- ಕೆಂಗೇರಿ ವಿಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರಾಮರ್ಶೆ
- ಪಶ್ಚಿಮ ನಗರ ಪಾಲಿಕೆ ಆಯುಕ್ತರಿಂದ ಸ್ಥಳ ಪರಿಶೀಲನೆ
ಬೆಂಗಳೂರು: ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ಹಾಗೂ ಕ್ಯಾಪಿಟಲ್ ಸಪೋರ್ಟ್ ಫಾರ್ ಸ್ಪೆಷಲ್ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ (ಸಿಎಸ್‌ಎಸ್‌ಐಪಿ) ಕಾಮಗಾರಿಗಳಿಗೆ ವೇಗ ನೀಡಿ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೆಂಗೇರಿ ವಿಭಾಗದ ಹೇರೋಹಳ್ಳಿ ಉಪವಿಭಾಗದ ಮಾಗಡಿ ರಸ್ತೆ ಸಮೀಪದ ಜನಪ್ರಿಯ ಅಪಾರ್ಟ್‌ಮೆಂಟ್-ಮಾಧವನಗರ ಜಲಮಂಡಳಿ ಪೈಪ್‌ಲೈನ್ ರಸ್ತೆಯಲ್ಲಿ ಕ್ಯಾಪಿಟಲ್ ಸಪೋರ್ಟ್ ಫಾರ್ ಸ್ಪೆಷಲ್ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ (ಸಿಎಸ್‌ಎಸ್‌ಐಪಿ) ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು. ಇದೇ ವೇಳೆ ಪ್ರಮುಖ ಕಾಮಗಾರಿಗಳನ್ನು ನಿಗದಿಯಂತೆ ಮುಕ್ತಾಯಗೊಳಿಸಲು ಆಗಾಗ್ಗೆ ಸ್ಥಳಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕು ಎಂದು ಆಯುಕ್ತರು ನಿರ್ದೇಶಿಸಿದರು.
ರಾಜಕಾಲುವೆ ಗೋಡೆ ಎತ್ತರಿಸಲು ಸೂಚನೆ:
ಹೇರೋಹಳ್ಳಿ ಕೆರೆವರೆಗಿನ ರಾಜಕಾಲುವೆಯಿಂದ ಮಳೆ ನೀರು ಉಕ್ಕಿ ಪ್ರವಾಹ ಉಂಟಾಗದಂತೆ ಮಳೆನೀರುಗಾಲುವೆಯ ಗೋಡೆ ಎತ್ತರಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಭಿಯಂತರರಿಗೆ ಸೂಚಿಸಿದರು.
ಈ ವೇಳೆ ಕಾರ್ಯಪಾಲಕ ಅಭಿಯಂತರ ನಾಗರಾಜ್ ಸಿಂಗ್ರಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.
ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ
ಪಾಲಿಕೆ ವ್ಯಾಪ್ತಿಯ ಸಿಎಂಐಡಿಪಿ ಹಾಗೂ ಸಿಎಸ್‌ಎಸ್‌ಐಪಿ ಸಂಬಂಧಿಸಿದಂತೆ ಕಾಮಗಾರಿಗಳ ಪ್ರಗತಿ ಕುರಿತು ಕಾಮಗಾರಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಆಯುಕ್ತರು ಪರಿಶೀಲನೆ ಸಭೆ ನಡೆಸಿದರು. ಪಾಲಿಕೆಯ ಎಲ್ಲ ವಿಭಾಗಗಳ ವ್ಯಾಪ್ತಿಯಲ್ಲಿನ ವಾರ್ಡ್ ರಸ್ತೆಗಳು ಹಾಗೂ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳ ಕಾಮಗಾರಿಗಳ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಆಯುಕ್ತರು, ಒಂದು ತಿಂಗಳ ಒಳಗಾಗಿ ಪಾದಚಾರಿ ಮಾರ್ಗ, ಡ್ರೇನ್ ಸೇರಿ ಎಲ್ಲ ಸಿವಿಲ್ ಕೆಲಸಗಳನ್ನು ಮುಗಿಸುವಂತೆ ಸೂಚಿಸಿದರು.