- ರಸ್ತೆ ಗುಂಡಿ, ಹದಗೆಟ್ಟ ರಸ್ತೆಯಿಂದ ಟ್ರಾಫಿಕ್ ಮತ್ತಷ್ಟು ಬಿಗಿ
- 9 ಸಿಗ್ನಲ್ಗಳಲ್ಲಿನ ಹಂಪ್ ತೆರವಿಗೂ ಶಿಫಾರಸು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯಲ್ಲಿ ದಿನೇ ದಿನೆ ಉಲ್ಬಣಗೊಳ್ಳುತ್ತಿರುವ ಸಂಚಾರ ದಟ್ಟಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಮಹತ್ವದ ವರದಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಸಲ್ಲಿಸಿದ್ದಾರೆ.
ನಗರದ ಪ್ರಮುಖ ಜಂಕ್ಷನ್ಗಳಲ್ಲಿ ರಸ್ತೆ ದುರಸ್ತಿ ಕೈಗೊಳ್ಳುವುದು ಸೇರಿ ಸಂಚಾರ ಸುಗಮಗೊಳಿಸಲು ಅಗತ್ಯ ಕ್ರಮಗಳನ್ನು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ನಗರದ ಸಂಚಾರ ಸಮಸ್ಯೆ ನಿವಾರಣೆಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಿಂಗಳ ಹಿಂದೆ ಸಂಚಾರಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು. ಅದರಂತೆ ಸಂಚಾರಿ ವಿಭಾಗದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ, ಜಂಕ್ಷನ್ ಹಾಗೂ ಇಂಟರ್ಸೆಕ್ಷನ್ಗಳ ಸ್ಥಿತಿಗತಿ ವಿಶ್ಲೇಷಿಸಿ ವರದಿ ಸಿದ್ಧಪಡಿಸಿದ್ದಾರೆ.
ವರದಿ ಪ್ರಕಾರ, ನಗರದ ಪ್ರಮುಖ ಜಂಕ್ಷನ್ಗಳಲ್ಲಿ ರಸ್ತೆ ಗುಂಡಿ, ಹದಗೆಟ್ಟ ರಸ್ತೆ ಹಾಗೂ ಅಸಮರ್ಪಕ ರಸ್ತೆ ನಿರ್ವಹಣೆಯಿಂದ ವಾಹನಗಳ ಸಂಚಾರ ವೇಗ ಕುಂಠಿತವಾಗುತ್ತಿದ್ದು, ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಿಗ್ನಲ್ ಇಂಟರ್ಸೆಕ್ಷನ್ಗಳ ರಸ್ತೆಗಳನ್ನು ದುರಸ್ತಿಪಡಿಸುವಂತೆ ಜಿಬಿಎಗೆ ಮನವಿ ಮಾಡಲಾಗಿದೆ.
ಇದಲ್ಲದೆ, ನಗರದ 9 ಸಿಗ್ನಲ್ ಜಂಕ್ಷನ್ಗಳಲ್ಲಿ ಹಂಪ್ಗಳಿರುವುದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವುಗಳನ್ನು ತಕ್ಷಣ ತೆರವುಗೊಳಿಸುವಂತೆ ಶಿಫಾರಸು ಮಾಡಲಾಗಿದೆ.
ಸಂಚಾರ ದಟ್ಟಣೆಗೆ ಕಾರಣವಾಗಿರುವ ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಜಿಬಿಎಗೆ ಸಲ್ಲಿಸಿರುವ ಈ ವರದಿ ಆಧರಿಸಿ ಪಾಲಿಕೆಗಳು ಶ್ರೀ ಕ್ರಮ ಕೈಗೊಳ್ಳಲಿದೆ ಎಂಬುದು ಇದೀಗ ಸಾರ್ವಜನಿಕರ ನಿರೀಕ್ಷೆಯಾಗಿದೆ.