- ಎಚ್‌ಬಿಆರ್ ಲೇಔಟ್‌ನಲ್ಲಿ ಕೆಪಿಟಿಸಿಎಲ್ನಿಂದ ನಿರ್ಮಾಣ
- ಸರ್ವಜ್ಞನಗರದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ
- ಕಾಚರಕನಹಳ್ಳಿ ಕೆರೆ ಪುನಃಶ್ಚೇತನ ಕಾರ್ಯ ವೀಕ್ಷಿಸಿದ ಸಚಿವರು
ಬೆಂಗಳೂರು: ಹಸಿರಿನ ತಾಣದಲ್ಲಿ ವಿವಿಧ ನಾಗರಿಕ ಸೌಲಭ್ಯಗಳನ್ನು ಒಂದೇ ಸೂರಿನಡಿ ನಿರ್ಮಿಸಿರುವ ವಿಶಿಷ್ಟ ಮಾದರಿಯ ‘ಕುವೆಂಪು ಥೀಮ್ ಪಾರ್ಕ್’ಅನ್ನು ಮಂಗಳವಾರ ಎಚ್‌ಬಿಆರ್ ಲೇಔಟ್‌ನಲ್ಲಿ ಲೋಕಾರ್ಪಣೆಗೊಂಡಿತು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿಯಲ್ಲಿ 4.65 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಥೀಮ್ ಪಾರ್ಕ್‌ನಲ್ಲಿ 1,500 ಚದರ ಅಡಿ ಪ್ರದೇಶವನ್ನು ಹಸಿರು ವಲಯವಾಗಿ ರೂಪಿಸಲಾಗಿದೆ. 100 ಮಂದಿ ಕುಳಿತುಕೊಂಡು ಕಾರ್ಯಕ್ರಮ ವೀಕ್ಷಿಸುವ ಬಯಲ ರಂಗಮಂದಿರ, 700 ಮೀ. ಉದ್ದದ ನಡಿಗೆ ಪಥ, ಧ್ವಜಸ್ಥಂಭ, ಕುಡಿಯುವ ನೀರಿನ ಘಟಕ, ಶೌಚಾಲಯ, ನಂದಿನಿ ಹಾಲಿನ ಕೇಂದ್ರ ಹಾಗೂ ಹಾಪ್‌ಕಾಮ್ಸ್ ಮಳಿಗೆಗೆ ಸ್ಥಳವಾಕಾಶ ಕಲ್ಪಿಸಲಾಗಿದೆ. ಜತೆಗೆ ಓಪನ್ ಜಿಮ್ ಸೌಲಭ್ಯ ಇದೆ.
ಲೋಕಾರ್ಪಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯ ಶಾಸಕ, ಇಂಧನ ಸಚಿವ ಕೆ.ಜೆ. ಜಾರ್ಜ್, ಕೆಪಿಟಿಸಿಎಲ್ ತನ್ನದೇ ಸ್ಥಳದಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಈ ಸುಂದರ ಪಾರ್ಕ್‌ಅನ್ನು ನಿರ್ಮಿಸಿದೆ. ಇದರಿಂದಾಗಿ ಎಚ್‌ಬಿಆರ್ ಲೇಔಟ್‌ನಲ್ಲಿ ಕುರುಚಲು ಕಾಡಿನಂತೆ ಇದ್ದ ಸ್ಥಳ ಈಗ ಆಕರ್ಷಕ ತಾಣವಾಗಿ ಮಾರ್ಪಟ್ಟು ಸಾರ್ವಜನಿಕರಿಗೆ ಖುಷಿ ನೀಡುವ ಸ್ಥಳವನ್ನಾಗಿ ಮಾರ್ಪಡಿಸಲಾಗಿದೆ ಎಂದರು.
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ:
ಕುವೆಂಪು ಥೀಮ್ ಪಾರ್ಕ್ ಲೋಕಾರ್ಪಣೆ ಬಳಿಕ ಸಚಿವರಿಬ್ಬರೂ ಸರ್ವಜ್ಞನಗರದ ವಿವಿಧಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಕೆಲವಕ್ಕೆ ಚಾಲನೆ ನೀಡಿದರು. ಎಚ್‌ಬಿಆರ್ ಬಡಾವಣೆಯ 2ನೇ ಬ್ಲಾಕ್‌ನಲ್ಲಿ ಘನತ್ಯಾಜ್ಯಕ್ಕೆ ಸಂಬಂಧಿಸಿ 2ನೇ ಹಂತದ ಕಸ ವಿಂಗಡಣಾ ಘಟಕವನ್ನು ಚಾಲನೆ ನೀಡಲಾಯಿತು. ಇದೇ ವೇಳೆ ನಾಗವಾರ ಮುಖ್ಯರಸ್ತೆಯ ವೈಟ್ ಟಾಪಿಂಗ್, ಬಾಣಸವಾಡಿ ಮುಖ್ಯರಸ್ತೆಯಲ್ಲಿ ಉದ್ದೇಶಿತ ಮಾರುಕಟ್ಟೆ ಸ್ಥಳ ಹಾಗೂ ಕಾಚರಕನಹಳ್ಳಿ ಕೆರೆ ಪುನಃಶ್ಚೇತನ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು.
ಕಾರ್ಯಕ್ರಮದಲ್ಲಿ ಉತ್ತರ ಪಾಲಿಕೆಯ ಆಯುಕ್ತ ಪಿ.ಸುನೀಲ್‌ಕುಮಾರ್, ಕೆಪಿಟಿಸಿಎಲ್ನಿ ನಿರ್ದೇಶಕ (ಯೋಜನೆ ವಿಭಾಗ) ಆರ್.ಜಯಕುಮಾರ್, ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಸರ್ವಜ್ಞನಗರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ಬೆಸ್ಕಾಂ ಕಾರ್ಯ ಶ್ಲಾಘಿಸಿದ ಸಚಿವ ಕೆಬಿಜಿ:
ಮಹಾನಗರದಲ್ಲಿ ಬೆಸ್ಕಾಂ ‘ಕ್ಲೀನ್-ಅಪ್ ಬೆಂಗಳೂರು’ ಅಭಿಯಾನಕ್ಕೆ ಚಾಲನೆ ನೀಡಿದ್ದು, ರಜಾದಿನಗಳಲ್ಲೂ ಸಂಸ್ಥೆಯ ಸಿಬ್ಬಂದಿ ನಗರದೆಲ್ಲೆಡೆ ಸಮೀಕ್ಷೆ ನಡೆಸಿ ಫುಟ್‌ಪಾತ್ ಮೇಲಿರುವ ಅನುಪಯುಕ್ತ ಕಂಬ, ಪರಿವರ್ತಕ, ಮಾರ್ಗದಲ್ಲಿ ಅಡಚಣೆ ಮಾಡುತ್ತಿದ್ದ ಉಪಕರಣಗಳನ್ನು ತೆರವುಗೊಳಿಸುತ್ತಿದ್ದಾರೆ. ಇದರ ಜತೆಗೆ ಕಸವನ್ನೂ ತೆರವುಗೊಳಿಸಲಾಗುತ್ತಿದೆ. ಇದಕ್ಕಾಗಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಬೆಸ್ಕಾಂ ಅಧಿಕಾರಿ/ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಶ್ಲಾಸಿದರು.
ಸ್ವಚ್ಛ ಮತ್ತು ಹಸಿರು ಬೆಂಗಳೂರು ನಿರ್ಮಾಣಕ್ಕಾಗಿ ಕೆಪಿಟಿಸಿಎಲ್ ತನ್ನದೇ ಆಸ್ತಿಯಲ್ಲಿ ಉತ್ತಮ ಪರಿಕಲ್ಪನೆಯೊಂದಿಗೆ ಥೀಮ್ ಪಾರ್ಕ್ ನಿರ್ಮಿಸಿರುವುದು ಶ್ಲಾಘನೀಯ. ಮಕ್ಕಳು ಸೇರಿ ಹಿರಿಯರಿಗೂ ಈ ಸ್ಥಳ ಸಮುದಾಯ ಚಟುವಟಿಕೆ ಕೇಂದ್ರವಾಗಿ ಮಾರ್ಪಡಲಿದೆ. ಬೆಂಗಳೂರನ್ನು ಇನ್ನಷ್ಟು ಸುಂದರಗೊಳಿಸುವ ಹೊಣೆ ಎಲ್ಲರೂ ಹೊರಬೇಕಿದೆ.
- ಕೃಷ್ಣಬೈರೇಗೌಡ, ಬೆಂಗಳೂರು ನಗರಾಭಿವೃದ್ದಿ ಸಚಿವ