High court 
ಬೆಂಗಳೂರು

ಬೀದಿ ಬದಿ ವ್ಯಾಪಾರಿಗಳಿಗೆ ಮಧ್ಯಂತರ ರಕ್ಷಣೆ| High court

ಪ್ರಮುಖ ಮುಖ್ಯಾಂಶಗಳು

  • ಕೆ.ಆರ್​. ಮಾರುಕಟ್ಟೆಯ 15 ಮಂದಿ ಸಲ್ಲಿಸಿರುವ ಅರ್ಜಿ
  • ಆ.31ರ ತನಕ ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್​

ಬೆಂಗಳೂರು: 

ಕೆ.ಆರ್​. ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ತಮ್ಮನ್ನು ತರಾತುರಿಯಲ್ಲಿ ತೆರವುಗೊಳಿಸಬಾರದು ಎಂದು ಕೋರಿ ಮಂಜುನಾಥ್​ ಸೇರಿ 15 ಮಂದಿ ಬೀದಿ ಬದಿ ವ್ಯಾಪಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಆ.31ರ ತನಕ ಮಧ್ಯಂತರ ರಕ್ಷಣೆ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್​ಪ್ರಸಾದ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ನೀಡಿದೆ. ಆ.31ರ ತನಕ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಜಿಬಿಎ ಅಧಿಕಾರಿಗಳಿಗೆ ಸೂಚಿಸಿದೆ. 
ವ್ಯಾಪಾರಿಗಳು ಯಾವುದೇ ತಾತ್ಕಾಲಿಕ ಅಥವಾ ಶಾಶ್ವತ ರಚನೆಗಳನ್ನು ನಿರ್ಮಿಸಬಾರದು ಹಾಗೂ ಆ್ಯಂಬುಲೆನ್ಸ್​, ಅಗ್ನಿಶಾಮಕ ದಳ ಅಥವಾ ಪೊಲೀಸ್​ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟುಮಾಡಬಾರದು ಎಂಬ ಕಠಿಣ ಷರತ್ತಿನ ಮೇಲೆ ಈ ರಕ್ಷಣೆ ನೀಡಲಾಗಿದೆ. ಅಲ್ಲದೆ, ಪ್ರಸ್ತುತ ಸ್ಥಳದಲ್ಲಿ ವ್ಯಾಪಾರಿಗಳಿಗೆ ಮುಂದುವರಿಯಲು ಅವಕಾಶವಿದೆಯೇ ಮತ್ತು ಅವರು ಸಮೀಕ್ಷಾ ಪ್ರಕ್ರಿಯೆಗೆ ಅರ್ಹರೇ ಎಂಬ ಬಗ್ಗೆ ಸ್ಪಷ್ಟ ನಿಲುವು ತಿಳಿಸುವಂತೆ ಜಿಬಿಎಗೆ ಸೂಚಿಸಿದೆ. 

ಪರವಾನಗಿ ನವೀಕರಣಕ್ಕೆ ಮನವಿ:


ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವ್ಯಾಪಾರಿಗಳು 2017ರಲ್ಲೇ ಪರವಾನಗಿ ಪಡೆದು ಮಾರುಕಟ್ಟೆಯ ತೆರೆದ ಪ್ರದೇಶಗಳಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ ಎಂದರು. 2014ರ ಬೀದಿ ಬದಿ ವ್ಯಾಪಾರಿಗಳ ಕಾಯ್ದೆ ಅಡಿಯಲ್ಲಿ ಪರವಾನಗಿ ನವೀಕರಣಕ್ಕೆ ತಾವು ಅರ್ಹರಾಗಿದ್ದು, ನವೀಕರಣ ಅರ್ಜಿಗಳು ಇತ್ಯರ್ಥಗೊಳ್ಳುವ ತನಕ ತೆರವುಗೊಳಿಸುವಂತಿಲ್ಲ ಎಂದು ವಾದಿಸಿದ್ದಾರೆ. 

ℹ️

ಸಾರ್ವಜನಿಕ ಹಿತಾಸಕ್ತಿ ಕ್ರಮ 

ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಪಾದಚಾರಿ ಮಾರ್ಗಗಳಲ್ಲಿನ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ತಾತ್ಕಾಲಿಕ ಟೌನ್​ ವೆಂಡಿಂಗ್​ ಸಮಿತಿ ಮೂಲಕ ಹೊಸದಾಗಿ ಸಮೀಕ್ಷೆ ನಡೆಸಿ, ವ್ಯಾಪಾರಿಗಳಿಗೆ ಪರವಾನಗಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಬಿಎ ತಿಳಿಸಿದೆ.