- ಕೆ.ಜಿ. ರಸ್ತೆ ಬಳಿ ಕಾನೂನುಬಾಹಿರ ಕಟ್ಟಡ ನಿರ್ಮಾಣ ಆರೋಪ
- ಜಿಬಿಎ, ನಗರಾಭಿವೃದ್ಧಿ ಇಲಾಖೆಗೆ ಎನ್.ಆರ್. ರಮೇಶ್ ದೂರು ಸಲ್ಲಿಕೆ
ಬೆಂಗಳೂರು: ನಗರದ ಹೃದಯ ಭಾಗವಾಗಿರುವ ಗಾಂಧಿನಗರದ ಕೆಂಪೇಗೌಡ ರಸ್ತೆಗೆ ಹೊಂದಿಕೊಂಡಂತಿರುವ ಹಳೆಯ ಗುಪ್ತಾ ಮಾರ್ಕೆಟ್ ಜಾಗದಲ್ಲಿ ಹೊಸದಾಗಿ ನಿರ್ಮಿಸಿರುವ ಐಶ್ವರ್ಯ ಮಾಲ್ ಕಟ್ಟಡಕ್ಕೆ ಅಕ್ರಮವಾಗಿ ಟಿಡಿಆರ್ ಬಳಸಿಕೊಳ್ಳಲಾಗಿದೆ. ಮಂಜೂರಾದ ನಕ್ಷೆಗೆ ವ್ಯತಿರಿಕ್ತವಾಗಿ 7 ಅಂತಸ್ತು ಬದಲು 13 ಮಹಡಿ ನಿರ್ಮಿಸಿ ಪಾಲಿಕೆಗೆ ಕೋಟ್ಯಂತರ ರೂ. ಆಸ್ತಿತೆರಿಗೆ ನಷ್ಟ ಉಂಟಾಗಿರುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಹಾಗೂ ಜಿಬಿಎಗೆ ದೂರು ಸಲ್ಲಿಕೆಯಾಗಿದೆ.
ಗಾಂಧಿನಗರ ವ್ಯಾಪ್ತಿಯಲ್ಲಿ ಈ ಹಿಂದೆ ಗುಪ್ತ ಮಾರ್ಕೆಟ್ ಇದ್ದಂತಹ 54,171 ಚದರ ಅಡಿ ವಿಸ್ತೀರ್ಣದ ಸ್ವತ್ತನ್ನು ಬೆಂಗಳೂರು ಸಿಟಿ ಮುನಿಸಿಪಾಲಿಟಿಯು 1953-54ರಲ್ಲಿ ಬಿ.ಎಸ್. ಗುಪ್ತಾಗೆ 99 ವರ್ಷಕ್ಕೆ ಗುತ್ತಿಗೆ ನೀಡಲಾಗಿತ್ತು. ಅಲ್ಲಿ ಅವರು ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದರು. ಕೆಲವು ವರ್ಷಗಳ ಹಿಂದೆ ಆ ಜಾಗವನ್ನು ಚಂದ್ರಪ್ಪ ಮತ್ತು ಬಾಗೇಗೌಡ ಕಾನೂನುಬಾಹಿರವಾಗಿ ಕ್ರಯಕ್ಕೆ ಪಡೆದು ಅಲ್ಲೀಗ ಮಲ್ಟಿಪ್ಲೆಕ್ಸ್ ಸಹಿತ ಬೃಹತ್ ಶಾಪಿಂಗ್ ಮಾಲ್ ನಿರ್ಮಿಸಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಸದರಿ ಸ್ವತ್ತಿನಲ್ಲಿ 3 ಸ್ಕ್ರೀನ್‌ಗಳ ಮಲ್ಟಿಪ್ಲೆಕ್ಸ್ ಮತ್ತು ಶಾಪಿಂಗ್ ಮಾಲ್ ನಿರ್ಮಿಸಲು ನಕ್ಷೆ ಮಂಜೂರಾತಿಯನ್ನು ನಗರ ಯೋಜನೆ ಇಲಾಖೆ ನೀಡಿತ್ತು. ಇದರನ್ವಯ 5 ತಳ ಮಹಡಿ, 1 ನೆಲ ಮಹಡ್ತಿ ಮತ್ತು 5 ಮೇಲಂತಸ್ತು ಸೇರಿ ಒಟ್ಟು 11 ಅಂತಸ್ತುಗಳ ಮಾಲ್ ನಿರ್ಮಿಸಲು ಅನುಮತಿ ಪಡೆಯಲಾಗಿತ್ತು. ಆದರೆ, 13 ಅಂತಸ್ತುಗಳ ಕಟ್ಟಡವನ್ನು ನಿರ್ಮಿಸಿ ನಿಯಮ ಉಲ್ಲಂಸಲಾಗಿದೆ. ಒಟ್ಟು 3.28 ಲಕ್ಷ ಚ. ಅಡಿ ವಿಸ್ತೀರ್ಣದ ಕಟ್ಟಡವನ್ನು ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆದು 3.86 ಲಕ್ಷ ಚ. ಅಡಿ ನಿರ್ಮಿಸಿ ಅನಧಿಕೃತವಾಗಿ 57,781 ಚ. ಅಡಿಯಷ್ಟು ಕಟ್ಟಲಾಗಿದೆ. ಶೇ.18 ಹೆಚ್ಚುವರಿ ನಿರ್ಮಿಸಿರುವುದಲ್ಲದೆ ಸೆಟ್ ಬ್ಯಾಕ್ ಮಿತಿಯನ್ನೂ ಉಲ್ಲಂಘಿಸಲಾಗಿದೆ. ಹೀಗಿದ್ದರೂ, ನಗರ ಯೋಜನೆಯ ಅಧಿಕಾರಿಗಳು ಕಡಿಮೆ ಮೊತ್ತದ ಆಸ್ತಿತೆರಿಗೆ ಪಾವತಿಸುವಂತೆ ಸೂಚಿಸಿ ಸ್ವಾಧೀನಾನುಭವ ಪತ್ರ (ಒಸಿ) ನೀಡಲು ಮುಂದಾಗಿರುವುದು ಭ್ರಷ್ಟಾಚಾರ ನಡೆದಿರುವ ಅನುಮಾನ ಮೂಡಿಸಿದೆ ಎಂದು ತಿಳಿಸಿದ್ದಾರೆ.
ಟಿಡಿಆರ್ ಬಳಕೆಯಲ್ಲೂ ಅಕ್ರಮ:
ಐಶ್ವರ್ಯ ಮಾಲ್ ನಿರ್ಮಿಸಲು ಬಳಕೆಯಾಗಿರುವ ಟಿಡಿಆರ್‌ನಲ್ಲಿ ಭಾರಿ ಅಕ್ರಮ ಎಸೆಗಲಾಗಿದೆ. ಬೆಂಗಳೂರು ಪೂರ್ವ ತಾಲೂಕಿನ ಹಿರಂಡಹಳ್ಳಿ ಗ್ರಾಮದಲ್ಲಿ ಮತ್ತು ಬೆಂಗಳೂರು ಉತ್ತರ ತಾಲೂಕಿನ ಬಂಡಿಕೊಡಿಗೇಹಳ್ಳಿಯಲ್ಲಿ ಪಡೆದುಕೊಂಡಿರುವ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ (ಡಿಆರ್‌ಸಿ) ವನ್ನು ಗಾಂಧಿನಗರ ಪ್ರದೇಶಕ್ಕೆ ಅನ್ವಯಿಸಿ ಕಟ್ಟಡದ ನಿರ್ಮಿಸಲಾಗಿದೆ. ಟಿಡಿಆರ್ ಅನ್ವಯ ಗ್ರಾಮೀಣ ಭಾಗದಲ್ಲಿ ಪಡೆದ ಡಿಆರ್‌ಸಿಯನ್ನು ನಗರ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಬಳಸಲು ಅವಕಾಶ ಇಲ್ಲ. ಈ ಅಂಶವನ್ನು ಅಧಿಕಾರಿಗಳು ಪರಿಗಣಿಸದೆ ಮಾಲ್ ಮಾಲೀಕರ ಪರ ಕೆಲಸ ಮಾಡಿದ್ದಾರೆ. ಇದರಿಂದ ಪಾಲಿಕೆ ಕೋಟ್ಯಂತರ ರೂ. ನಷ್ಟವಾಗಿದ್ದು, ಇದಕ್ಕೆ ಕಾರಣರಾದ ನಗರ ಯೋಜನೆ ವಿಭಾಗದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಒಳಪಡಿಸಬೇಕು ಎಂದು ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ.
ಮನವಿಗೆ ಸ್ಪಂದಿಸದ ಜಿಬಿಎ:
ಇದೇ ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ಬಿಬಿಎಂಪಿಗೆ 2018 ಮತ್ತು 2019ರಲ್ಲಿ ದಾಖಲೆ ಸಹಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷ ಜಿಬಿಎ ಮುಖ್ಯ ಆಯುಕ್ತರಿಗೆ 4 ಬಾರಿ ಪ್ರತ್ಯೇಕವಾಗಿ ದೂರು ದಾಖಲಿಸಿದರೂ, ಈವರೆಗೂ ಕಾನೂನು ಕ್ರಮ ಕೈಗೊಂಡಿಲ್ಲ. ಹಾಗಾಗಿ ಹೈಕೋರ್ಟ್ ಮೊರೆ ಹೋಗುವುದಾಗಿ ಎನ್.ಆರ್. ರಮೇಶ್ ತಿಳಿಸಿದ್ದಾರೆ.