conduct-sir-properly 
ಬೆಂಗಳೂರು

ಎಸ್‌ಐಆರ್ ಸಮರ್ಪಕವಾಗಿ ನಡೆಸಲು ಸೂಚನೆ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಕರ್ತವ್ಯಕ್ಕೆ ಗೈರಾಗುವ ಬಿಎಲ್‌ಒಗಳ ವಿರುದ್ಧ ಕ್ರಮಕ್ಕೆ ನಿರ್ದೇಶನ
  • 5 ಪಾಲಿಕೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯ ಆಯುಕ್ತ
ಬೆಂಗಳೂರು: ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಸಮರ್ಪಕವಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಬಿಎ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಎಸ್‌ಐಆರ್ ಸಂಬಂಧ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯ ಆಯುಕ್ತರು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಕೇಂದ್ರ, ಉತ್ತರ, ದಕ್ಷಿಣ ಹಾಗೂ ನಗರ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಗೈರಾದವರಿಗೆ ನೋಟೀಸ್ ಜಾರಿಗೊಳಿಸಿ:

ತಮ್ಮ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಕೊರತೆ ಇದ್ದಲ್ಲಿ ಕೂಡಲೇ ನಿಯೋಜನೆ ಮಾಡಿಕೊಳ್ಳಬೇಕು. ಕರ್ತವ್ಯಕ್ಕೆ ಹಾಜರಾಗದ ಬಿಎಲ್ಒಗಳಿಗೆ ಕೂಡಲೇ ನೋಟೀಸ್ ಜಾರಿಗೊಳಿಸಬೇಕು. ನೋಟೀಸ್‌ಗೆ ಪ್ರತಿಕ್ರಿಯೆ ನೀಡದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಖಡಕ್ ಸೂಚನೆ ನೀಡಿದರು.
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತಂತೆ ಪ್ರತಿದಿನ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಎಲ್ಲಿಯೂ ಯಾವುದೇ ರೀತಿಯ ಲೋಪದೋಷ ಆಗದಂತೆ ಪ್ರಕ್ರಿಯೆ ಕೈಗೊಳ್ಳಬೇಕು. ಎಲ್ಲ ಬೂತ್ ಮಟ್ಟದ ಅಧಿಕಾರಿಗಳು ಜೂ.16ರ ಒಳಗಾಗಿ ಮತದಾರರ ಪೂರ್ವ ಮ್ಯಾಪಿಂಗ್‌ಗೆ ಸಂಬಂಧಿಸಿ ಶೇ.100 ಪ್ರಗತಿ ಸಾಧಿಸಬೇಕು. ಜೂ.20ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದ್ದು, ಈ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದು ಮುಖ್ಯ ಆಯುಕ್ತ ಸೂಚನೆ ನೀಡಿದರು.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸುಷಮಾ ಗೋಡಬೋಲೆ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಪಿ.ಸುನೀಲ್ ಕುಮಾರ್, ಕೆ.ಎನ್. ರಮೇಶ್, ಜಗದೀಶ್, ಕಂದಾಯ ಅಪರ ಆಯುಕ್ತರಾದ ಕವಿತಾ, ರಂಗನಾಥ್, ಪಲ್ಲವಿ, ಸಹಾಯಕ ಆಯುಕ್ತ ಎಂ.ಶ್ರೀನಿವಾಸ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಎಸ್‌ಐಆರ್ ವೇಳಾಪಟ್ಟಿ:

ಜೂ.20ರಿಂದ 29: ಎಸ್‌ಐಆರ್‌ಗೆ ಸಿದ್ಧತೆ, ತರಬೇತಿ, ಮುದ್ರಣ
ಜೂ.30-ಜು.29: ಮತದಾರರ ಮನೆಗಳಿಗೆ ಬಿಎಲ್ಒಗಳ ಭೇಟಿ
ಜು.29: ಮತದಾನ ಕೇಂದ್ರಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ
ಆ.5: ಎಸ್‌ಐಆರ್ ಭಾಗವಾಗಿ ಮತದಾರರ ಕರಡು ಪಟ್ಟಿ ಪ್ರಕಟ
ಆ.5ರಿಂದ ಸೆ.4: ಆಕ್ಷೇಪಣೆ ಸಲ್ಲಿಸಲು ಅವಕಾಶ
ಆ.5ರಿಂದ ಅ.3: ನೋಟೀಸ್, ವಿಲೇವಾರಿ, ಆಕ್ಷೇಪಣೆ
ಅ.7: ಅಂತಿಮ ಮತದಾರರ ಪಟ್ಟಿ ಪ್ರಕಟ