cong, jds, bjp 
ಬೆಂಗಳೂರು

ಅಭ್ಯರ್ಥಿ ಆಯ್ಕೆಗೆ ಮುನ್ನವೇ ರಂಗೇರಿದ ಹಿರಿಯೂರು ಕಣ

ವಿಧಾನ ಪರಿಷತ್ ಸೋಲಿನ ಬಳಿಕ ಈ ಉಪ ಸಮರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಡಿ.ಕೆ.ಶಿವಕುಮಾರ್ ‘ಪ್ರಜಾಸೇವೆ’ ಕಾರ್ಯಕ್ರಮದ ಅಸ ಹಿಡಿದು ಬರುವ ಶನಿವಾರ ಹಿರಿಯೂರಿಗೆ ಎಂಟ್ರಿ ಕೊಡಲಿದ್ದಾರೆ.

ಬೆಂಗಳೂರು: ಹಿರಿಯೂರು ವಿಧಾನಸಭೆ ಕ್ಷೇತ್ರದ ಉಪಚುನಾವಣೆ ೋಷಣೆಗೆ ದಿನಗಣನೆ ಶುರುವಾಗಿರುವ ಹೊತ್ತಲ್ಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಳಗೊಂಡು ಮೂರೂ ರಾಜಕೀಯ ಪಕ್ಷಗಳಲ್ಲಿ ಸಿದ್ಧತೆಗೆ ವೇಗ ಸಿಕ್ಕಿದೆ.

ವಿಧಾನ ಪರಿಷತ್ ಸೋಲಿನ ಬಳಿಕ ಈ ಉಪ ಸಮರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಡಿ.ಕೆ.ಶಿವಕುಮಾರ್ ‘ಪ್ರಜಾಸೇವೆ’ ಕಾರ್ಯಕ್ರಮದ ಅಸ ಹಿಡಿದು ಬರುವ ಶನಿವಾರ ಹಿರಿಯೂರಿಗೆ ಎಂಟ್ರಿ ಕೊಡಲಿದ್ದಾರೆ.

ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ವಾರೊಪ್ಪತ್ತಿನ ಹಿಂದೆ ಹಿರಿಯೂರಲ್ಲಿ 354 ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದ್ದ ಸಿಎಂ, ಈಗ ಅಂತಹುದೇ ಇನ್ನೊಂದು ಭರವಸೆ ಹೊತ್ತು ಹೊರಟಿದ್ದಾರೆ.

ಚುನಾವಣೆ ಕಾವೇರುವ ಮುನ್ನವೇ ಹಿರಿಯೂರಿಗೆ ಭದ್ರಾ ಡ್ಯಾಂ ನೀರು ಹರಿಸಿ ಆ ಭಾಗದ ರೈತರನ್ನು ಸಮಾಧಾನಪಡಿಸಿದ್ದ ಸಿಎಂ, ಈಗ ಪ್ರಜಾಸೇವೆ ಹೆಸರಲ್ಲಿ ಅಧಿಕಾರಿಗಳ ದಂಡು ಕಟ್ಟಿಕೊಂಡು ಜನರ ಅಹವಾಲು ಆಲಿಸಲಿದ್ದಾರೆ.

ಜನರೊಂದಿಗೆ ನೇರ ಮುಖಾ-ಮುಖಿ ಆಗುವ ‘ಪ್ರಜಾಸೇವೆ’ ಆಯೋಜನೆಗೆ ಬೇರೆ ಊರುಗಳಿದ್ದರೂ ಹಿರಿಯೂರನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಉಪ ಚುನಾವಣೆಯ ವಾಸನೆ ಅಡಗಿರುವುದು ಸುಳ್ಳಲ್ಲ.

ಸಿದ್ಧತೆ ಶುರು ಎಂದ ಸಿಎಂ

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಚುನಾವಣೆ ಯಾವಾಗ ಘೋಷಣೆ ಆಗುತ್ತದೆ ಗೊತ್ತಿಲ್ಲ. ನಾವಂತೂ ಸಿದ್ಧತೆ ಆರಂಭಿಸಿದ್ದೇವೆ. ಶನಿವಾರ ಹಿರಿಯೂರಿಗೆ ನಾನೇ ತೆರಳಿ ಜನರ ಅಹವಾಲಿಗೆ ಕಿವಿ ಆಗುತ್ತೇನೆ ಎಂದಿದ್ದಾರೆ.

ಸಮೀಕ್ಷಾ ವರದಿ ಆಧರಿಸಿ ಅಭ್ಯರ್ಥಿ ಅಂತಿಮ

ಹಿರಿಯೂರಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬ ಬಗ್ಗೆ ಆಡಳಿತ ಪಕ್ಷ ಕಾಂಗ್ರೆಸ್ ಇದುವರೆಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಸಮೀಕ್ಷಾ ವರದಿ ಆಧರಿಸಿ ನಿರ್ಧಾರ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಿದೆ.

ಡಿ.ಸುಧಾಕರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರ ಸುಹಾಸ್‌ಗೆ ಅವಕಾಶ ನೀಡಿದರೆ ಉತ್ತಮ ಎಂಬುದು ಸಿಎಂ ನಿಲುವು. ಆದರೆ., ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಗೊಲ್ಲ ಸಮಾಜದ ಪರ ನಿಂತಿದ್ದಾರೆ.

ಸುಧಾಕರ್ ಪುತ್ರ ಎಂಬ ಹೆಗ್ಗಳಿಕೆ ಬಿಟ್ಟರೆ ಸುಹಾಸ್ ಅವರ ಹಿಂದೆ ಮತ ಬ್ಯಾಂಕ್ ಇಲ್ಲ. ಹೀಗಾಗಿ ಮಾಜಿ ಶಾಸಕಿ, ಗೊಲ್ಲ ಸಮುದಾಯದ ನಾಯಕಿ ಪೂರ್ಣಿಮಾ ಅವರೇ ಸೂಕ್ತ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಿಂದಲೇ ಕೇಳಿ ಬರುತ್ತಿದೆ.

ಜಾತಿ ಮೀರಿ ಜಾತ್ಯತೀತ ವ್ಯಕ್ತಿಯಾಗಿ ಬೆಳೆದಿದ್ದ ಸುಧಾಕರ್ ನಿಧನದ ಬಳಿಕ ಹಿರಿಯೂರು ಕಾಂಗ್ರೆಸ್ ಒಡೆದ ಮನೆಯಾಗಿದೆ. ಅಲ್ಲಿ ಸೃಷ್ಟಿಯಾಗಿರುವ ಬಣ ರಾಜಕಾರಣ ಬದಿಗೊತ್ತಿ ಸಮನ್ವಯತೆ ಸಾಧಿಸ ಬೇಕಿದೆ. ಒಡಕಿಗೆ ತೇಪೆ ಹೆಚ್ಚದೆ ಚುನಾವಣೆಗೆ ಅಣಿಯಾಗುವುದು ಕಷ್ಟ ಎಂಬ ಗುಪ್ತಚರ ವರದಿ ಕೂಡ ಸಿಎಂ ಕೈ ಸೇರಿದೆ.

ಈ ಹಿನ್ನೆಲೆಯಲ್ಲಿ ಸಿಎಂ ದಂಡು ಕಟ್ಟಿಕೊಂಡು ಹಿರಿಯೂರಿನತ್ತ ಹೊರಟಿದ್ದಾರೆ. ತಮ್ಮ ಆಪ್ತ ಸ್ನೇಹಿತ ಸುಧಾಕರ್ ಅವರ ಪುತ್ರ ಸುಹಾಸ್‌ಗೆ ಟಿಕೆಟ್ ಕೊಡಿಸಲು ಅಧ್ಯಕ್ಷರು, ಮಾಜಿ ಸಿಎಂ ಮನ ಒಲಿಸಬೇಕಿದೆ.

ಬಿಜೆಪಿ- ಜೆಡಿಎಸ್‌ಗೆ ಹೊಸ ಹುಮ್ಮಸ್ಸು

ಇನ್ನೊಂದೆಡೆ ಬಿಜೆಪಿ- ಜೆಡಿಎಸ್ ನಾಯಕರೇನೂ ಸುಮ್ಮನೆ ಕುಳಿತಿಲ್ಲ. ಪರಿಷತ್ ಚುನಾವಣೆಯ ಗೆಲುವು ಮೈತ್ರಿಯಲ್ಲಿ ಹೊಸ ಉತ್ಸಾಹ ಚಿಗುರಿಸಿದೆ.

ಪರಿಷತ್ ಚುನಾವಣೆ ಮಾದರಿಯಲ್ಲಿಯೇ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಿ ಒಟ್ಟಾಗಿ ಪ್ರಚಾರಕ್ಕೆ ಹೋದರೆ ಗೆಲುವು ಕಷ್ಟವಲ್ಲ ಎಂಬ ಸಮಿಕ್ಷಾ ವರದಿ ವಿಪಕ್ಷಗಳ ಕೈ ಸೇರಿದೆ.

ಕೈ ಪಡೆಗೆ ತಿರುಗೇಟು ನೀಡಲು ಸರಣಿ ಸಮಾಲೋಚನೆ ಸಭೆಗಳಿಗೆ ಚಾಲನೆ ನಿಡಿದ್ದಾರೆ. ಚುನಾವಣೆ ಚಾಣಕ್ಯ ಅಮಿತ್ ಷಾ ಕೂಡ ಒಟ್ಟಾಗಿ ಚುನಾವಣೆ ಎದುರಿಸಲು ಸಲಹೆ ನೀಡಿದ್ದಾರೆ.

ಅಭ್ಯರ್ಥಿ ಆಯ್ಕೆಗೆ ಚೌಕಾಸಿ

ಮೈತ್ರಿ ಪಕ್ಷದಲ್ಲೂ ಅಭ್ಯರ್ಥಿ ಆಯ್ಕೆ ಅಷ್ಟು ಸುಲಭವಿಲ್ಲ. ಆರಂಭದಲ್ಲಿ ಅಷ್ಟೊಂದು ಆಸಕ್ತಿ ತೋರಿಸದ ಜೆಡಿಎಸ್ ನಾಯಕರು ವಿಧಾನಪರಿಷತ್ ಚುನಾವಣೆ ಗೆಲುವಿನ ಬಳಿಕ ಹಿರಿಯೂರು ಕ್ಷೇತ್ರ ತಮಗೇ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಹಿರಿಯೂರಿನಲ್ಲಿ ಪೂರ್ಣಿಮಾ ಶ್ರೀನಿವಾಸ್ ಅವರ ಮೂಲಕ ಒಮ್ಮೆ ಗೆಲುವಿನ ರುಚಿ ಕಂಡಿರುವ ಬಿಜೆಪಿ ತನಗೆ ಗೆಲುವಿನ ಅವಕಾಶಗಳಿವೆ. ಸಹಕಾರ ಕೊಡಿ ಎಂದು ಪ್ರತಿ ಪಟ್ಟು ಹಾಕಿದ್ದು ಎರಡೂ ಪಕ್ಷಗಳು ಟಿಕೆಟ್‌ಗೆ ಚೌಕಾಸಿ ನಡೆಸಿವೆ.

ಪೂರ್ಣಿಮಾ ಅವರೀಗ ಕಾಂಗ್ರೆಸ್‌ನಲ್ಲಿದ್ದಾರೆ. ಬದಲಾದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಅವರೇ ಕೈ ಅಭ್ಯರ್ಥಿ ಆದರೂ ಅಚ್ಚರಿ ಇಲ್ಲ. ಇವೆಲ್ಲವನ್ನೂ ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ.

ಹಿರಿಯೂರಲ್ಲಿ ಗೊಲ್ಲರು ಹಾಗೂ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದೆ. ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣಗೆ ಬಿಜೆಪಿ ಟಿಕೆಟ್ ನೀಡುತ್ತೇವೆ. ಒಕ್ಕಲಿಗ ಮತ ಬ್ಯಾಂಕ್ ಹೊಂದಿರುವ ಜೆಡಿಎಸ್ ಸಹಕಾರ ಸಿಕ್ಕರೆ ಗೆಲುವು ಸುಲಭ ಎಂಬುದು ಕಮಲ ಪಡೆಯ ಲೆಕ್ಕಾಚಾರ.

ಹಿರಿಯೂರು ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವಂತೆ ಕೋರಲಾಗಿದೆ. ಅಂತಿಮವಾಗಿ ಕೇಂದ್ರದ ನಾಯಕರು ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ. ಪಂಚಾಯಿತಿ ಚುನಾವಣೆ ಸಂಬಂಧ ರಾಜ್ಯ- ಜಿಲ್ಲಾಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ತರಲಾಗುತ್ತದೆ ಎಂದು ವಿಧಾನಸಬೆ ವಿಪಕ್ಷ ನಾಯಕ ಆರ್​.ಅಶೋಕ್​ ತಿಳಿಸಿದ್ದಾರೆ.