ಬೆಂಗಳೂರು: ಅಕ್ರಮ ವಲಸಿಗರಿಗೆ ಆಧಾರ್ ಮತ್ತು ಪಾನ್ಕಾರ್ಡ್ಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಡುತ್ತಿದ್ದ ಆರೋಪದಲ್ಲಿ ಬಂಧನದಲ್ಲಿರುವ ಝೆರಾಕ್ಸ್ ಅಂಗಡಿ ಮಾಲೀಕ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಹೈಕೋರ್ಟ್ ನಿರಾಕರಿಸಿದೆ.
ಪಶ್ಚಿಮ ಬಂಗಾಲ ಮೂಲದ ಅರ್ನಬ್ ಮಂಡಲ್ ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಆರೋಪಿಯು 2024ರಿಂದ ಕಸ್ಟಡಿಯಲ್ಲಿದ್ದು, ಈಗಾಗಲೇ ಗರಿಷ್ಠ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಪೂರೈಸಿದ್ದಾನೆ. ಆದ್ದರಿಂದ ಆತ ಬಿಡುಗಡೆ ಮಾಡಲು ಅರ್ಹನಾಗಿದ್ದಾನೆ ಎಂದು ಕೋರಿದರು. ಅಲ್ಲದೆ, ವಿದೇಶಿಯರ ಕಾಯ್ದೆಯ ಸೆಕ್ಷನ್ 14 ಮತ್ತು 14(ಎ) ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ, ಏಕೆಂದರೆ ಅದು ಭಾರತಕ್ಕೆ ಕಾನೂನುಬಾಹಿರವಾಗಿ ಪ್ರವೇಶಿಸುವ ಅಥವಾ ವೀಸಾ ನಿಯಮಗಳನ್ನು ಉಲ್ಲಂಘಿಸಿ ಉಳಿಯುವ ವಿದೇಶಿಗರಿಗೆ ಮಾತ್ರ ಅನ್ವಯಿಸುತ್ತದೆ ಎಂದು ವಾದಿಸಿದರು.
ಈ ವೇಳೆ ಪ್ರಕರಣದ ತೀವ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ನಕಲಿ ಆಧಾರ್ ಕಾರ್ಡ್ ಮಾಡಿಕೊಡುವ ಮೂಲಕ ನೀವೇ ದೇಶಕ್ಕೆ ತೊಂದರೆ ಉಂಟುಮಾಡುತ್ತಿದ್ದೀರಿ. ಭಾರತೀಯರಲ್ಲದ ಜನರಿಗೆ ಇವುಗಳನ್ನು ನೀಡುತ್ತಿದ್ದೀರಿ. ಇನ್ನು ಎಷ್ಟು ಜನರನ್ನು ದೇಶದೊಳಗೆ ಬಿಟ್ಟುಕೊಳ್ಳುತ್ತೀರಿ? ಇಂದು ಪ್ರತಿಯೊಬ್ಬರ ಬಳಿಯೂ ಆಧಾರ್ ಕಾರ್ಡ್ ಇದೆ, ಇದಕ್ಕೆ ಯಾರು ಕಾರಣ? ನಿಮ್ಮಂತಹ ಜನರೇ ಕಾರಣ. ದೇಶದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇಟ್ಟುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡಿತು.
ಅಂತಿಮವಾಗಿ ಅರ್ಜಿದಾರನಿಗೆ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿರುವ ನ್ಯಾಯಪೀಠ, ಜಾಮೀನು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ನೀಡಿದೆ.
ಏನಿದು ಪ್ರಕರಣ?:
ಪಶ್ಚಿಮ ಬಂಗಾಳ ಮೂಲದ ಆರೋಪಿಯು ನಗರದಲ್ಲಿ ಝೆರಾಕ್ಸ್ ಅಂಗಡಿ ನಡೆಸುತ್ತಿದ್ದು, 2024ರ ನವೆಂಬರ್ನಲ್ಲಿ ಪೊಲೀಸರು ನಡೆಸಿದ ದಾಳಿಯ ನಂತರ ಆತನನ್ನು ಬಂಧಿಸಲಾಗಿತ್ತು. ದಾಳಿಯ ಸಂದರ್ಭದಲ್ಲಿ ನಕಲಿ ಬಾಡಿಗೆ ಒಪ್ಪಂದಗಳು, ನಕಲಿ ಸೀಲುಗಳು ಮತ್ತು ವಿವಿಧ ಹೆಸರುಗಳಲ್ಲಿದ್ದ ಆಧಾರ್ ಕಾರ್ಡ್ ಅರ್ಜಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ವಿರುದ್ಧ ಬಿಎನ್ಎಸ್, ಆಧಾರ್ ಕಾಯ್ದೆ, ವಿದೇಶಿಯರ ಕಾಯ್ದೆ ಹಾಗೂ ಭಾರತೀಯ ಪಾಸ್ಪೋರ್ಟ್ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. #high court
⚠️ ಅಕ್ರಮ ಬಳಕೆ ಹೆಚ್ಚಳ
ಅಕ್ರಮ ವಲಸಿಗರು ನಕಲಿ ಆಧಾರ್ ಕಾರ್ಡ್ಗಳನ್ನು ಬಳಸಿ ನಾಗರಿಕ ಹಕ್ಕುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನಿಮ್ಮಂತಹ ಜನರಿಂದ ಈ ಸಮಸ್ಯೆ ಹೆಚ್ಚುತ್ತಿದೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದರೆ, ಸರ್ಕಾರ ಕೂಡ ಎಷ್ಟು ತಾನೇ ನಿಗಾ ಇಡಲು ಸಾಧ್ಯ ಎಂಬ ಗಂಭೀರ ಪ್ರಶ್ನೆಗಳನ್ನು ನ್ಯಾಯಪೀಠ ಕೇಳಿತು.