- ಜಿಕೆವಿಕೆಯಲ್ಲಿ ಆಯೋಜಿಸಿದ್ದ ರೈತ ಸಂತೆ ವೇಳೆ ಗಮನಸೆಳೆದ ಹೊಸ ಮಷೀನ್
- ನೈಸರ್ಗಿಕ ಬೆಲ್ಲದಿಂದ ತಯಾರಿಸಿದ ಗೋಧಿ ಪಾಯಸ ಸವಿದ ಜನ
ಬೆಂಗಳೂರು: ಅವರೆಕಾಳು ಸಾರಿನ ಘಮಕ್ಕೆ ಮನಸೋಲದವರಿಲ್ಲ. ಅದರಲ್ಲೂ ರಾಗಿಮುದ್ದೆಯನ್ನು ಹಿಚು(ದು)ಕಿದ ಅವರೆಬೇಳೆ ಸಾರಿನೊಂದಿಗೆ ಸವಿಯುವ ಊಟ ನಾಲಿಗೆಯಲ್ಲಿ ನೀರೂರಿಸುತ್ತದೆ. ಆದರೆ, ಅದೇ ಅವರೆಕಾಳನ್ನು ಹಿಚುಕಲು ಹೆಚ್ಚಿನ ಮಂದಿ ತಿಣುಕಾಡುವುದುಂಟು. ಈ ಸಮಸ್ಯೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು (ಯುಎಎಸ್-ಬಿ) ಆವಿಷ್ಕರಿಸುವ ಕಿರು ಯಂತ್ರವು ಪರಿಹಾರ ಒದಗಿಸಲಿದೆ.
ವಿವಿಯ ಕ್ಯಾಂಪಸ್ ಜಿಕೆವಿಕೆಯಲ್ಲಿ ಶನಿವಾರ ಆಯೋಜಿಸಿದ್ದ ರೈತ ಸಂತೆ ವೇಳೆ ಅವರೆಕಾಳು ಸಿಪ್ಪೆ ತೆಗೆಯುವ ಯಂತ್ರವು ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಹೆಚ್ಚಿನ ಶ್ರಮವಿಲ್ಲದೆ ಆರಾಮವಾಗಿ ಸಿಪ್ಪೆ ತೆಗೆಯುವ ಈ ಯಂತ್ರವನ್ನು ಯಾರು ಬೇಕಾದರೂ ಸುಲಭವಾಗಿ ಬಳಸಬಹುದು. ಕಾಳುಗಳು ಕೂಡ ಪುಡಿಯಾಗದೆ ಇಡಿಯಾಗಿ ಸಿಗುವುದರಿಂದ ನೇರವಾಗಿ ಸಾಂಬರಿಗೆ ಬಳಸಿಕೊಳ್ಳಲು ಅವಕಾಶ ಇರುವುದರಿಂದ ನಾಗರಿಕರು ಯಂತ್ರದ ಬಗ್ಗೆ ಮೆಚ್ಚಗೆಯ ಮಾತಗಳನ್ನಾಡಿದರು.
ಜಿಕೆವಿಕೆಯ ಸಂಸ್ಕರಣೆ ಹಾಗೂ ಆಹಾರ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ರೂಪಿಸಿರುವ ಈ ಕಿರು ಯಂತ್ರವು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಇದರ ಕಾರ್ಯಾಚರಣೆಯನ್ನು ಮೇಲ್ದೆರ್ಜೆಗೇರಿಸಿ ಮುಂಬರುವ ಕೃಷಿ ಮೇಳದ ವೇಳೆಗೆ ಅಧಿಕೃತವಾಗಿ ಬಿಡುಗಡೆ ಮಾಡುವ ಆಶಯವನ್ನು ಹೊಂದಲಾಗಿದೆ. ಇತ್ತೀಚಿಗಷ್ಟೇ ವಿವಿಯಿಂದ ಅವರೆಕಾಯಿ ಸುಳಿಯುವ ಕಿರು ಯಂತ್ರವನ್ನು ಆವಿಷ್ಕರಿಸಿ ಬಳಕೆಗೆ ತರುವಲ್ಲಿ ಯಶಸ್ವಿಯಾಗಿದೆ.
ಈ ಕಿರು ಯಂತ್ರವು ಸಣ್ಣ ಸಿಲಿಂಡರ್ ಆಕೃತಿಯಂತಿದೆ. ಇದರೊಳಗೆ ರೋಲರ್ ಅಳವಡಿಸಿದ್ದು, ಕಾನ್‌ಕೇವ್ ಶೀಟ್‌ಅನ್ನು ಬಳಸಿಕೊಳ್ಳಲಾಗಿದೆ. ಯಂತ್ರದ ಮೇಲಿಂದ ಹಸಿ ಅವರೆಕಾಳುಗಳನ್ನು ಹಾಕಿ ರೋಲರ್‌ನ ಹಿಡಿಯನ್ನು ಕೈಯಿಂದ ತಿರುಗಿಸಿದರೆ ಮಷೀನ್ ಒಳಗೆ ಉದ್ದಕ್ಕೂ ಇರುವ ಸಣ್ಣ ಖಾಲಿ ಜಾಗದಲ್ಲಿ ಕಾಳುಗಳು ನುಸುಳಿಕೊಂಡು ಹೋರಹೋಗುತ್ತದೆ. ಈ ವೇಳೆ ಸಿಪ್ಪೆ ಒಂದುಕಡೆ ಕೆಳಗೆ ಬಿದ್ದರೆ, ಇನ್ನೊಂದೆಡೆ ಕಾಳುಗಳು ಶೇಖರಣೆಯಾಗುತ್ತವೆ. ಕಾಳುಗಳು ಒಡೆಯದ ಕಾರಣ ಅಷ್ಟೂ ಹಸಿ ಅವರೆಕಾಳನ್ನು ಅಡುಗೆಗೆ ಬಳಸಿಕೊಳ್ಳಬಹುದಾಗಿದೆ.
ವಿದ್ಯಾರ್ಥಿಗಳು ರೂಪಿಸುತ್ತಿರುವ ಈ ಕಿರು ಯಂತ್ರವು ಶೇ.82ರಷ್ಟು ಸಫಲತೆ ಕಂಡಿದೆ. ಇದನ್ನು ಶೇ.90ಕ್ಕೆ ಏರಿಸಲು ಪ್ರಯೋಗ ನಡೆದಿದೆ. ಒಂದೇ ಗಾತ್ರದ ಹಸಿ ಅವರೆಕಾಳನ್ನು ಬಳಸಿದರೆ ಪೂರ್ಣ ಫಲಿತಾಂಶ ಸಿಗುತ್ತದೆ. ಕೆಲವೊಂದು ಕಾಳುಗಳನ್ನು ಮಾತ್ರ ಒಡೆದುಹೋಗಬಹುದು. ಮುಂದಿನ ಕೃಷಿ ಮೇಳದ ವೇಳೆಗೆ ಇನ್ನಷ್ಟು ಸುಧಾರಣೆಯೊಂದಿಗೆ ಯಂತ್ರವನ್ನು ಜನರಿಗೆ ತಲುಪಿಸುವ ಚಿಂತನೆ ಇದೆ. ಜತೆಗೆ ಭವಿಷ್ಯದಲ್ಲಿ ವಿದ್ಯುತ್‌ಚಾಲಿತ ಯಂತ್ರವನ್ನಾಗಿ ಮೇಲ್ದರ್ಜೆಗೇರಿಸಿ ವಾಣಿಜ್ಯ ಬಳಕೆಗೂ ಅವಕಾಶ ಮಾಡಿಕೊಡುವ ಉದ್ದೇಶ ಇದೆ ಎಂದು ಸಂಸ್ಕರಣೆ ಹಾಗೂ ಆಹಾರ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕೃಷ್ಣಮ್ಮ ಎಚ್ ತಿಳಿಸಿದರು.
ನೈಸರ್ಗಿಕ ಬೆಲ್ಲದ ಗೋಧಿ ಪಾಯಸ
ಈ ಬಾರಿಯ ರೈತಸಂತೆಯಲ್ಲಿ ಆರೋಗ್ಯ ಸಂಬಂಧಿ ಪೌಷ್ಟಿಕತೆ ಹೆಚ್ಚಿಸುವ ತಿನಿಸು, ಪೇಯಗಳು, ಸಾವಯವ ಹಾಗೂ ಮೌಲ್ಯವರ್ಧನೆ ಮಾಡಿರುವ ಉತ್ಪನ್ನಗಳು ಪ್ರದರ್ಶಿತಲಾಗಿತ್ತು. ನೈಸರ್ಗಿಕ ಬೆಲ್ಲದಿಂದ ತಯಾರಿಸಿದ ಗೋಧಿ ಪಾಯಸವನ್ನು ಹಲವು ಮಂದಿ ಸವಿದರು. ಹೊಸ ರುಚಿಯಾಗಿ ಕಂಡು ನಾಗರಿಕರು ಗೋಧಿ ಪಾಯಸ ಮಾಡುವ ವಿಧಾನದ ಬಗ್ಗೆ ಮಾಹಿತಿ ಪಡೆದರು. ಮೇಘಾಲಯ ಮೂಲದ ಅರಿಶಿನವನ್ನು ನಮ್ಮ ಮಲೆನಾಡಿನ ಪ್ರದೇಶದಲ್ಲಿ ಬೆಳೆದಿದ್ದನ್ನು ಸಂತೆಯಲ್ಲಿ ಮಾರಾಟ ಮಾಡಲಾಯಿತು. ವಿಶಿಷ್ಟ ಸುವಾಸನೆ ಹೊಂದಿರುವ ಈ ಅರಿಶಿನ ಗಾಢ ಹಳದಿ ಬಣ್ಣ ಹೊಂದಿದೆ. ಔಷಧೀಯ ಗುಣವನ್ನು ಹೊಂದಿರುವ ಈ ಅರಿಶಿನವನ್ನು ಜನ ಮುಗದಿಬಿದ್ದು ಖರೀದಿಸಿದರು.