- ಗುತ್ತಿಗೆದಾರರಿಗೆ ಜಿಬಿಎ ಮುಖ್ಯ ಆಯುಕ್ತರ ಸೂಚನೆ
- ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಈಜಿಪುರ ಮೇಲ್ಸೇತುವೆಯ ಸಂಪೂರ್ಣ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಹೆಚ್ಚಿನ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿಯನ್ನು ಬಳಸಿ ಎಲ್ಲ ಕಾರ್ಯಚಟುವಟಿಕೆಗಳನ್ನು ಸಮಾನಾಂತರವಾಗಿ ಏಕಕಾಲದಲ್ಲಿ ನಡೆಸಿ, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮೇಲ್ಸೇತುವೆಗೆ ಸೇಂಟ್ ಜಾನ್ಸ್ ಬಳಿ ಪಿಲ್ಲರ್ ಅಳವಡಿಸಲು ಇದ್ದ ತೊಡಕನ್ನು ಬಗೆಹರಿಸಿ ಪೈಲಿಂಗ್ ಕೆಲಸ ಪ್ರಾರಂಭವಾಗಿದ್ದು, 15 ದಿನಗಳೊಳಗೆ ಈ ಕಾಮಗಾರಿ ಪೂರ್ಣಗೊಳಿಸಬೇಕು. ಮಡಿವಾಳ ಕಡೆಯ ಡೌನ್ ರ್ಯಾಂಪ್ ಕಾಮಗಾರಿಯನ್ನು ಶ್ರೀ ಮುಗಿಸಬೇಕು. ಇದಕ್ಕಾಗಿ ಒಂದು ಭಾಗದ ರಸ್ತೆಯಲ್ಲಿ ಸಂಚಾರ ರ್ನಿಬಂಧಕ್ಕೆ ಅನುಮತಿ ಪಡೆದು, ಮಳೆನೀರು ಹರಿಯಲು ಪೈಪ್ಲೈನ್ ಅಳವಡಿಸಬೇಕು. ಜತೆಗೆ ಕೇಂದ್ರೀಯ ಸದನ ಹಾಗೂ ಆಸ್ಟ್ರೊಫಿಜಿಕ್ಸ್ ಜಾಗವನ್ನು ವಶಪಡಿಸಿಕೊಂಡು ಪಾದಚಾರಿ ಮಾರ್ಗ ನಿಮಾರ್ಣಕ್ಕೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ದಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಮುಖ್ಯ ಅಭಿಯಂತರರಾದ ರವಿ, ಡಾ.ರಾಘವೇಂದ್ರ ಪ್ರಸಾದ್ ಉಪಸ್ಥಿತರಿದ್ದರು.
ಈಜೀಪುರ ಮೇಲ್ಸೇತುವೆ ಕಾಮಗಾರಿಯ ಗ್ರೇಡ್ ಮಟ್ಟದ ರಸ್ತೆಯಲ್ಲಿ ರಸ್ತೆಗುಂಡಿಗಳನ್ನು ಗಮನಿಸಿ, ಕೂಡಲೇ ದುರಸ್ತಿ ಮಾಡುವುದು ಒಳಗೊಂಡಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಮಹೇಶ್ವರ ರಾವ್ ಸೂಚಿಸಿದರು.
* ಸರ್ಜಾಪುರ ರಸ್ತೆಯಲ್ಲಿ 1.06 ಕಿ.ಮೀ. ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮತ್ತೊಂದು ಭಾಗದಲ್ಲಿ ಶೇ.50 ಕಾಮಗಾರಿ ಮಾತ್ರ ಬಾಕಿ ಇದೆ. ಜತೆಗೆ ಪಾದಚಾರಿ ಮಾರ್ಗವನ್ನು ನಿಯಮಾನುಸಾರ ಕನಿಷ್ಠ 2.5 ಮೀಟರ್ ಅಗಲದಲ್ಲಿ ನಿರ್ಮಿಸಿ ಮಾರ್ಚ್ ಅಂತ್ಯದೊಳಗೆ ಮುಗಿಸಿ.
* ಕೋರಮಂಗಲ 80 ಅಡಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಪ್ರಗತಿಯಲ್ಲಿದೆ. ಈ ಭಾಗದಲ್ಲಿ ರಸ್ತೆಬದಿ ಹಾಗೂ ರಾಜಕಾಲುವೆಯಲ್ಲಿ ತ್ಯಾಜ್ಯ ಬಿಸಾಡುವಿಕೆ ತಡೆಯಲು ವಾರದೊಳಗೆ ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆ ಮಾರ್ಷಲ್ಗಳು ಗಸ್ತು ತಿರುಗಿ ಕಸ ಬಿಸಾಡುವವರ ಮೇಲೆ ದಂಡ ವಿಧಿಸಬೇಲು.
* ಪಾಮ್ ಗ್ರೋವ್ 700 ಮೀಟರ್ ರಸ್ತೆ ಪೈಕಿ ಒಂದು ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ಭಾಗದಲ್ಲಿ 300 ಮೀಟರ್ ಕಾಮಗಾರಿ ಬಾಕಿಯಿದೆ. ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು.
* ಸುಲ್ತಾನ್ ಪೇಟೆ 1.15 ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮಾ.15ರಿಂದ ಕಾಮಗಾರಿ ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಜಲಮಂಡಳಿಯ ಪೈಪ್ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.
* ರ್ಸಿಸಿ ರಸ್ತೆಯಲ್ಲಿ 240 ಮೀಟರ್ ವೈಟ್ಟಾಪಿಂಗ್ ಪೂರ್ಣಗೊಂಡಿದ್ದು, ಬಾಕಿ 300 ಮೀಟರ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.