- ಪೂರ್ವ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ಮಾಹಿತಿ
- ವಿವಿಧ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಬೆಂಗಳೂರು: ರಾಜಕಾಲುವೆ ಹಾಗೂ ಕೆರೆಗಳ ಮೂಲ ಗಡಿಗಳನ್ನು ಕಂದಾಯ ದಾಖಲೆಗಳಿಗೆ ಅನುಗುಣವಾಗಿ ಗುರುತಿಸಲು ಸಂಬಂಧಿತ ಇಲಾಖೆಗಳು ಹಾಗೂ ಏಜೆನ್ಸಿಗಳ ಸಹಯೋಗದಲ್ಲಿ ಜಂಟಿ ಸರ್ವೆ ಕೈಗೊಳ್ಳುವಂತೆ ಪೂರ್ವ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಳ್ಳಂದೂರು ವೆಸ್ಟ್ ವಿಯರ್/ಔಟ್‌ಲೆಟ್‌ನಿಂದ ಓಲ್ಡ್ ಏರ್‌ಪೋರ್ಟ್ ರಸ್ತೆ ಸಮೀಪದ ವರ್ಜೀನಿಯಾ ಮಾಲ್‌ವರೆಗೆ ಪ್ರಸ್ತಾಪಿತ ರಾಜಕಾಲುವೆಯ ಬಫರ್ ವಲಯ ಸಂರಕ್ಷಣೆ, ಸರ್ವಿಸ್ ರಸ್ತೆ ನಿರ್ಮಾಣ ಕುರಿತು ಗುರುವಾರ ಸ್ಥಳಪರಿಶೀಲನೆ ನಡೆಸಿದ ವೇಳೆ ಅವರು ಈ ನಿರ್ದೇಶನವನ್ನು ನೀಡಿದರು.
ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣವನ್ನು ನಿಖರವಾಗಿ ಗುರುತಿಸಿ ಗಡಿ ಕಲ್ಲುಗಳನ್ನು ಅಳವಡಿಸುವ ಉದ್ದೇಶದಿಂದ ಜಂಟಿ ಸರ್ವೆ ಮಹತ್ವದ್ದಾಗಿದೆ. ಹಾಗಾಗಿ ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಮುಂದುವರಿಸುವಂತೆ ಆಯುಕ್ತರು ಸೂಚಿಸಿದರು.
ಬಫರ್ ರಸ್ತೆ, ರಾಜಕಾಲುವೆ ಅಭಿವೃದ್ಧಿಗೆ ಆದ್ಯತೆ:
ಬಫರ್ ರಸ್ತೆಯನ್ನು ಹೊರ ವರ್ತುಲ ರಸ್ತೆಯೊಂದಿಗೆ ಸಂಪರ್ಕಿಸುವುದು, ಅಗತ್ಯವಿರುವ ಕಡೆ ರೈಲ್ವೆ ಮೇಲ್ಸೇತುವೆ ನಿರ್ಮಾಣ, ಎಲಿವೇಟೆಡ್ ಬ್ರಿಡ್ಜ್ ನಿರ್ಮಾಣ, ರಾಜಕಾಲುವೆಗಳ ಮೂಲ ಅಗಲವನ್ನು ಸಂರಕ್ಷಿಸಲು ಆದ್ಯತೆ ನೀಡಬೇಕು. ಮಳೆನೀರುಗಾಲುವೆಗಳ ರಿಟೈನಿಂಗ್ ವಾಲ್ ನಿರ್ಮಾಣ ಹಾಗೂ ನಗರ ಪ್ರವಾಹ ನಿಯಂತ್ರಣಕ್ಕೆ ಅಗತ್ಯವಿರುವ ತಾಂತ್ರಿಕ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿ ಯೋಜನೆಯನ್ನು ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ನಿರ್ದೇಶಿಸಿದರು.
ಸ್ಥಳ ಪರಿಶೀಲನೆ ವೇಳೆ ಪೂರ್ವ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಲೊಖಂಡೆ ಸ್ನೇಹಲ್ ಸುಧಾಕರ್, ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್, ಕಾರ್ಯಪಾಲಕ ಅಭಿಯಂತರ ಅಮೃತಾ ಸಾಯಿ, ಎಇಇ ದೇವರಾಜ, ಹಿರಿಯ ಅಧಿಕಾರಿಗಳಾದ ನಾಗಾಂಜನೇಯ, ಸಂದೇಶ್ ಶೆಟ್ಟಿ ಹಾಗೂ ಚಂದ್ರಶೇಖರ್ ನಾಯಕ್ ಉಪಸ್ಥಿತರಿದ್ದರು.
ಸಮನ್ವಯದೊಂದಿಗೆ ಭೂಸ್ವಾಧೀನ ಕೈಗೊಳ್ಳಿ:
ಬೆಂಗಳೂರು ಜಲಮಂಡಳಿ, ಗೇಲ್ ಇಂಡಿಯಾ, ಕಂದಾಯ ಇಲಾಖೆ, ಭೂಮಾಪನ ಇಲಾಖೆ ಹಾಗೂ ಇತರ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಜಂಟಿ ಸ್ಥಳ ಪರಿಶೀಲನೆ ನಡೆಸುವ ಮೂಲಕ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಅಡೆತಡೆಗಳಿಲ್ಲದೆ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಜಾರಿಗೊಳಿಸಲು ಸಮನ್ವಯದೊಂದಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.