ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕೈಮಗ್ಗ ಮೇಳ&2026 ಕಾರ್ಯಕ್ರಮವನ್ನು ಸಂದ ಡಾ.ಸಿಎನ್​. ಮಂಜುನಾಥ್​ ಉದ್ಘಾಟಿಸಿದರು.  
ಬೆಂಗಳೂರು

ಜವಳಿ ಕ್ಷೇತ್ರದ ಮೂಲ ಪರಂಪರೆ ಕೈಮಗ್ಗ

ಬೆಂಗಳೂರು: ದೇಶದ ಕೈಮಗ್ಗವು ಜವಳಿ ಕ್ಷೇತ್ರದ ಮೂಲ ಪರಂಪರೆ. ಈ ಉದ್ಯಮ ರಕ್ಷಣೆಗಾಗಿ ಉತ್ತೇಜನ ನೀಡುವ ಕಾರ್ಯಕ್ರಮಗಳು ಸರ್ಕಾರದಿಂದ ಹೆಚ್ಚಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್​. ಮಂಜುನಾಥ್​ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕೈಮಗ್ಗ ಮೇಳ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲಕ್ಷಾಂತರ ನೇಕಾರ ಕುಟುಂಬಗಳು ಕೈಮಗ್ಗದ ಮೇಲೆ ಅವಲಂಭಿತರಾಗಿದ್ದಾರೆ. ಅವರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಉತ್ಪನ್ನಗಳನ್ನು ಜನರು ಖರೀದಿ ಮಾಡಬೇಕಾದರೆ ಮಾರುಕಟ್ಟೆಯಲ್ಲಿ ಬ್ರಾ$್ಯಂಡ್​ ಆಗಿ ಮಾಡಬೇಕು. ಆಗ ಬೇಡಿಕೆ ಹೆಚ್ಚಾಗಲು ಸಾಧ್ಯ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಸಲಹೆ ನೀಡಿದರು.
ಜವಳಿ ಅಭಿವೃದ್ಧಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ದೇಶಕ ಎ.ಬಿ. ಬಸವರಾಜು ಮಾತನಾಡಿ, ಜವಳಿ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಹೂಡಿಕೆ, ಉತ್ತೇಜನ ನೀಡುವ ಉದ್ದೇಶದಿಂದ ನೂತನ ಜವಳಿ ನೀತಿಯ ಕರಡು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚು ಉದ್ಯೋಗಳನ್ನು ಸೃಷ್ಟಿಸುವುದರಲ್ಲಿ ಉದ್ಯಮ ಮುಂದಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ 25 ಸಾವಿರ ಕೋಟಿಯಷ್ಟು ವಹಿವಾಟು ನಡೆಯುತ್ತಿದ್ದು, 2031ರ ವೇಳೆಗೆ 75 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಇದೆ. ಮುಂದಿನ ಮೇಳವನ್ನು ಬೀದರ್​, ದೇವನಹಳ್ಳಿಯಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 1.5 ಲಕ್ಷ ನೇಕಾರರು, ಜವಳಿ ವಲಯದಲ್ಲಿ ಸುಮಾರು 8 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ತಂತ್ರಜ್ಞಾನ ಅಳವಡಿಕೆ, ಪವರ್​ಲೂಮ್​ಗಳ ಆಧುನೀಕರಣ ಹಾಗೂ ಕೈಮಗ್ಗ ಕ್ಷೇತ್ರದ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾ, ಬೆಂಗಳೂರು ನಗರ, ಮೈಸೂರು, ಹಾಸನ, ಬಳ್ಳಾರಿ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳನ್ನು ಕೈಮಗ್ಗ ಜಿಲ್ಲೆಗಳೆಂದು ಗುರುತಿಸಲಾಗಿದ್ದು, ಇಲ್ಲಿ ಕೈಗಾರಿಕೋದ್ಯಮಿಗಳಿಗಾಗಿ ರಫ್ತು ವಿಧಾನ ಮತ್ತು ಜಾಗತಿಕ ಮಾರುಕಟ್ಟೆಯ ಅವಕಾಶಗಳ ಕುರಿತು ತರಬೇತಿ ನೀಡಲಾಗುವುದು. ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್​, ಕಾವೇರಿ ಹ್ಯಾಂಡ್​ಲೂಮ್ಸ್​ ಅಧ್ಯಕ್ಷ ಬಿ.ಜೆ. ಗಣೇಶ್​, ಕೈಮಗ್ಗ ಅಭಿವೃದ್ಧಿ ನಿಗಮದ ಎಂಡಿ ಗರಿಮಾ ಪನ್ವಾರ್​, ಹ್ಯಾಂಡ್​ಲೂಮ್ಸ್​ನ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ, ಕೈಮಗ್ಗ ಮತ್ತು ಜವಳಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಸಿ.ಎಸ್​. ಯೋಗೇಶ್​, ಶ್ರೀಧರ್​ ನಾಯಕ್​, ಕಾವೇರಿ ಉಪಸ್ಥಿತರಿದ್ದರು.
- ಶಿಕ್ಷಣ, ಉದ್ಯೋಗಕ್ಕೆ ಉತ್ತೇಜನ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್​ ಮಾತನಾಡಿ, ನೇಕಾರರ ಕುಟುಂಬಗಳಿಗೆ ವಸತಿ, ಕೈಮಗ್ಗ ಉಪಕರಣಗಳಿಗೆ ವಿಶೇಷ ಸಹಾಯಧನ, ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಉತ್ತೇಜನ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಕೈಮಗ್ಗ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸರ್ಕಾರದ ಜತೆಗೆ ಸಾರ್ವಜನಿಕರ ಜವಾಬ್ದಾರಿಯೂ ಇದೆ ಎಂದು ಹೇಳಿದರು.
ಕೋಟ್​:
ನಾಲ್ವಡಿ ಕೃಷ್ಣರಾಜ ಒಡೆಯರ್​ ಕಾಲದಿಂದಲೂ ರಾಜ್ಯದಲ್ಲಿ ಜವಳಿ ಮತ್ತು ಕೈಗಾರಿಕಾ ಕ್ಷೇತ್ರ ಛಾಪು ಮೂಡಿಸಿದೆ. ಈ ಉದ್ಯಮಗಳ ಉಳಿವಿಗಾಗಿ ಸರ್ಕಾರಗಳು ಕ್ರಮವಹಿಸಬೇಕು
- ಮುನಿರತ್ನ, ಶಾಸಕ, ಆರ್​ಆರ್​ ನಗರ.