- ತ್ರೈಮಾಸಿಕ ಬಟವಾಡೆಗೆ ಶಿಕ್ಷಕ ವೃಂದ ಹೈರಾಣ
- ಲೆಕ್ಕಪತ್ರ ವಿಭಾಗದಲ್ಲಿ ಕಡತ ವಿಲೇಗೆ ಆಮೆವೇಗ
ಬೆಂಗಳೂರು: ನಗರದ ಕಾರ್ಪೋರೇಷನ್ ಶಾಲಾ-ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ಮೂರು ತಿಂಗಳಿಂದ ಗೌರವಧನ ಬಿಡುಗಡೆ ಆಗಿಲ್ಲ. ಪದೇ ಪದೆ ವೇತನ ಬಟವಾಡೆ ಸಮಸ್ಯೆ ಎದುರಾಗುತ್ತಿರುವ ಕಾರಣ ಬೋಧಕ ವರ್ಗದವರು ಭಾರಿ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಪಾಲಿಕೆ ಶಿಕ್ಷಣ ಸಂಸ್ಥೆಗಳಲ್ಲಿ ಶೇ.80ಕ್ಕಿಂತ ಹೆಚ್ಚಿನ ಪ್ರಮಾಣದ ಬೋಧಕರು ಅತಿಥಿ ಶಿಕ್ಷಕ/ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾಯಂ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಹಾಲಿ ಕಾಯಂ ಬೋಧಕ ವರ್ಗವು ನಿವೃತ್ತಿ ಅಂಚಿಗೆ ತಲುಪಿದ್ದಾರೆ. ಇವರಿಂದ ತೆರವಾಗುವ ಹುದ್ದೆಗಳಿಗೂ ಅತಿಥಿ ಶಿಕ್ಷಕರನ್ನು ನಿಯೋಜಿಸುವ ಪರಿಪಾಟ ಮುಂದುವರಿದಿದೆ. ವಸ್ತುಸ್ಥಿತಿ ಹೀಗಿದ್ದರೂ, ಮಾಸಿಕ ಗೌರವಧನ ಬಿಡುಗಡೆ ಮಾಡದಿರುವುದು ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನ ಪಿಯು ಪರೀಕ್ಷೆ ಶನಿವಾರದಿಂದ (ಫೆ.28) ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.18ರಿಂದ ಆರಂಭವಾಗಲಿದೆ. ಪರೀಕ್ಷೆ ಮುಗಿದ ಬಳಿಕ ಅತಿಥಿ ಶಿಕ್ಷಕರಿಗೆ ಬೋಧನೆಯಿಂದ ಕೊಕ್ ನೀಡಲಾಗುತ್ತಿದೆ. ಈ ಹಂತದಲ್ಲಿ ಗೌರವಧನ ಬಿಡುಗಡೆ ಮಾಡದಿದ್ದರೆ ಜೀವನ ನಿರ್ವಹಣೆಯನ್ನು ಹೇಗೆ ಮಾಡುವುದು ಎಂಬ ಪ್ರಶ್ನೆ ಶಿಕ್ಷಕರದ್ದಾಗಿದೆ.
ಆಮೆವೇಗದಲ್ಲಿ ಕಡತ ವಿಲೇ:
ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ನರ್ಸರಿಯಿಂದ ಕಾಲೇಜು ಹಂತದವರೆಗೆ 169 ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 850 ಅತಿಥಿ ಶಿಕ್ಷಕ/ಉಪನ್ಯಾಸಕರು ಬೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿಯಮದ ಪ್ರಕಾರ ಪ್ರತೀ ತಿಂಗಳೂ ಬೋಧಕರಿಗೆ ಗೌರವಧನ ನೀಡಲು ಜಿಬಿಎ ಒಪ್ಪಿದ್ದರೂ, ಈವರೆಗೂ ಒಮ್ಮೆಯೂ ಮಾಸಿಕ ಗೌರವಧನ ಬಿಡುಗಡೆ ಮಾಡಿಲ್ಲ. ಬದಲಾಗಿ ತ್ರೈಮಾಸಿಕವಾರು ಬಿಲ್ ಪಾವತಿಸುವ ಪದ್ಧತಿ ಅಳವಡಿಸಿಕೊಂಡಿದೆ. ಸದ್ಯ ದಕ್ಷಿಣ ಪಾಲಿಕೆ ಗೌರವಧನ ಬಿಡುಗಡೆ ಮಾಡಿದ್ದರೂ, ಉತ್ತರ, ಪಶ್ಚಿಮ ಹಾಗೂ ಕೇಂದ್ರ ಕಾರ್ಪೋರೇಷನ್ (ಪೂರ್ವದಲ್ಲಿ ಪಾಲಿಕೆ ಶಾಲೆಗಳಿಲ್ಲ) ಬೋಧಕರಿಗೆ ಬಟವಾಡೆ ಮಾಡಿಲ್ಲ. ಆಯಾ ಪಾಲಿಕೆಗಳ ಲೆಕ್ಕಪತ್ರ ವಿಭಾಗದಲ್ಲಿ ಕಡತ ವಿಲೇವಾರಿ ಆಮೆವೇಗದಲ್ಲಿ ನಡೆಯುತ್ತಿದೆ ಎಂಬ ಆಕ್ಷೇಪ ಕೇಳಿಬಂದಿದೆ. ಜಿಬಿಎ ಸೂಚನೆ ನೀಡಿದರೂ, ಕೆಳ ಹಂತದ ಅಧಿಕಾರಿಗಳು ಬಿಲ್ ಪಾವತಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸಿಗದ ಇಎಸ್‌ಐ, ಪಿಎ್ ಸೌಲಭ್ಯ:
ಕಾರ್ಪೋರೇಷನ್ ಶಾಲಾ-ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ಕಡಿಮೆ ಗೌರವಧನ ಇರುವುದರಿಂದ ಇಎಸ್‌ಐ ಹಾಗೂ ಪಿಎಫ್ ಸೌಲಭ್ಯ ನೀಡಲು ನಿಕಟಪೂರ್ವ ಬಿಬಿಎಂಪಿ ನಿರ್ಧರಿಸಿತ್ತು. ಇದಕ್ಕೆ ಜಿಬಿಎ ಕೂಡ ಅನುಮೋದನೆ ನೀಡಿತ್ತು. ಆದರೆ, ಈವರೆಗೂ ಈ ಎರಡೂ ಸೌಲಭ್ಯವನ್ನು ಕಲ್ಪಿಸಿಲ್ಲ. ವಯೋಮಿತಿ ಮೀರುತ್ತಿರುವ ಬೋಧಕರು ಆಸ್ಪತ್ರೆ ಸೇರಿದರೆ ಸಾವಿರಾರು ರೂ. ಬಿಲ್ ಪಾವತಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಎಂಎಲ್‌ಸಿ ಶಿಫಾರಸು ಬೇಕೆ?:
ಪಾಲಿಕೆ ಶಾಲಾ-ಕಾಲೇಜುಗಳ ಬೋಧಕರಿಗೆ ಹಿಂದಿನಿಂದಲೂ ನಿಯಮಿತವಾಗಿ ವೇತನ ಬಟವಾಡೆ ಆಗುತ್ತಿಲ್ಲ. ಎರಡು ವರ್ಷದ ಹಿಂದೆ ನಡೆದ ಮುಷ್ಕರದ ವೇಳೆ ಆಯಾ ತಿಂಗಳೇ ಸಂಬಳ ನೀಡುವ ಭರವಸೆ ನೀಡಲಾಗಿತ್ತು. ಇದು ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಬದಲಾಗಿ ತ್ರೈಮಾಸಿಕ ಅವಧಿಯಲ್ಲಿ ಗೌರವಧನ ಬಿಡುಗಡೆ ಮಾಡಲಾಗುತ್ತಿದೆ. ಜತೆಗೆ ವಿಧಾನ ಪರಿಷತ್ ಸದಸ್ಯರಿಂದ ಶಿಫಾರಸು ಮಾಡಿಸಿದರಷ್ಟೇ ಪಾಲಿಕೆ ಲೆಕ್ಕಪತ್ರ ವಿಭಾಗದ ಅಧಿಕಾರಿಗಳು ಕಡತಕ್ಕೆ ಸಹಿ ಹಾಕುತ್ತಾರೆ ಎಂಬ ಮಾತು ಕೇಳಿಬಂದಿದೆ.
ಪಾಲಿಕೆ ಶಿಕ್ಷಣ ಕೇಂದ್ರಗಳ ವಿವರ: