22ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ 
ಬೆಂಗಳೂರು

ಜೆಡಿಎಸ್ ಎರಡು ಹಂತದ ಕಾರ್ಯತಂತ್ರಕ್ಕೆ ಸಿದ್ಧತೆ

ಮೃತ್ಯುಂಜಯ ಕಪಗಲ್

ಪ್ರಮುಖ ಮುಖ್ಯಾಂಶಗಳು

  • 22ರಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
  • ರಾಜ್ಯದ ಕಾರ್ಯಚಟುವಟಿಕೆಗಳಿಗೆ ಅಂತಿಮ ರೂಪ
  • ಮುಂದಿನ ಚುನಾವಣೆಗಳಿಗೆ ಕಾರ್ಯಕರ್ತರ ಸಜ್ಜು
ಬೆಂಗಳೂರು: ಬೆಳ್ಳಿ ಹಬ್ಬ ಸಂಭ್ರಮದಲ್ಲಿರುವ ಜೆಡಿಎಸ್, ಇದೇ ಉಮೇದಿಯನ್ನು ತಳಮಟ್ಟದ ಕಾರ್ಯಕರ್ತರಲ್ಲಿ ತುಂಬಿ, ಮುಖಂಡರಲ್ಲಿ ಒಗ್ಗಟ್ಟು ಮೂಡಿಸಲು ಹಲವು ಸಭೆಗಳು ಹಾಗೂ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ. JDS party
ಪಕ್ಷದ ರಾಜ್ಯ ಕಚೇರಿಯಲ್ಲಿ 22ರಂದು ರಾಷ್ಟ್ರೀಯ ಪರಿಷತ್, ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಳು ನಡೆಯಲಿವೆ. ರಾಷ್ಟ್ರ, ವಿವಿಧ ರಾಜ್ಯಗಳ ವಿದ್ಯಮಾನ, ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚಿಸಿ, ಮುಂದಿನ ಹೆಜ್ಜೆಯ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳಲಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪಕ್ಷದ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಷ್ಟ್ರೀಯ ಪ್ರತಿನಿಧಿಗಳು, ಕಾರ್ಯಕಾರಿಣಿ ಸದಸ್ಯರು, ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರು ಸೇರಿ ಐದು ಸಾವಿರಕ್ಕೂಹೆಚ್ಚು ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ.
ರಾಜ್ಯದಲ್ಲಿ ಪಕ್ಷದ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆ ಬಹುತೇಕ ಅಂತಿಮ ಘಟಕ್ಕೆ ತಲುಪಿದೆ. ಉಳಿದ ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಗೆ ರಾಜ್ಯ ಪದಾಧಿಕಾರಿ, ಆಯಾ ಜಿಲ್ಲೆಯ ಹಾಲಿ-ಮಾಜಿ ಶಾಸಕರ ನೇತೃತ್ವದ ಸಮಿತಿಗೆ ಜವಾಬ್ದಾರಿ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂರು ತಿಂಗಳ ಕಾರ್ಯಕ್ರಮ

ಬೆಳ್ಳಿ ಹಬ್ಬದ ಸಡಗರ-ಸಂಭ್ರಮದ ಭಾಗವಾಗಿ ಮುಂದಿನ ಮೂರು ತಿಂಗಳ ಕಾಲ ಜಿಲ್ಲಾವಾರು ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಾಯಕತ್ವ ಬಯಸಿದೆ.
ಅನೇಕ ಬದಲಾವಣೆಗಳು, ಅನೇಕ ಮುಖಂಡರ ನಿರ್ಗಮನ, ಹೊಸಬರ ಆಗಮನ, ನಾಯಕರಲ್ಲಿ ಮನಸ್ತಾಪದ ನಡುವೆ ತಳಹಂತದ ಕಾರ್ಯಕರ್ತರ ಪಡೆ, ಜನರ ಒಲವು ಗಟ್ಟಿಯಾಗಿದೆ ಎಂದೂ ಗೊತ್ತಿದೆ.
ಈ ಹಿನ್ನೆಲೆಯಲ್ಲಿ ಮುಖಂಡರಲ್ಲಿ ಒಗ್ಗೂಡಿಸಿ ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹೆಣೆಯಲಾಗುತ್ತಿದ್ದು, 22ರ ಸಭೆಯಲ್ಲಿ ಇದಕ್ಕೊಂದು ಅಂತಿಮ ರೂಪ ಹಾಗೂ ಶೀರ್ಷಿಕೆಯೂ ಸಿಗಲಿದೆ.
ಮುಂಬರುವ ನಗರ, ಪಟ್ಟಣ-ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಘಟನೆಯನ್ನು ಸಜ್ಜು ಮಾಡುವುದು, ಕಾರ್ಯಕರ್ತರ ಚುನಾವಣೆಗಾಗಿ ರಾಜ್ಯ, ಜಿಲ್ಲಾಮಟ್ಟದ ನಾಯಕರಿಗೆ ಹೊಣೆ ನಿಗದಿಯಾಗಲಿದೆ ಎಂದು ಪಕ್ಷದ ಮೂಲಗಳು ವಿವರಿಸಿವೆ.