ಸಾಂದರ್ಭಿಕ ಚಿತ್ರ.  
ಬೆಂಗಳೂರು

ಶೂ, ಸಾಕ್ಸ್‌ಗಾಗಿ ಕಾದು ಕುಳಿತ ಶಾಲಾ ಮಕ್ಕಳು; 1.88 ಕೋಟಿ ಬಿಡುಗಡೆ, 1.66 ಕೋಟಿ ಬಾಕಿ, ಮೂರನೇ ಕಂತು ಬಿಡುಗಡೆ ಯಾವಾಗ ?

ಕೇಶವಮೂರ್ತಿ ಬೇಲೂರಪ್ಪನವರ

ಪ್ರಮುಖ ಮುಖ್ಯಾಂಶಗಳು

  • ಐದೂವರೆ ತಿಂಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಿಕ್ಕಿಲ್ಲ ಶೂ, ಸಾಕ್ಸ್ ಭಾಗ್ಯ
  • ಗ್ಯಾರಂಟಿ ಸೈಡ್ ಎಫೆಕ್ಟಾ, ಬೇರೆ ಏನಿದೆ ಕಾರಣ ?
  • ಪೂರ್ತಿ ಹಣ ಬಿಡುಗಡೆಗೆ ಸರ್ಕಾರದ ಮೀನಮೇಷ
  • ಗುಣಮಟ್ಟದ ಶೂ, ಸಾಕ್ಸ್ ವಿತರಿಸುವುದು ಅನುಮಾನ
ಹಾವೇರಿ: ಶಾಲೆ ಪ್ರಾರಂಭವಾಗಿ ಐದೂವರೆ ತಿಂಗಳು ಕಳೆದರೂ ಈವರೆಗೆ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಿಸಿಲ್ಲ. ಮೊದಲ ಎರಡು ಕಂತುಗಳಲ್ಲಿ 1.88 ಕೋಟಿ ರೂ. ಬಿಡುಗಡೆ ಮಾಡಿರುವ ಸರ್ಕಾರ, 1.66 ಕೋಟಿ ರೂ. ಬಾಕಿ ಬಿಡುಗಡೆ ಮಾಡಬೇಕಿದೆ. ಹೀಗಾಗಿ, ಹಲವು ಶಾಲೆಗಳ ಮಕ್ಕಳು ಶೂ. ಸಾಕ್ಸ್‌ಗಾಗಿ ಕಾದು ಕುಳಿತಿದ್ದಾರೆ. 
 ಜಿಲ್ಲೆಯಲ್ಲಿ ಒಟ್ಟು 1,283 ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ರಾಜ್ಯ ಸರ್ಕಾರ ಪ್ರತಿ ವರ್ಷ ಆಗಸ್ಟ್ ಒಳಗಾಗಿ ಹಣ ಬಿಡುಗಡೆ ಮಾಡಿ, ಶೂ, ಸಾಕ್ಸ್ ವಿತರಿಸುತ್ತಿತ್ತು. ಆದರೆ, ಈ ಬಾರಿ ಗ್ಯಾರಂಟಿ ಯೋಜನೆಯಿಂದಾಗಿಯೋ ಅಥವಾ ಮತ್ತಿತರ ಕಾರಣಗಳಿಂದಲೋ ಹಣ ಬಿಡುಗಡೆಯಲ್ಲಿ ವಿಳಂಭ ಮಾಡುತ್ತಿದೆ. ಇದರಿಂದಾಗಿ ನವೆಂಬರ್ ಆದರೂ ಇವೆರೆಗೆ ವಿತರಣೆ ಇರಲಿ ಸಂಪೂರ್ಣ ಖರೀದಿಯೂ ಆಗಿಲ್ಲ. 
 ಮೊದಲ ಎರಡು ಕಂತುಗಳಲ್ಲಿ ಶಿಕ್ಷಣ ಇಲಾಖೆ ಕೇಂದ್ರ ಕಚೇರಿ ಜಿಲ್ಲೆಯ ಆಯಾ ಶಾಲೆಗಳ ಎಸ್‌ಡಿಎಂಸಿ ಖಾತೆಗಳಿಗೆ 1,88,69,840 ರೂ. ಬಿಡುಗಡೆ ಮಾಡಿದೆ. ಈ ಹಣದಲ್ಲಿ ಅಂದಾಜು ಶೇ.65ರಷ್ಟು ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಇರುವ 1,66,57,895 ರೂ. ಮೂರನೇ ಕಂತಿನಲ್ಲಿ ಬಿಡುಗಡೆ ಮಾಡಬೇಕಿದೆ. ಈ ಹಣ ಬಿಡುಗಡೆಯಾದರೆ ಎಲ್ಲ ಶಾಲೆಗಳಲ್ಲೂ ಶೂ, ಸಾಕ್ಸ್ ಖರಿದಿ ಪ್ರಕ್ರಿಯೆಗೆ ವೇಗ ಸಿಗಲಿದೆ.  
 ಗುಣಮಟ್ಟದ ಕೊರತೆ 
 ಶಿಕ್ಷಣ ಇಲಾಖೆಯಿಂದ ಆಯಾ ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯೋಪಾಧ್ಯಾಯರ ಜಂಟಿ ಖಾತೆಗೆ ಹಣ ಜಮೆಯಾಗುತ್ತದೆ. ಈ ಹಣದಿಂದ ಶಾಲಾ ಸಮಿತಿಯವರು ಒಂದೆಡೆ ಶೂ, ಸಾಕ್ಸ್ ಖರೀದಿಸಲು ಅನುಮತಿ ಇದೆ. ಕೇಂದ್ರೀಕೃತವಾಗಿ (ಬಲ್ಕ್) ಎಲ್ಲರೂ ಒಂದೇ ಕಡೆ ಖರೀದಿಸಬಾರದು. ಇಲಾಖೆಯ ಅಧಿಕಾರಿಗಳ ಹಸ್ತಕ್ಷೇಪ ಇರಬಾರದು ಎಂಬ ಆದೇಶವಿದೆ. ಆದರೆ, ಕೆಲ ಬಿಇಒ ಹಾಗೂ ಇತರ ಅಧಿಕಾರಿಗಳ ಒತ್ತಡಕ್ಕೆ ಒಳಗಾಗಿ ಹಲವು ಶಾಲೆಗಳು ಒಂದೇ ಕಡೆ ಖರೀದಿಸುತ್ತಾರೆ. ಇದರಿಂದ ಗುಣಮಟ್ಟದ ಕೊರತೆ ಕಾಣಿಸುತ್ತಿದೆ. ಕೆಲ ಪ್ರತಿಷ್ಠಿತ ಕಂಪನಿಯವರೇ ಸರ್ಕಾರಿ ಶಾಲೆಗಳಿಗಾಗಿಯೇ ಕಡಿಮೆ ಗುಣಮಟ್ಟದ ಉತ್ಪನ್ನ ತಯಾರಿಸುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ.  
 ಕೋಟ್: 
"

ಒಂದು ವಾರದೊಳಗೆ ಇಲಾಖೆಯಿಂದ ಬಾಕಿ ಹಣ ಬರಲಿದೆ. ಅಷ್ಟರೊಳಗೆ ಖರೀದಿ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ. ಕೇಂದ್ರೀಕೃತವಾಗಿ ಒಂದೇ ಕಡೆ ಖರೀದಿ ಮಾಡದಂತೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಖರೀದಿ ಮಾಡಿರುವ ಕಡೆಗಳಲ್ಲಿ ಕೂಡಲೇ ವಿತರಿಸಲು ಆದೇಶಿಸಲಾಗಿದೆ. ಗುಣಮಟ್ಟದ ಕುರಿತು ನಾನೇ ಖುದ್ದಾಗಿ ಪರಿಶೀಲಿಸುತ್ತೇನೆ.

  ದರ ಎಷ್ಟು ? 
 1ರಿಂದ 5ನೇ ತರಗತಿ- 260 ರೂ.
 6ರಿಂದ 8ನೇ ತರಗತಿ- 295 ರೂ.  
 9ರಿಂದ 10ನೇ ತರಗತಿ- 325 ರೂ. 
 ತಾಲೂಕುವಾರು ಮಾಹಿತಿ 
 ತಾಲೂಕು     ಶಾಲೆಗಳ ಸಂಖ್ಯೆ    ಶೂ ಖರೀದಿಸಿದ ಶಾಲೆಗಳು     ಬಾಕಿ ಇರುವ ಶಾಲೆಗಳು 
 ಬ್ಯಾಡಗಿ              118                      79                                39 
 ಹಾನಗಲ್ಲ             249                     179                               70 
 ಹಾವೇರಿ              183                     136                               47 
 ಹಿರೇಕೆರೂರ          223                     161                               62 
 ರಾಣೆಬೆನ್ನೂರ         206                     172                               34 
 ಸವಣೂರ             127                      98                                29 
 ಶಿಗ್ಗಾಂವಿ               177                     127                               50 
 ----------------------------------------------
 ಒಟ್ಟು                 1,283                   952                                331