- ಕೂಲಿ ಮಾಡಿಯಾದರೂ ಕುಟುಂಬ ಸಾಕಬೇಕು ಎಂದ ಹೈಕೋರ್ಟ್
ಬೆಂಗಳೂರು:
ತನ್ನನ್ನು ಕೆಲಸದಿಂದ ವಜಾ ಮಾಡಿದ ಕಾರಣ ನಿರುದ್ಯೋಗಿಯಾಗಿದ್ದೇನೆ. ಆದ್ದರಿಂದ ಪತ್ನಿಗೆ ಜೀವನಾಂಶ ನೀಡಲಾಗದು ಎಂಬ ಪತಿಯ ವಾದವನ್ನು ಹೈಕೋರ್ಟ್ ನಿರಾಕರಿಸಿದೆ. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಜೀವನಾಂಶ ನೀಡುವುದನ್ನು ತಪ್ಪಿಸಲು ಪತಿಯು ತಾನೇ ಸ್ವತಃ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾನೆ ಎಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಪತ್ನಿ ಮತ್ತು ಮಗುವಿಗೆ ಮಾಸಿಕ 40 ಸಾವಿರ ರೂಪಾಯಿ ಜೀವನಾಂಶ ಪಾವತಿಸುಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಪಿ. ಶ್ರೀ ಸುಧಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅರ್ಜಿದಾರ ಎಂ.ಟೆಕ್ ಪದವೀಧರನಾಗಿದ್ದು, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದು, 1.67 ಲಕ್ಷ ರೂ. ಮಾಸಿಕ ವೇತನ ಪಡೆಯುತ್ತಿದ್ದ. ಆದರೆ, 2025ರ ಸೆಪ್ಟೆಂಬರ್ನಲ್ಲಿ ಕೆಲಸಕ್ಕೆ ಬಲವಂತವಾಗಿ ರಾಜೀನಾಮೆ ನೀಡಬೇಕಾಯಿತು. ಪತ್ನಿ ದಾಖಲಿಸಿದ ಪ್ರಕರಣಗಳ ಕಾರಣ ಬೇರೆ ಕೆಲಸ ಸಿಗುತ್ತಿಲ್ಲ. ಆದ್ದರಿಂದ ಜೀವನಾಂಶ ನೀಡಲಾಗದು ಎಂದು ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ವಾದಿಸಲಾಗಿತ್ತು.
ಆದರೆ, ಆತ ಕಂಪನಿಗೆ ಕಳುಹಿಸಿದ್ದ ಇ-ಮೇಲ್ ಪರಿಶೀಲಿಸಿದಾಗ, ಆತ ಸ್ವಯಂಪ್ರೇರಿತನಾಗಿ ಸಂಸ್ಥೆಯಿಂದ ಬೇಗನೆ ನಿವೃತ್ತಿ ಪಡೆಯಲು ಬಯಸುತ್ತೇನೆ ಎಂದು ಉಲ್ಲೇಖಿಸಿರುವುದು ಬೆಳಕಿಗೆ ಬಂದಿತ್ತು. ಜೀವನಾಂಶದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಆತ ಉದ್ಯೋಗ ತೊರೆದಿದ್ದಾನೆ ಎಂದು ನ್ಯಾಯಾಲಯ ಪರಿಗಣಿಸಿದೆ.
ಸುಪ್ರೀಂ ಆದೇಶ ಉಲ್ಲೇಖ:
ಕೂಲಿ ಮಾಡಿಯಾದರೂ ಕುಟುಂಬವನ್ನು ಸಲಹುವುದು ದೈಹಿಕ ಸಾಮರ್ಥ್ಯವಿರುವ ಪತಿಯ ಕರ್ತವ್ಯ ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್, ಪತಿಯ ಅರ್ಜಿಯನ್ನು ವಜಾಗೊಳಿಸಿದೆ. ಕೌಟುಂಬಿಕ ನ್ಯಾಯಾಲಯ ನೀಡಿರುವ ಜೀವನಾಂಶದ ಆದೇಶವನ್ನು ಎತ್ತಿಹಿಡಿದಿದ್ದು, 40 ಸಾವಿರ ರೂ. ಗಳನ್ನು ಮಾಸಿಕವಾಗಿ ಪಾವತಿಸುವಂತೆ ಆದೇಶಿಸಿದೆ.