- ಎಂಟು ವರ್ಷದ ಸಮಸ್ಯೆಗೆ ಹತ್ತೇ ತಿಂಗಳಲ್ಲಿ ರಿಲೀಫ್
- ಸರ್ಜಾಪುರ ಬಳಿ ಅರ್ಧಕ್ಕೆ ನಿಂತ ವಸತಿ ಯೋಜನೆ ಪ್ರಕರಣ
ಬೆಂಗಳೂರು: ಲಕ್ಷಾಂತರ ರೂಪಾಯಿ ಮೊತ್ತ ಪಾವತಿಸಿ ಫ್ಲ್ಯಾಟ್ ಬುಕ್ ಮಾಡಿದ್ದ ಜನರಿಗೆ, ಭೂಮಾಲೀಕ ಹಾಗೂ ಬಿಲ್ಡರ್ ಜಟಾಪಟಿ ಕಾರಣಕ್ಕೆ 8 ವರ್ಷದಿಂದ ಸೂರು ಸಿಗದೆ ಅತಂತ್ರರಾಗಿದ್ದ 400 ಮಂದಿ ಸಂತ್ರಸ್ತರಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ಕೆ-ರೇರಾ) ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೆಲ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ತಪ್ಪಿಗೆ ಹಲವು ನಾಗರಿಕರು ಕೈಸುಟ್ಟುಕೊಂಡಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ ಪ್ರತಿಯಾಗಿ ಸಕಾಲದಲ್ಲಿ ಮನೆ/ಫ್ಲ್ಯಾಟ್ ನೀಡದೆ ನ್ಯಾಯಾಲಯದ ಮೊರೆ ಹೋಗಿದ್ದರೂ, ಪರಿಹಾರ ಸಿಕ್ಕಿಲ್ಲ. ಆದರೆ, ಸರ್ಜಾಪುರ ರಸ್ತೆಯ ಬಿದಿರುಗುಪ್ಪೆಯಲ್ಲಿ ವಸತಿ ಯೋಜನೆ ಪ್ರಕಟಿಸಿದ್ದ ಗೋಲ್ಡನ್ ಅರೆನಾ ಅಪಾರ್ಟ್‌ಮೆಂಟ್ ಪ್ರಕರಣದಲ್ಲಿ ಹಣ ಹೂಡಿದ್ದ ಅಷ್ಟೂ ಜನರಿಗೆ ಕಾಲಮಿತಿಯೊಳಗೆ ಫ್ಲ್ಯಾಟ್ ಸೌಲಭ್ಯ ಒದಗಿಸಲು ಆದೇಶ ನೀಡಿದೆ.
ಬಿಲ್ಡರ್ಸ್ ಕಂಪನಿ ಖಾಸಗಿ ಬ್ಯಾಂಕ್‌ಗಳಿಂದ ಕೋಟ್ಯಂತರ ರೂ. ಸಾಲ ಮಾಡಿ ಯೋಜನೆ ಕೈಗೆತ್ತಿಕೊಂಡಿದ್ದ ವೇಳೆ ಜಂಟಿ ಉದ್ಯಮ (ಜೆವಿ) ಲಾಭ ಹಂಚಿಕೆ ವಿಚಾರದಲ್ಲಿ ವಿವಾದ ತಲೆದೋರಿತ್ತು. ಈ ತಗಾದೆ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಪ್ರಾಜೆಕ್ಟ್ ಸ್ಥಗಿತಗೊಂಡಿತ್ತು. ಇದನ್ನೇ ನೆಪವಾಗಿಸಿ ಬ್ಯಾಂಕ್‌ಗಳು ಸಾಲ ಮೊತ್ತ ಬಿಡುಗಡೆಗೆ ಹಿಂದೇಟು ಹಾಕಿದ್ದವು. ಈ ಅಂಶಗಳನ್ನು ಸಂತ್ರಸ್ತರು ಖುದ್ದು ರೇರಾ ವಿಚಾರಣೆ ವೇಳೆ ವಿವರಿಸಿದ್ದರು. ಇದನ್ನಾಧರಿಸಿ ರೇರಾ, ಸ್ಥಗಿತಗೊಂಡಿದ್ದ ಪ್ರಾಜೆಕ್ಟ್ ಅನ್ನು ತಿಂಗಳೊಳಗೆ ಪುನಾರಂಭಿಸಬೇಕು. ಬಿಲ್ಡರ್‌ಗೆ ಬಿಡುಗಡೆ ಮಾಡಬೇಕಿದ್ದ ಬಾಕಿ ಸಾಲಕ್ಕೆ ಯಾವುದೇ ಅಡ್ಡಿ ಮಾಡದೆ ಅರ್ಧಕ್ಕೆ ನಿಂತಿರುವ ಅಪಾರ್ಟ್‌ಮೆಂಟ್‌ನಲ್ಲಿ ಸಂತ್ರಸ್ತರಿಗೆ ಸೂರು ಒದಗಿಸಬೇಕು ಎಂದು ನಿರ್ದೇಶನ ನೀಡಿದೆ.
10 ತಿಂಗಳಲ್ಲಿ ಕೇಸ್ ಇತ್ಯರ್ಥ:
ರೇರಾದಲ್ಲಿ ದಾಖಲಾಗುವ ಪ್ರಕರಣಗಳು ವರ್ಷಗಟ್ಟಲೇ ವಿಚಾರಣೆ ನಡೆದರೂ ಸೂಕ್ತ ಪರಿಹಾರ ಸಿಗದು ಎಂಬ ಮಾತು ಚಾಲ್ತಿಯಲ್ಲಿದೆ. ಕೆಲವೊಂದು ಕೇಸ್‌ಗಳಲ್ಲಿ ಬಿಲ್ಡರ್/ನಿರ್ಮಾಣ ಕಂಪನಿ ಪರ ಮೃಧು ಧೋರಣೆ ಕೈಗೊಳ್ಳಲಾಗುತ್ತದೆ ಎಂಬ ಅಪವಾದವೂ ಇದೆ. ಇನ್ನೂ ಕೆಲ ಪ್ರಕರಣಗಳಲ್ಲಿ ರೇರಾ ಆದೇಶಗಳಿಗೆ ಮೇಲ್ಮನವಿ ಪ್ರಾಧಿಕಾರ/ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತರಲಾಗುತ್ತಿದೆ. ಆದರೆ, ಹಾಲಿ ಪ್ರಕರಣದಲ್ಲಿ 10 ತಿಂಗಳಲ್ಲೇ ಹಲವಾರು ಬಾರಿ ವಿಚಾರಣೆ ನಡೆಸಿ ಕೇಸ್ ಇತ್ಯರ್ಥಪಡಿಸಲಾಗಿದೆ. ರೇರಾ ಆದೇಶವನ್ನು ಒಪ್ಪುವುದಾಗಿ ಭೂಮಾಲೀಕ ಹಾಗೂ ಬಿಲ್ಡರ್ ಇಬ್ಬರೂ ವಾಗ್ದಾನ ನೀಡಿದ್ದು, ದಶಕದಿಂದ ನೆನೆಗುದಿಗೆ ಬಿದ್ದಿರುವ ಬೃಹತ್ ವಸತಿ ಯೋಜನೆಗೆ ಮರುಜೀವ ಬಂದಂತಾಗಿದೆ. ಮುಖ್ಯವಾಗಿ 400ಕ್ಕೂ ಅಧಿಕ ಸಂಖ್ಯೆಯ ಜನರಿಗೆ ಬಿಗ್ ರಿಲೀಫ್ ದೊರೆತು, 2026ರೊಳಗೆ ಸೂರು ಸಿಗುವ ನಿರೀಕ್ಷೆ ಹುಟ್ಟಿಸಿದೆ.
ಸಂಘಟಿತ ಯತ್ನಕ್ಕೆ ಸಂದ ನ್ಯಾಯ:
ಸರ್ಜಾಪುರ ರಸ್ತೆಯ ಬಿದಿರುಗುಪ್ಪೆಯಲ್ಲಿ ಮೆ. ಆರ್ಯನ್ ಹೋಮ್‌ಟೆಕ್ ಪ್ರೈ. ಲಿ. 6.5 ಎಕರೆಯಲ್ಲಿ ‘ಗೋಲ್ಡನ್ ಅರೆನಾ’ ವಸತಿ ಯೋಜನೆ ಪ್ರಕಟಿಸಿತ್ತು (2013ರಲ್ಲಿ). ಇದಕ್ಕಾಗಿ ಸ್ಥಳೀಯ ಭೂಮಾಲೀಕನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೂರು ವರ್ಷ ಕಳೆಯುವ ವೇಳೆಗೆ ಇಬ್ಬರ ಮಧ್ಯೆ ತಗಾದೆ ಏರ್ಪಟ್ಟು ಯೋಜನೆ ಸ್ಥಗಿತಗೊಂಡಿತು. ಇತ್ತ ಹಣ ಹೂಡಿದ್ದವರು ಫ್ಲ್ಯಾಟ್ ನೀಡುವಂತೆ ಒತ್ತಾಯಿಸಿದಾಗ ಬೆದರಿಸಿ ಹೊರಹಾಕಲಾಗಿತ್ತು. ಪೊಲೀಸ್ ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಸ್ಥಳೀಯ ಮುಖಂಡ ಸಂಧಾನವೂ ಫಲ ನೀಡಲಿಲ್ಲ. ಬಳಿಕ ಸಂಘ ರಚಿಸಿಕೊಂಡು ಹೋರಾಟ ಕೈಗೊಳ್ಳಲಾಯಿತು. ಸಂಘ ಒಡೆಯಲು ಯತ್ನಕ್ಕೆ ಬಗ್ಗದೆ ಅಷ್ಟೂ ಸಂತ್ರಸ್ತರು ಒಟ್ಟಾಗಿ ನ್ಯಾಯದ ಮೊರೆ ಹೋದರು. ಪ್ರತಿ ವಾರ/ಪಾಕ್ಷಿಕ ವರ್ಚುವಲ್ ಸಭೆಗಳನ್ನು ನಡೆಸಿ ದಾಖಲೆಗಳನ್ನು ಕ್ರೋಡೀಕರಿಸಿ ರೇರಾದಲ್ಲಿ ವಾದ ಮಂಡಿಸಲಾಯಿತು. ಕೊನೆಗೆ ನ್ಯಾಯ ನಮ್ಮ ಪರವಾಗಿ ಬಂದಿತು ಎಂದು ಸಂಘದ ಪದಾಧಿಕಾರಿ ನಾಗೇಶ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.
ಬ್ಯಾಂಕ್‌ನಿಂದ ಸಾಲ ಪಡೆದು ಫ್ಲ್ಯಾಟ್ ಬುಕ್ ಮಾಡಿದ್ದೆ. ಶೇ.70 ಹಣ ಪಾವತಿಸಿ ಆರು ವರ್ಷ ಕಳೆದರೂ, ಈವರೆಗೂ ಸೂರು ಸೌಲಭ್ಯ ಸಿಕ್ಕಿಲ್ಲ. ಸದ್ಯ ಬಾಡಿಗೆ ಮನೆಯಲ್ಲಿದ್ದು, ಅದರ ಜತೆಗೆ ಬ್ಯಾಂಕ್ ಲೋನ್‌ಗೆ ಇಎಂಐ ಹಣ ಪಾವತಿಸಲು ಸಮಸ್ಯೆಯಾಗಿದೆ. ನಮ್ಮಂತಹ ಜನರ ಸಹಾಯಕ್ಕೆ ಸರ್ಕಾರ ಧಾವಿಸಲಿ.
- ವೈ.ರಾಜೇಶ್, ಜೆ.ಪಿ.ನಗರ, ಫ್ಲ್ಯಾಟ್ ಹಂಚಿಕೆದಾರ
ಹೆಚ್ಚಿನ ಜನರು ತಮ್ಮ ದುಡಿಮೆಯ ಹಣದ ಜತೆಗೆ ಬ್ಯಾಂಕ್ ಸಾಲ ಮಾಡಿಯೇ ಫ್ಲ್ಯಾಟ್ ಖರೀದಿಸಿದ್ದಾರೆ. ಪ್ರಾಜೆಕ್ಟ್ ತಡವಾದ ಕಾರಣ ಬ್ಯಾಂಕ್‌ಗಳು ಕಂತು ಪಾವತಿ ಮೊತ್ತವನ್ನು ಮೃಧು ಸಾಲದಿಂದ (ಸಾಫ್ಟ್ ಲೋನ್) ವಾಣಿಜ್ಯ ಸಾಲಕ್ಕೆ ಬದಲಾಯಿಸಿದೆ. ಇದರಿಂದ ದುಪ್ಪಟ್ಟು ಹಣ ಪಾವತಿ ಅನಿವಾರ್ಯವಾಗಿದೆ. ರೇರಾ ಮೊರೆ ಹೋಗಿದ್ದರಿಂದ ನ್ಯಾಯ ದೊರೆತಿದ್ದು, ಬೇಗನೆ ಸೂರಿನ ಆಸೆ ಕಾಣುವಂತಾಗಿದೆ.
- ಕೆ.ವೆಂಕಟರಮಣ ರಾವ್, ಪ್ರಧಾನ ಕಾರ್ಯದರ್ಶಿ, ಗೋಲ್ಡನ್ ಅರೆನಾ ಫ್ಲ್ಯಾಟ್ ಖರೀದಾರರ ಸಂಘ