ಗೃಹ ಸಚಿವ ಪ್ರಿಯಾಂಕ್​ ಖರ್ಗೆ , ಮಾಜಿ ಸಿಎಂ ಸಿದ್ದರಾಮಯ್ಯ  
ಬೆಂಗಳೂರು

ಜೆಡಿಎಸ್ ಬಾಗಿಲಿಗೆ ಬಂತಾ ಸ್ಟಿಂಗ್ ತನಿಖೆ ಜಾಡು ?

ಒಂದು ವಾರ ಸಮಯ ಕೊಡಿ ಸಾಕು! ಸ್ಟಿಂಗ್ ಆಪರೇಷನ್ ತನಿಖೆಯ ಹಿಂದಿರುವ ಮುಖಗಳನ್ನು ಬಯಲು ಮಾಡುತ್ತೇನೆ ಎಂದು ಹೇಳುತ್ತಲೇ. ತನಿಖೆ ಈಗ ಯಾರ ಮನೆ ಬಾಗಿಲಿಗೆ ಹೋಗಿ ನಿಂತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಜೆಡಿಎಸ್ ಹೆಸರು ಹೇಳದೆ ಪ್ರಶ್ನಿಸಿದ್ದಾರೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ - ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ವಿರುದ್ದದ ತನಿಖೆಯ ಜಾಡು ಜೆಡಿಎಸ್ ಮನೆ ಬಾಗಿಲಿಗೆ ಹೋಗಿ ನಿಂತಿದೆಯೇ ?

ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಆಡಿದ ಮಾತು ಇದಕ್ಕೆ ಪುಷ್ಟಿ ನೀಡುತ್ತದೆ.

ಆರಂಭದಲ್ಲಿ ಪರೋಕ್ಷವಾಗಿ ಬಳಿಕ ನೇರವಾಗಿ ಕೇಂದ್ರ ಸಚಿವರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ ಕಾರಿರುವುದು ಜೆಡಿಎಸ್‌ನತ್ತ ಸಂದೇಹದಿಂದ ನೋಡುವಂತಾಗಿದೆ.

ಒಂದು ವಾರ ಸಮಯ ಕೊಡಿ ಸಾಕು! ಸ್ಟಿಂಗ್ ಆಪರೇಷನ್ ತನಿಖೆಯ ಹಿಂದಿರುವ ಮುಖಗಳನ್ನು ಬಯಲು ಮಾಡುತ್ತೇನೆ ಎಂದು ಹೇಳುತ್ತಲೇ. ತನಿಖೆ ಈಗ ಯಾರ ಮನೆ ಬಾಗಿಲಿಗೆ ಹೋಗಿ ನಿಂತಿದೆ ಎಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟಿದ್ದಾರೆ.

ಒಂದು ವಾರದೊಳಗೆ ಎಲ್ಲ ವಿಷಯಗಳು ಹೊರಬರಲಿವೆ. ಕೆಲವು ವಿಚಾರಗಳು ಈಗಲೇ ಬರುತ್ತಿವೆ. ಕಳೆದ ಎರಡು-ಮೂರು ದಿನಗಳಿಂದ ಏಕೋ ಮಾತನಾಡುತ್ತಿಲ್ಲ ಅಲ್ವಾ? ಎಂದು ಕುಮಾರ ಸ್ವಾಮಿ ಅವರ ಹೆಸರು ಹೇಳದೆ ಪ್ರಶ್ನಿಸಿದರು.

ನೀವು ಮೂರು ಜನರನ್ನು ನಾಪತ್ತೆ ಮಾಡಿಸಿದ್ದಿರಲ್ಲಾ ಅವರನ್ನು ಕರೆದುಕೊಂಡು ಬನ್ನಿ ಎಂದು ನಾನು ಕುಮಾರಸ್ವಾಮಿ ಅವರಿಗೆ ಹೇಳುತ್ತಿದ್ದೇನೆ.

ನಿಮಗಿದು ಸುವರ್ಣ ಅವಕಾಶ ದಯವಿಟ್ಟು ಆ ಮೂವರನ್ನೂ ಕರೆದುಕೊಂಡು ಬನ್ನಿ. ಬೇಗ ತನಿಖೆ ಮುಗಿಸೋಣ ಎಂದು ಬಹಿರಂಗ ಸವಾಲು ಹಾಕಿದರು.

ಕಾಂಗ್ರೆಸ್ ಸರ್ಕಾರವನ್ನು ಎಕ್ಸ್‌ಪೋಸ್ ಮಾಡಲು ಹೋಗಿ ಅವರೇ ಎಕ್ಸ್‌ಪೋಸ್ ಆಗಿದ್ದಾರಾ.? ಅದೇನೇ ಇರಲಿ ವಾರದಲ್ಲಿ ತನಿಖೆಗೆ ಇತಿಶ್ರೀ ಹಾಡುತ್ತೇವೆ ಎಂದರು.

ಹೈಕಮಾಂಡ್ ಅಂಗಳ ತಲುಪಿದ ಸ್ಟಿಂಗ್

ಮಾಜಿ ಮುಖ್ಯಮಂತ್ರಿ ಗುರಿಯಾಗಿಸಿ ನಡೆದಿತ್ತೆನ್ನಲಾದ ಸ್ಟಿಂಗ್ ಆಪರೇಷನ್ ಇದೀಗ ಹೈಕಮಾಂಡ್ ಅಂಗಳ ತಲುಪಿದೆ. ಮೊನ್ನೆ ದಿಲ್ಲಿಗೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಪೂರ್ಣ ವಿವರ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸಿದ್ದರಾಮಯ್ಯಅವರೇ ತಿಳಿಸಿದಂತೆ ಈ ವಿಷಯ ಈಗಾಗಲೇ ರಾಹುಲ್ ಗಾಂಧಿ ಅವರ ಕಿವಿಗೂ ಬಿದ್ದಿದೆ. ಸಮಯ ನೀಡಿದರೆ ಅವರನ್ನೂ ಭೇಟಿ ಮಾಡಿ ಚರ್ಚಿಸುವೆ ಎಂದಿದ್ದಾರೆ.

ಸ್ಟಿಂಗ್ ಫ್ಯಾಕ್ಟರಿ ಓಪನ್

ಸ್ಟಿಂಗ್ ಕುರಿತು ತೀವ್ರ ಅಸಮಧಾನ ಹೊರ ಹಾಕಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ರಾಜ್ಯದಲ್ಲೀಗ ಎಲ್ಲ ಮಹಾಶಯರ ಸ್ಟಿಂಗ್ ಫ್ಯಾಕ್ಟರಿ ಓಪನ್ ಆಗಿವೆ. ಇದೊಂಥರ ಕಾಮನ್ ಆಗಿ ಹೋಗಿದೆ ಎಂದು ಕಿಡಿ ಕಾರಿದ್ದಾರೆ.

ಕನಾಟಕದ ರಾಜಕಾರಣಿಗಳು ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮೊದಲು ಈ ಫ್ಯಾಕ್ಟರಿಗಳನ್ನು ಮುಚ್ಚಿಸಬೇಕು ಎಂದು ಅಭಿಪ್ರಾಯಪಟ್ಟರು.