ್ನು ಉಚಿತವಾಗಿ ಹಂಚಲಾಯಿತು. ಸಾಹಿತ್ಯಾಸಕ್ತರು ಹಾಗೂ ಯುವಕರು ಪುಸ್ತಕಗಳನ್ನು ಸ್ವೀಕರಿಸಿದರು.
ಕನ್ನಡದ ವಿಚಾರದಲ್ಲಿ ಪ್ರಾಮಾಣಿಕವಾಗಿರಬೇಕು. ನಾಡು-ಭಾಷೆಗೆ ತೊಂದರೆ ಅನ್ಯಾಯವಾದರೆ ಗಟ್ಟಿಯಾಗಿ ನಿಂತು ಹೋರಾಡಬೇಕಿದೆ. ಪ್ರಸ್ತುತ ಕನ್ನಡ ಪರ ಹೋರಾಟಗಾರರ ಇರುವಿಕೆಯಿಂದಲೇ ಕನ್ನಡದ ಅಸ್ತಿತ್ವ ಉಳಿದು ಕೊಂಡಿದೆ.ಜೋಗಿ, ಹಿರಿಯ ಪತ್ರಕರ್ತ