ಡಿಜಿಟಲ್ ಇ-ಸ್ಟಾಂಪ್ 
ಬೆಂಗಳೂರು

ಡಿಜಿಟಲ್ ಇ-ಸ್ಟಾಂಪ್ ಡೌನ್‌ಲೋಡ್ ಹೇಗೆ ?

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದಲ್ಲೇ ಡಿಜಿಟಲ್ ಇ-ಸ್ಟಾಂಪ್ ಸೇವೆ (digital e-stamp) ಶುರುವಾಗಲಿದೆ. ಇದಕ್ಕಾಗಿ ರಾಜ್ಯ ವ್ಯಾಪಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ತರಬೇತಿ ಶಿಬಿರ ನಡೆಯುತ್ತಿವೆ. ಜನರು ಮಧ್ಯವರ್ತಿಗಳ ನೆರವು ಇಲ್ಲದೆ ಕಾವೇರಿ 2.0 ತಂತ್ರಾಂಶದಲ್ಲಿ ಮುದ್ರಾಂಕ ಶುಲ್ಕ ಪಾವತಿಸಿ ಪಡೆಯಬಹುದು.
ಕಾವೇರಿ 2.0 ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಆದ ನಂತರ ಡಿಜಿಟಲ್ ಇ-ಸ್ಟಾಂಪ್ ಆಯ್ಕೆ ಮಾಡಿಕೊಳ್ಳಬೇಕು. ದಸ್ತಾವೇಜಿನ ಪ್ರಕಾರ (ಉದಾ: ಬಾಡಿಗೆ ಒಪ್ಪಂದ, ಅಫಿಡವಿಟ್, ಮಾರಾಟ ಒಪ್ಪಂದ) ಆಯ್ಕೆ ಮಾಡಿ ವಿವರಗಳನ್ನು ಭರ್ತಿ ಮಾಡಿ ಅರ್ಜಿದಾರರು ಹಾಗೂ ಸಹಿ ಮಾಡುವ ಎಲ್ಲರೂ ಆಧಾರ್ ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸಬೇಕು. ಆಸ್ತಿ ಸಂಬಂಧಿತ ದಸ್ತಾವೇಜುಗಳು ಇದ್ದರೆ ಇ-ಸ್ವತ್ತು, ಇ-ಆಸ್ತಿ, ಭೂಮಿ ಸೇರಿ ಸರ್ಕಾರದ ದತ್ತಾಂಶದಿಂದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ. ಪಕ್ಷಕಾರರು ಸ್ವಂತ ವಿಷಯವನ್ನು ಸೇರಿಸಿ ದಸ್ತಾವೇಜನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ತಯಾರಿಸಬೇಕು. ನಂತರ ಆನ್‌ಲೈನ್‌ನಲ್ಲಿ ಸ್ವಯಂ ಚಾಲಿತವಾಗಿ ಮುದ್ರಾಂಕ ಶುಲ್ಕ ಲೆಕ್ಕ ಹಾಕಿದ ನಂತರ ಖಜಾನೆಗೆ ಪೇಮೆಂಟ್ ಗೇಟ್ ವೇ ಮೂಲಕ ಪಾವತಿಸಬೇಕು.
ಶುಲ್ಕ ಪಾವತಿ ದೃಢಪಟ್ಟ ನಂತರ ಸಿಸ್ಟಂನಲ್ಲಿ ಡಿಇಎಸ್(ಡಿಜಿಟಲ್ ಇ-ಸ್ಟಾಂಪ್) ಅನ್ನು ರಚಿಸುತ್ತದೆ.
ಯೂನಿಕ್ ಸೀರಿಯಲ್ ನಂಬರ್, ಕ್ಯೂಆರ್ ಕೋಡ್, ಡಿಜಿಟಲ್ ವಾಟರ್ ಮಾರ್ಕ್, ಇವೆಲ್ಲವೂ ಒಳಗೊಂಡ ದಸ್ತಾವೇಜಿನ ರೂಪವಾಗಲಿದೆ.
ಪಕ್ಷಕಾರರು ಇ-ಸಹಿ ದಾಖಲಿಸಲು ಅವರ ಮೊಬೈಲ್ ನಂಬರ್‌ಗೆ ಲಿಂಕ್ ಬರುತ್ತದೆ. ಅದರಲ್ಲಿ ಆಧಾರ್ ಇ-ಸಹಿ ಅಥವಾ ಡಿಇಎಸ್ ಮೂಲಕ ಸಹಿ ಮಾಡಬಹುದು. ಎಲ್ಲರೂ ಸಹಿ ಮಾಡಿ ದೃಢಪಟ್ಟಾಗ ಅಂತಿಮ ಸ್ಟಾಂಪ್, ಸಹಿ ಮಾಡಲ್ಪಟ್ಟ ದಸ್ತಾವೇಜು ಕಾನೂನಿನಂತೆ ಮಾನ್ಯ ಆಗುತ್ತದೆ. ಇದನ್ನು ಡೌನ್‌ಲೋಡ್ ಮಾಡಬಹುದು ಮತ್ತು ನೋಂದಣಿಗೆ ಬಳಸಬಹುದು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಡಿಸಿಎಸ್ ಶುಲ್ಕವೂ ನಿಗದಿ

ಡಿಜಿಟಲ್ ಇ-ಸ್ಟಾಂಪ್‌ನ್ನು ಸಾರ್ವಜನಿಕರು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಜನಸೇವಕ ಸೇವಾ ಕೇಂದ್ರಗಳ ಮೂಲಕ ಪಡೆಯುವ ಸಂದರ್ಭದಲ್ಲಿ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ(ಇಡಿಸಿಎಸ್) ಶುಲ್ಕ ನಿಗದಿ ಮಾಡಲಾಗಿದೆ. ಇ-ಸ್ಟಾಂಪ್‌ನಲ್ಲಿ ಪಕ್ಷಕಾರರ ಹೆಸರು ಉಲ್ಲೇಖ ಮಾಡಿದರೆ ಸೇವಾ ಶುಲ್ಕ ಮೊದಲ ವ್ಯಕ್ತಿಗೆ 20 ರೂ. ಮತ್ತು ಹೆಚ್ಚುವರಿ ವ್ಯಕ್ತಿಗೆ ತಲಾ 5 ರೂ. ಪಡೆಯಬಹುದು. ಕನಿಷ್ಠ 20 ರೂ.ಯಿಂದ ಗರಿಷ್ಠ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ಪಕ್ಷಕಾರರ ಹೆಸರು ಜತೆಗೆ ಭೂಮಿ, ಇ-ಸ್ವತ್ತು, ಇ-ಆಸ್ತಿ ಮಾಹಿತಿ ಉಲ್ಲೇಖಿಸಿದರೆ ಸೇವಾ ಶುಲ್ಕ 20 ರೂ. ಮತ್ತು ಹೆಚ್ಚುವರಿ ವ್ಯಕ್ತಿಗಳಿಗೆ ತಲಾ 5 ರೂ. ಹಾಗೂ ಮೊದಲ ಆಸ್ತಿಗೆ 5 ರೂ. ಮತ್ತು ಹೆಚ್ಚುವರಿ ಆಸ್ತಿಗಳಿಗೆ 5 ರೂ. ನಿಗದಿ ಮಾಡಲಾಗಿದೆ. ಕನಿಷ್ಠ 25 ರೂ.ಯಿಂದ ಗರಿಷ್ಠ 100 ರೂ. ಸೇವಾ ಶುಲ್ಕ ನಿಗದಿ ಮಾಡಲಾಗಿದೆ.

ತರಬೇತಿಯಲ್ಲಿ ಭಾಗವಹಿಸಿ

ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಮತ್ತು ಎಸ್‌ಸಿಎಚ್‌ಐಎಲ್‌ಎಲ್ ಮೂಲಕ ಇ-ಸ್ಟಾಂಪ್ ಮಾರಾಟಗಾರರು, ಸಹಕಾರಿ ಸೌಹಾರ್ದಗಳ ಸಿಬ್ಬಂದಿ ವರ್ಗ, ಆಸಕ್ತ ಸಾರ್ವಜನಿಕರಿಗೆ ತರಬೇತಿ ಏರ್ಪಡಿಸಲಾಗಿದೆ. ಪ್ರತಿಯೊಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತರಬೇತಿ ನಡೆಯುತ್ತಿದೆ.

ಜಯನಗರ ಜಿಲ್ಲಾ ನೋಂದಣಾಧಿಕಾರಿ ವ್ಯಾಪ್ತಿಯ ಕಚೇರಿ

ಜ.12ರ ಬೆಳಗ್ಗೆ 11.30ಕ್ಕೆ ಬೊಮ್ಮನಹಳ್ಳಿ, 1.30ಕ್ಕೆ ಬೊಮ್ಮನಹಳ್ಳಿ, 2.30ಕ್ಕೆ ಬೇಗೂರು
ಜ.13ರ ಬೆಳಗ್ಗೆ ಜೆ.ಪಿ.ನಗರ, 3 ಗಂಟೆಗೆ ರಾಜರಾಜೇಶ್ವರಿನಗರ
ಜ.14ರ ಬೆಳಗ್ಗೆ 12.30ಕ್ಕೆ ಕೆಂಗೇರಿ, 3 ಗಂಟೆಗೆ ತಾವರೆಕೆರೆ

ಶಿವಾಜಿನಗರ ಜಿಲ್ಲಾ ನೋಂದಣಾಧಿಕಾರಿ ವ್ಯಾಪ್ತಿಯ ಕಚೇರಿ

ಜ.12ರ ಬೆಳಗ್ಗೆ 11.30ಕ್ಕೆ ಮಹದೇವಪುರ, 2 ಗಂಟೆಗೆ ವರ್ತೂರು
ಜ.13ರ ಬೆಳಗ್ಗೆ 11.30ಕ್ಕೆ ಕೆ.ಆರ್.ಪುರ, 3 ಗಂಟೆಗೆ ಬಿದರಹಳ್ಳಿ
ಜ.14ರ ಬೆಳಗ್ಗೆ 1.30ಕ್ಕೆ ಇಂದಿರಾನಗರ, 3 ಗಂಟೆಗೆ ಬಾಣಸವಾಡಿ