- ಆದರೆ ವಿಚ್ಛೇದನಕ್ಕೆ ಕಾರಣವಾಗಬಹುದು ಎಂದ ಹೈಕೋರ್ಟ್
ಬೆಂಗಳೂರು:
ದಂಪತಿ ಒಂದೇ ಮನೆಯಲ್ಲಿ ವಾಸವಿದ್ದರೂ, ಪತಿಯು ಪತ್ನಿಯಿಂದ ಪ್ರತ್ಯೇಕವಾಗಿ ಬೇರೊಂದು ಕೋಣೆಯಲ್ಲಿ ಮಲಗುವುದನ್ನು ನೇರವಾಗಿ ಕ್ರೌರ್ಯ ಎಂದು ಪರಿಗಣಿಸಲಾಗದು. ಆದರೆ, ಅದರ ಹಿಂದಿನ ದೀರ್ಘಕಾಲದ ವೈವಾಹಿಕ ಕಲಹಗಳು, ನಿರಂತರ ದೈಹಿಕ-ಮಾನಸಿಕ ಹಿಂಸೆಯ ಆರೋಪಗಳನ್ನು ಒಟ್ಟಾಗಿ ಪರಿಗಣಿಸಿ ಕ್ರೌರ್ಯದ ಆಧಾರದಲ್ಲಿ ವಿಚ್ಛೇದನ ನೀಡಬಹುದು ಎಂದು ಹೈಕೋರ್ಟ್ ತಿಳಿಸಿದೆ.
ಪತ್ನಿಯ ಕೋರಿಕೆಯನ್ನು ಮನ್ನಿಸಿ ವಿಚ್ಛೇದನ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿ.ಕೆ.ಸಿಂಗ್ ಮತ್ತು ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ವಿಚ್ಛೇದನ ಮತ್ತು ಮಾಸಿಕ 25 ಸಾವಿರ ರೂಪಾಯಿ ಜೀವನಾಂಶ ನೀಡಲು ನಿರ್ದೇಶಿಸಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ದಂಪತಿಯ ವಿವಾಹವು 2001ರಲ್ಲಿ ನಡೆದಿತ್ತು. ಇಬ್ಬರು ಮಕ್ಕಳಿದ್ದಾರೆ. ಪತಿಯು ತನಗೆ ದೈಹಿಕ, ಮಾನಸಿಕ ಹಿಂಸೆ ನೀಡಿ ಕಡೆಗಣಿಸಿದ್ದಾನೆ ಎಂದು ಆರೋಪಿಸಿದ್ದ ಪತ್ನಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಒಂದೇ ಮನೆಯಲ್ಲಿ ವಾಸವಿದ್ದರೂ, ಇಬ್ಬು ಬೇರೆ ಬೇರೆ ಕೋಣೆಗಳಲ್ಲಿ ಮಲಗುತ್ತಿದ್ದೆವು. ಪತಿಯ ದೌರ್ಜನ್ಯದ ಕಾರಣ ಇಬ್ಬರು ಮಕ್ಕಳೊಂದಿಗೆ ಮನೆ ತೊರೆಯಬೇಕಾಯಿತು ಎಂದು ವಾದಿಸಿದ್ದರು.
ತನ್ನ ಮೇಲಿನ ಎಲ್ಲ ಆರೋಪಗಳನ್ನು ಪತಿ ನಿರಾಕರಿಸಿದ್ದರು. ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ 2025ರ ಆಗಸ್ಟ್ನಲ್ಲಿ ಪತ್ನಿಯ ಪರ ತೀರ್ಪು ನೀಡಿ ಹಿಂದೂ ವಿವಾಹ ಕಾಯ್ದೆ ಅಡಿಯಲ್ಲಿ ವಿಚ್ಛೇದನ ಮಂಜೂರು ಮಾಡಿತ್ತು. ಮಾಸಿಕ 25 ಸಾವಿರ ಜೀವನಾಂಶ ನೀಡಲು ಸೂಚಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂದರ್ಭದ ಹಿನ್ನೆಲೆ ಪರಿಗಣನೆ:
ದಂಪತಿ ಒಂದೇ ಮನೆಯಲ್ಲಿದ್ದರೂ, ಪ್ರತ್ಯೇಕ ವಾಸ ಮಾಡುತ್ತಿದ್ದರು ಎಂಬುದನ್ನು ನ್ಯಾಯಪೀಠ ವಿಚಾರಣೆ ವೇಳೆ ಗಮನಿಸಿತು. ಇದನ್ನು ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಈ ಪ್ರತ್ಯೇಕ ವಾಸದ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ನೋಡದೆ, ಹಳಸಿರುವ ವೈವಾಹಿಕ ಸಂಬಂಧದ ಹಿನ್ನಲೆಯಲ್ಲಿ ಒಟ್ಟಾಗಿ ನೋಡಬೇಕು. ಪತಿಯ ಮದ್ಯಪಾನ, ಧೂಮಪಾನ ಮತ್ತು ತಂಬಾಕು ಸೇವನೆಯ ಅಭ್ಯಾಸಗಳು ದಂಪತಿಯ ನಡುವಿನ ಜಗಳಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
⚠️
ನಿರಂತರವಾಗಿ ಸಹಿಸಲು ಅಸಾಧ್ಯ
ದಾಂಪತ್ಯ ಜೀವನದ ನಡವಳಿಕೆಯ ಬಗ್ಗೆ ಸ್ವತಂತ್ರ ಸಾಕ್ಷಿಗಳು ಲಭ್ಯವಿಲ್ಲವಾದರೂ, ಪತ್ನಿಯ ಆರೋಪಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ತನ್ನ ದುರಭ್ಯಾಸಗಳ ಬಗ್ಗೆ ಪತಿಯೇ ಪಾಟಿ ಸವಾಲಿನ ವೇಳೆ ಒಪ್ಪಿಕೊಂಡಿದ್ದಾನೆ. ಕ್ರೌರ್ಯ ಎಂಬುದು ನಿರಂತರ ಮಾನಸಿಕ ಹಿಂಸೆ, ನಂಬಿಕೆ ದ್ರೋಹ ಮತ್ತು ನಡವಳಿಕೆಗೆ ಸಂಬಂಧಿಸಿದೆ. ಇದನ್ನು ಯಾವುದೇ ಸಂಗಾತಿಯು ಅನಂತ ಕಾಲದ ತನಕ ಸಹಿಸಲು ಸಾಧ್ಯವಿಲ್ಲ. ಒಟ್ಟಾರೆಯಾಗಿ ಪತಿಯಿಂದ ಪತ್ನಿಯು ತೀವ್ರ ಮಾನಸಿಕ ಹಿಂಸೆಗೆ ಒಳಗಾಗಿರುವುದು ಸಾಬೀತಾಗಿದ್ದು, ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.