minister-balakrishnas-wife 
ಬೆಂಗಳೂರು

ಸಚಿವ ಬಾಲಕೃಷ್ಣ ಪತ್ನಿ ಹೆಸರಿಗೆ ಅಕ್ರಮ ಖಾತಾ !

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಜಮೀನನ್ನು ಸ್ವಂತಕ್ಕೆ ಪೋಡಿ ಮಾಡಿಸಿಕೊಂಡ ಆರೋಪ
  • ಬಿಜೆಪಿ ಮುಖಂಡ ಎನ್.ಆರ್. ರಮೇಶ್‌ರಿಂದ ಲೋಕಾಗೆ ದೂರು

ಬೆಂಗಳೂರು: ಸಚಿವ ಎಚ್.ಸಿ. ಬಾಲಕೃಷ್ಣ ಅವರು ತನ್ನ ಪತ್ನಿ ಹೆಸರಿಗೆ 100 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನಿಗೆ ಕಾನೂನುಬಾಹಿರವಾಗಿ ಖಾತಾ ಮಾಡಿಕೊಳ್ಳಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಸದರಿ ಸ್ವತ್ತಿಗೆ ಪೋಡಿ ಮಾಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತ, ಕಂದಾಯ ಇಲಾಖೆ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ.

ತಾವರೆಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸ.ನಂ.158ರಲ್ಲಿ ಎಂಟು ಎಕರೆ ವಿಸ್ತೀರ್ಣದ ಜಮೀನನ್ನು ಸಚಿವರು ತನ್ನ ಪತ್ನಿ ರಾಧಾ ಹೆಸರಿಗೆ 2025ರ ಏ.3 ಮತ್ತು ಮೇ 15ರಂದು ಕೆಂಗೇರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲಾಗಿದೆ. ಇದರ ಜತೆಗೆ 2.20 ಸರ್ಕಾರಿ ಸ್ವತ್ತಿಗೂ ಕಾನೂನುಬಾಹಿರವಾಗಿ ಪೋಡಿ ಮಾಡಲಾಗಿದೆ. ಇದರ ಹಿಂದೆ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದು, ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್.ಆರ್. ರಮೇಶ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದೇ ರೀತಿ ಉತ್ತರಹಳ್ಳಿ ಹೋಬಳಿಯ ಯು.ಎಂ. ಕಾವಲ್‌ಗೆ ಸೇರಿದ ಸ.ನಂ.18ರ 8 ಎಕರೆ ವಿಸ್ತೀರ್ಣದ ಸರ್ಕಾರಿ ಬಂಡೆ ಜಾಗವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಪಹಣಿ ಮಾಡಿಕೊಡಲಾಗಿದೆ. ಅನ್ಯ ಜಮೀನಿಗೆ ಸೇರಿದ ವಿವರಗಳನ್ನು ಬಳಸಿ ಇಂತಹ ಕೃತ್ಯ ಎಸಗಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ದಾಖಲೆ ಸಹಿತ ಹಿಂದೆಯೇ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ, ಸರ್ಕಾರಿ ಜಮೀನು ರಕ್ಷಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ.
ಮುಖ್ಯವಾಗಿ ಯು.ಎಂ. ಕಾವಲ್ ಸ್ವತ್ತು ಸರ್ಕಾರಿ ಜಾಗವೆಂದು ನಗರ ಜಿಲ್ಲಾಧಿಕಾರಿ ಕಳೆ ಮಾ.27ರಂದು ವರದಿ ನೀಡಿದ್ದಾರೆ. ಹೀಗಿದ್ದರೂ, ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ, ವಿಶೇಷ ತಹಸೀಲ್ದಾರ್, ಡಿಡಿಎಲ್‌ಆರ್/ಎಡಿಎಲ್‌ಆರ್ ನಿಯಮ ಉಲ್ಲಂಸಿ ಸರ್ಕಾರಿ ಸ್ವತ್ತಿಗೆ ಏಕ ನಿವೇಶನ ಖಾತಾ ನೀಡಿರುವುದರಿಂದ ಇವರೆಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಕಂದಾಯ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿರುವುದಾಗಿ ಎನ್.ಆರ್. ರಮೇಶ್ ತಿಳಿಸಿದ್ದಾರೆ.