Bengaluru woman alleges harassment, threats(ಎಐ ಚಿತ್ರ)
- ಜುಲೈ 9 ರಿಂದ 11 ರವರೆಗೆ ತಮಿಳುನಾಡಿನ ಕೊಡೆಕೊನಾಲ್‌ಗೆ ತೆರಳಿದ್ದಾಗ ವ್ಯಕ್ತಿ ಪರಿಚಯ.
- ಸ್ನೇಹ ಮುಂದುವರಿಸದಿದ್ದರೆ, ಬ್ಲಾಕ್ ಮಾಡಿದರೆ ಕೊಲೆ ಮಾಡುವುದಾಗಿ ಬೆದರಿಕೆ.
- ಕಾಲ್ ಗರ್ಲ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿರುವ ಆರೋಪ.
ಬೆಂಗಳೂರು: ಮಹಿಳೆಯೊಬ್ಬರು ಕೊಡೈಕೆನಾಲ್ಗೆ ತೆರಳಿದ್ದಾಗ ಪರಿಚಯವಾದ ವ್ಯಕ್ತಿಯೊಬ್ಬ ಮಾನಸಿಕವಾಗಿ ಕಿರುಕುಳ ಕೊಟ್ಟು, ಪಾಕಿಸ್ತಾನಕ್ಕೆ ಕಳುಹಿಸಿ, ಕಾಣೆಯಾಗಿರುವಂತೆ ಮಾಡಿಬಿಡ್ತೇನೆ ಎಂದು ಬೆದರಿಕೆ ಹಾಕಿದ ಘಟನೆ ಬೆಳ್ಳಂದೂರು ಠಾಣಾ ವ್ಯಾಪ್ತಿ ಬೆಳಕಿಗೆ ಬಂದಿದೆ.
ಬೆಳ್ಳಂದೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ 35 ವರ್ಷದ ಸುಕನ್ಯಾ (ಹೆಸರು ಬದಲಾಯಿಸಲಾಗಿದೆ) ಅವರು ಜುಲೈ 9 ರಿಂದ 11 ರವರೆಗೆ ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣ ಸುಂದರ ಗಿರಿಧಾಮವಾದ ಕೊಡೈಕೆನಾಲ್ಗೆ ತೆರಳಿದ್ದರು. ಈ ವೇಳೆ ಪರಿಚಯವಾದ ವ್ಯಕ್ತಿಯಿಂದ ಸಮಸ್ಯೆಗೊಳಗಾದ ಬಗ್ಗೆ ದೂರು ಕೊಟ್ಟಿದ್ದಾರೆ. ಪೊಲೀಸ್ ಇಲಾಖೆಯ ನಾರ್ಕೋಟಿಕ್ಸ್ ವಿಭಾಗದ ಅಂಡರ್‌ಕವರ್ ಅಧಿಕಾರಿ ಎಂದು ಸುಳ್ಳು ಹೇಳಿ ಕಿರುಕುಳ ಕೊಟ್ಟಿದ್ದಾನೆ ಎನ್ನಲಾಗಿದೆ.
35 ವರ್ಷದ ಸುಕನ್ಯಾ (ಹೆಸರು ಬದಲಾಯಿಸಲಾಗಿದೆ) ಹಾಗೂ ನರೇಶ್(ಹೆಸರು ಬದಲಾಯಿಸಲಾಗಿದೆ) ಎಂಬಾತನ ಪರಿಚಯವಾಗಿದೆ. ಕೆಲವೇ ದಿನಗಳಲ್ಲಿ ಈ ಪರಿಚಯ ಸ್ನೇಹವಾಗಿ ಬದಲಾಯಿತು. ಮೆಸೇಜ್ ಕಾಲ್ನಲ್ಲಿ ಮುಳುಗಿದ್ದ ಅವರು, ಇಬ್ಬರೂ ಬೆಂಗಳೂರಿಗೆ ಹಿಂತಿರುಗಿದ ಬಳಿಕವೂ ಸಂಪರ್ಕದಲ್ಲಿದ್ದರು.
ಏನಾಗಿತ್ತು?
ಬೆಂಗಳೂರಿಗೆ ಬಂದ ನಂತರ ಕೆಲವೇ ವಾರಕ್ಕೆ ನರೇಶ್ ಅಸಭ್ಯವಾಗಿ ವರ್ತಿಸಲು ಶುರುವಿಟ್ಟುಕೊಂಡಿದ್ದಾನೆ. ಇದರಿಂದ ಬೇಸರಗೊಂಡ ಸುಕನ್ಯ ಇನ್ನು ಸ್ನೇಹ ಮುಂದುವರೆಸುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿದ್ದಾಳೆ. ಸಿಟ್ಟಾದ ಆತ ಆಕೆಯನ್ನು ಮಾತನಾಡಲು ಹೋಟೆಲ್ಗೆ ಕರೆಸಿಕೊಠಡಿಯೊಂದರಲ್ಲಿ ಆಕೆಯನ್ನು ಕೂಡಿಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಏನೆಲ್ಲ ಇದೆ?
ಇದರಿಂದ ಬೇಸರಗೊಂಡ ಆಕೆ ಆತನ ಸಂಪರ್ಕ ಕಡಿತಗೊಳಿಸಿ ಫೋನ್ ನಂಬರ್ ಬ್ಲಾಕ್ ಮಾಡಿಕೊಂಡಳು, ಇದನ್ನು ಸಹಿಸಲು ಸಾಧ್ಯವಾಗದೇ ನರೇಶ್, ನಕಲಿ ಇಮೇಲ್ ಐಡಿ ಮತ್ತು ವಿವಿಧ ಫೋನ್ ನಂಬರ್‌ಗಳನ್ನು ಬಳಸಿ ತೀವ್ರ ಕಿರುಕುಳ ನೀಡಲು ಮುಂದುವರಿಸಿದ್ದಾನೆ. ಅಲ್ಲದೆ, ಆಕೆಯನ್ನು "ಕಾಲ್ ಗರ್ಲ್" ಎಂದು ಬಿಂಬಿಸಿ ಅಪಪ್ರಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ.
ನಂಬರ್ ಬ್ಲಾಕ್ ಮಾಡುವುದು, ಮಾತನಾಡದೆ ಇರುವುದು, ಸ್ನೇಹ ಮುಂದುವರೆಸದೆ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನಕ್ಕೆ ಕಳುಹಿಸಿ, ಅಲ್ಲಿ ಕಾಣೆಯಾದವರಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದರಿಂದ ತೀವ್ರ ಮಾನಸಿಕ ಕಿರುಕುಳಕ್ಕೆ ಒಳಗಾದ ಮಹಿಳೆ , ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾನೂನು ಕ್ರಮದ ಪ್ರಕಾರ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).