government-property 
ಬೆಂಗಳೂರು

100 ಕೋಟಿ ಮೌಲ್ಯದ ಸರ್ಕಾರಿ ಸ್ವತ್ತಿಗೆ ಅಕ್ರಮ ಖಾತಾ

ಪ್ರಮುಖ ಮುಖ್ಯಾಂಶಗಳು

  • ಕೋಣನಕುಂಟೆ ಗ್ರಾಮದಲ್ಲಿರುವ 1 ಎಕರೆ 37 ಗುಂಟೆ ಜಾಗ
  • ಲೋಕಾಯುಕ್ತ, ದಕ್ಷಿಣ ಪಾಲಿಕೆಗೆ ಎನ್.ಆರ್. ರಮೇಶ್ ದೂರು

ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಸಂತಪುರ ವಾರ್ಡ್‌ನ ಕೋಣನಕುಂಟೆ ಗ್ರಾಮಕ್ಕೆ ಸೇರಿದ 1 ಎಕರೆ 37 ಗುಂಟೆ ವಿಸ್ತೀರ್ಣದ ಸರ್ಕಾರಿ ಸ್ವತ್ತಿಗೆ ದಕ್ಷಿಣ ಪಾಲಿಕೆ ಕಂದಾಯ ಅಧಿಕಾರಿಗಳು ಕಾನೂನುಬಾಹಿರವಾಗಿ ಖಾತಾ ಮಾಡಿಕೊಟ್ಟಿದ್ದಾರೆ. ಇದರಿಂದ 100 ಕೋಟಿ ರೂ. ಮೌಲ್ಯದ ಸ್ವತ್ತು ಅನ್ಯರ ಪಾಲಾಗಲಿದ್ದು, ಈ ಕೃತ್ಯ ಎಸೆಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

ಕೋಣನಕುಂಟೆ ಗ್ರಾಮದ ಗಣಪತಿಪುರ ಬಡಾವಣೆಗೆ ಹೊಂದಿಕೊಂಡಿರುವ ಈ ಸ್ವತ್ತಿಗೆ ಉತ್ತರಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಮತ್ತು ವಸಂತಪುರ ವಾರ್ಡ್‌ನ ಕಂದಾಯ ಪರಿವೀಕ್ಷಕರು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಕಾನೂನುಬಾಹಿರವಾಗಿ ಖಾತಾ ಮಾಡಿಕೊಟ್ಟಿದ್ದಾರೆ. ಏಳು ಮಂದಿ ಖಾಸಗಿ ವ್ಯಕ್ತಿಗಳಿಗೆ ಪ್ರತ್ಯೇಕ ನಿವೇಶನಗಳಾಗಿ ವಿಂಗಡಿಸಿ ದಾಖಲೆಗಳನ್ನು ನೀಡಲಾಗಿದೆ. ಪ್ರಸ್ತುತ ಕೋಣನಕುಂಟೆಯಲ್ಲಿ ಪ್ರತಿ ಚದರ ಅಡಿಗೆ 12 ಸಾವಿರ ರೂ.ದರ ಇದ್ದು, 1 ಎಕರೆ 37 ಗುಂಟೆ ಜಮೀನು 100 ಕೋಟಿ ರೂ. ಮೌಲ್ಯದ್ದಾಗಿದೆ. ಇಂತಹ ಬೆಲೆಬಾಳುವ ಸ್ವತ್ತನ್ನು ಉಳಿಸಿಕೊಳ್ಳುವ ಬದಲು ಪರಭಾರೆ ಮಾಡಿರುವ ಸಂಬಂಧ ಲೋಕಾಯುಕ್ತ ಹಾಗೂ ದಕ್ಷಿಣ ಪಾಲಿಕೆ ಆಯುಕ್ತರಿಗೆ ಪ್ರತ್ಯೇಕವಾಗಿ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಹಾಲಿ ಜಮೀನಿಗೆ ಸಂಬಂಧಿಸಿ 26/09/1996ರ ಸೆ.26ರಂದು ಬೆಂಗಳೂರು ದಕ್ಷಿಣ ಉಪ ವಿಭಾಗದ ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿ ಸರ್ಕಾರದ ಜಾಗವಾಗಿರುವ ಕಾರಣ ಪ್ರತಿವಾದಿಗಳಿಂದ ಸ್ವತ್ತಿನ ಒತ್ತುವರಿಯನ್ನು ಮುಕ್ತಗೊಳಿಸಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಈ ಆದೇಶನ್ನು ಅಧಿಕಾರಿಗಳು ಈವರೆಗೂ ಜಾರಿಗೆ ತಂದಿಲ್ಲ. ಬದಲಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ. ದೂರು ಆಧರಿಸಿ ಸರ್ಕಾರಿ ಸ್ವತ್ತನ್ನು ತಕ್ಷಣವೇ ಪಾಲಿಕೆಯ ವಶಕ್ಕೆ ಪಡೆದುಕೊಳ್ಳಬೇಕು ಎಂದು ದಕ್ಷಿಣ ಪಾಲಿಕೆಯ ಆಯುಕ್ತರಿಗೆ ಜಮೀನಿನ ದಾಖಲೆಗಳನ್ನು ನೀಡಿರುವುದಾಗಿ ಎನ್.ಆರ್. ರಮೇಶ್ ತಿಳಿಸಿದ್ದಾರೆ.