High court 
ಬೆಂಗಳೂರು

ಕೂಲಿ ಮಾಡಿಯಾದರೂ ಕುಟುಂಬ ಸಾಕಬೇಕು| High court

ಪ್ರಮುಖ ಮುಖ್ಯಾಂಶಗಳು

  • ನಿರುದ್ಯೋಗಿ ಎಂದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ
  • ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್​
ಬೆಂಗಳೂರು: ದೈಹಿಕ ಶ್ರಮ ಬೇಡುವ ಕೆಲಸವನ್ನು (ಕೂಲಿ) ಮಾಡಿಯಾದರೂ ತನ್ನ ಕುಟುಂಬವನ್ನು ಸಾಕುವುದು ಪತಿಯ ಪರಮ ಕರ್ತವ್ಯ ಎಂಬ ಸುಪ್ರೀಂ ಕೋರ್ಟ್​ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್​, 21 ಲಕ್ಷ ರೂಪಾಯಿ ಜೀವನಾಂಶ ಬಾಕಿ ಉಳಿಸಿಕೊಂಡಿರುವ ಪತಿಯ ಅರ್ಜಿಯನ್ನು ವಜಾಗೊಳಿಸಿದೆ.
ಪತ್ನಿ ಮತ್ತು ಮಗನಿಗೆ ಮಾಸಿಕ ತಲಾ 8 ಸಾವಿರ ರೂಪಾಯಿ ಜೀವನಾಂಶ ನೀಡಲು ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೈಸೂರು ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ಯಾವುದೇ ಕೆಲಸ ಅಥವಾ ಆದಾಯವಿಲ್ಲ ಎಂಬ ಕಾರಣ ನೀಡಿ ಜೀವನಾಂಶ ನೀಡುವ ಜವಾಬ್ದಾರಿಯಿಂದ ಆರೋಗ್ಯವಂತ ಪತಿಯು ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪತಿಯ ಪರ ವಾದಿಸಿದ ವಕೀಲರು, ಅರ್ಜಿದಾರರು ಪ್ರಸ್ತುತ ನಿರುದ್ಯೋಗಿಯಾಗಿದ್ದು, ಯಾವುದೇ ಆದಾಯದ ಮೂಲಗಳಿಲ್ಲ. ಅಲ್ಲದೆ, ಪತ್ನಿಯು ಕಾನೂನು ಪದವೀಧರೆಯಾಗಿದ್ದು, ವಕೀಲ ವೃತ್ತಿ ಮಾಡುತ್ತಿರುವುದರಿಂದ ಪತಿಗಿಂತ ಹೆಚ್ಚು ಸಂಪಾದಿಸುತ್ತಿದ್ದಾರೆ. ಮಗನಿಗೂ ಈಗ 20 ವರ್ಷ ತುಂಬಿರುವುದರಿಂದ ಹಳೆಯ ಜೀವನಾಂಶ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
ಆದರೆ ಪತ್ನಿ ಖುದ್ದಾಗಿ ಹಾಜರಾಗಿ ವಾದ ಮಂಡಿಸಿ, ತನಗೆ ತೀವ್ರ ಅನಾರೋಗ್ಯ ಇರುವುದರಿಂದ ಒಂದೂ ದಿನವೂ ವಕೀಲ ವೃತ್ತಿ ಮಾಡಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಮಗನ ಪರ ವಾದಿಸಿದ ವಕೀಲರು, ಅರ್ಜಿದಾರರು ನ್ಯಾಯಾಲಯದ ಆದೇಶವನ್ನು ಪಾಲಿಸದೆ ಈವರೆಗೆ 21 ಲಕ್ಷ ಜೀವನಾಂಶ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಪತಿಯ ಈ ನಡವಳಿಕೆಯನ್ನು ಖಂಡಿಸಿದ ನ್ಯಾಯಪೀಠ, ಬಾಕಿ ಹಣ ಪಾವತಿಸದೆ ಈ ಅರ್ಜಿ ಸಲ್ಲಿಸಲು ಯಾವುದೇ ಅರ್ಹತೆ ಇಲ್ಲ ಎಂದು ವಜಾಗೊಳಿಸಿದೆ.

ಕೆಲಸ ಹುಡುಕಬೇಕು:

ಪತಿಗೆ ಉದ್ಯೋಗವಿಲ್ಲದಿದ್ದರೆ ಆತ ಹೊಸ ಕೆಲಸ ಹುಡುಕಬೇಕು. ದೈಹಿಕ ಶ್ರಮ ಪಟ್ಟಾದರೂ ಹೆಂಡತಿ, ಮಕ್ಕಳನ್ನು ಸಾಕುವುದು ಆತನ ಕರ್ತವ್ಯ. ಅವರನ್ನು ಬೀದಿಗೆ ತಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್​ ಪ್ರಕರಣವೊಂದರಲ್ಲಿ ನೀಡಿರುವ ತೀರ್ಪನ್ನು ತನ್ನ ಆದೇಶದಲ್ಲಿ ನ್ಯಾಯಪೀಠ ಉಲ್ಲೇಖಿಸಿದೆ.