ಬೆಂಗಳೂರು: ಅರ್ಜಿಯಲ್ಲಿ ಕೇಳಲಾಗುವ ಎಲ್ಲ ಮಾಹಿತಿಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಬಹಿರಂಗಪಡಿಸಬೇಕು. ಮಹತ್ವದ ಮಾಹಿತಿಗಳನ್ನು ಮುಚ್ಚಿಟ್ಟು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಾತ್ರಕ್ಕೆ ನೇಮಕಾತಿಗೆ ಅರ್ಹತೆ ದೊರೆಯುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸರ್ಕಾರಿ ಉದ್ಯೋಗದಲ್ಲಿರುವುದನ್ನು ಬಹಿರಂಗಪಡಿಸದೆ ಕೆಪಿಎಸ್ಸಿ ನಡೆಸುವ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ "ಎ' ಮತ್ತು "ಬಿ' ಹುದ್ದೆಗೆ ಅರ್ಜಿ ಸಲ್ಲಿಸಿ ಪರೀೆಯಲ್ಲಿ ಆಯ್ಕೆಯಾಗಿದ್ದ ಪಿಎಸ್ಐ ಎಂ. ಗೀತಾ ಎಂಬುವರ ಉಮೇದುವಾರಿಕೆ ರದ್ದುಪಡಿಸಿದ್ದ ಕೆಪಿಎಸ್ಸಿ ಆದೇಶವನ್ನು ಎತ್ತಿಹಿಡಿದಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಕೆಪಿಎಸ್ಸಿ ಕ್ರಮ ಪ್ರಶ್ನಿಸಿ ಗೀತಾ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್ಎಟಿ) ಮೊರೆ ಹೋಗಿದ್ದರು. ಆನ್ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಪ್ಪನ್ನು ಸರಿಪಡಿಸಲು ಅವಕಾಶವಿರಲಿಲ್ಲ. ಹೀಗಾಗಿ ಸರ್ಕಾರಿ ನೌಕರರಾಗಿರುವುದನ್ನು ನಮೂದಿಸದೇ ಇರುವುದು ಅಜಾಗರೂಕತೆಯಿಂದಾದ ತಪ್ಪು ಎಂದು ಪರಿಗಣಿಸಿದ್ದ ಕೆಎಸ್ಎಟಿ, ಅವರ ಅರ್ಜಿಯನ್ನು ಪುರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಕೆಪಿಎಸ್ಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕೆಎಸ್ಎಟಿ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕೋರ್ಟ್ ಅವಲೋಕನ:
ಸರ್ಕಾರಿ ನೌಕರರಾಗಿರುವುದನ್ನು ಅರ್ಜಿ ಸಲ್ಲಿಸುವ ವೇಳೆ ಬಹಿರಂಗಪಡಿಸದೆ, ಬಳಿಕ ದಾಖಲೆ ಪರಿಶೀಲನೆ ವೇಳೆ ಮಾಹಿತಿ ನೀಡಿದ ಅಭ್ಯರ್ಥಿಯು ಪರೀೆಯಲ್ಲಿ ಯಶಸ್ವಿಯಾದರೂ, ಹುದ್ದೆ ನೀಡಲಾಗದು. 2007ರಿಂದ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗೆ ಮಾಹಿತಿ ಬಹಿರಂಗಪಡಿಸದೆ ಇರುವುದರಿಂದಾಗುವ ಪರಿಣಾಮದ ಬಗ್ಗೆ ಅರಿವಿರಲಿಲ್ಲ ಎಂದು ಹೇಳಲಾಗದು. ಅದರಲ್ಲೂ ಪರೀೆಗೆ ಹಾಜರಾಗಲು ಸಕ್ಷಮ ಪ್ರಾಧಿಕಾರದಿಂದ ಎನ್ಒಸಿ ಪಡೆದಿದ್ದರು. ಹೀಗಿದ್ದರೂ ಪ್ರಾಥಮಿಕ ಮತ್ತು ಮಖ್ಯ ಪರೀೆಯ ಅರ್ಜಿಗಳಲ್ಲಿ ಮಾಹಿತಿ ಮುಚ್ಚಿಟ್ಟಿರುವುದು ಗಂಭೀರ ಸಂಗತಿ. ಆದ್ದರಿಂದ ಅವರು ಮೊದಲು ಕೆಲಸ ಮಾಡಿದ ಸ್ಥಳದಲ್ಲಿಯೇ ಪರೀಕ್ಷಾ ಕೇಂದ್ರ ಸಿಕ್ಕಿದೆ. ಇದು ಪರೀಕ್ಷಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಅವಲೋಕನ ಮಾಡಿದೆ.
440 ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ "ಎ' ಮತ್ತು "ಬಿ' ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್ಸಿ 2015ರ ಜ.22ರಂದು ಅಧಿಸೂಚನೆ ಹೊರಡಿಸಿತ್ತು. 2007ರಿಂದ ಸರ್ಕಾರಿ ನೌಕರಿಯಲ್ಲಿದ್ದ ಪಿಎಸ್ಐ ಗೀತಾ, ಪ್ರಾಥಮಿಕ ಮತ್ತು ಮುಖ್ಯ ಪರೀೆಗಳಿಗೆ ಅರ್ಜಿ ಸಲ್ಲಿಸುವಾಗ ಸರ್ಕಾರಿ ನೌಕರಿಯ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಮುಖ್ಯ ಪರೀಕ್ಷೆಯ ಫಲಿತಾಂಶ 2016ರ ಏ. 29ರಂದು ಪ್ರಕಟಗೊಂಡಿದ್ದು, ಅದರಲ್ಲಿ ಉತ್ತೀರ್ಣರಾಗಿದ್ದರು. ಬಳಿಕ ದಾಖಲೆ ಪರಿಶೀಲನೆ ವೇಳೆ ಸರ್ಕಾರಿ ನೌಕರರಾಗಿರುವುದನ್ನು ಬಹಿರಂಗಪಡಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಪಿಎಸ್ಸಿ, 2016ರ ಜೂ.10ರಂದು ಅವರ ಉಮೇದುವಾರಿಕೆ ರದ್ದುಪಡಿಸಿತ್ತು.