local-bodies 
ಬೆಂಗಳೂರು

ಸ್ಥಳೀಯ ಸಂಸ್ಥೆಗಳ ಆರ್ಥಿಕ ಸದೃಢತೆಗೆ ಸರ್ಕಾರದ ಕ್ರಮ

ಪ್ರಮುಖ ಮುಖ್ಯಾಂಶಗಳು

  • ನಗರ ಆಡಳಿತ, 24/7 ನೀರು ಪೂರೈಕೆ, ಸುಸ್ಥಿರ ಸಾರಿಗೆಗೆ ಆದ್ಯತೆ
  • ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು: ನಗರ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಕ್ರೋಡೀಕರಿಸುವುದು ಅತ್ಯಂತ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸದೃಢತೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್​​ಸಿ) ಬುಧವಾರ ಆಯೋಜಿಸಿದ್ದ ನಗರ ಮೂಲಸೌಕರ್ಯ ಮತ್ತು ಹೂಡಿಕೆಗಳ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಸ್ತಿ ತೆರಿಗೆ ಸಂಗ್ರಹಣೆಯ ಸುಧಾರಣೆ, ಜಿಐಎಸ್ ಆಧಾರಿತ ಆಸ್ತಿ ಮೌಲ್ಯಮಾಪನ, ಡಿಜಿಟಲ್ ನಗರ ಸೇವೆಗಳು ಹಾಗೂ ಮುನಿಸಿಪಲ್ ಬಾಂಡ್‌ನಂತಹ ನವೀನ ಬಗೆಯ ಹಣಕಾಸು ವ್ಯವಸ್ಥೆಗಳ ಮೂಲಕ ನಗರಗಳಿಗೆ ಅಗತ್ಯವಿರುವ ಸಂಪನ್ಮೂಲ ಹೆಚ್ಚಿಸಲು ಗಮನಹರಿಸಲಾಗುತ್ತಿದೆ ಎಂದರು.

ಪ್ರಾದೇಶಿಕ ಆರ್ಥಿಕ ಬೆಳವಣಿಗೆಯ ಹಬ್:

ರಾಜ್ಯದ ನಗರಗಳು ಉದ್ಯಮ, ನಾವೀನ್ಯತೆ, ಶಿಕ್ಷಣ, ಉದ್ಯೋಗ ಮತ್ತು ಹೂಡಿಕೆಯ ಪ್ರಮುಖ ಕೇಂದ್ರಗಳಾಗಿ ವೇಗವಾಗಿ ಬೆಳೆಯುತ್ತಿವೆ. ಬೆಂಗಳೂರು ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದರ ಜತೆಗೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿ ವಿವಿಧ ನಗರಗಳು ಪ್ರಾದೇಶಿಕ ಆರ್ಥಿಕ ಬೆಳವಣಿಗೆಯ ಪ್ರಮುಖ ಹಬ್ ಆಗಿ ಹೊರಹೊಮ್ಮುತ್ತಿರುವುದು ಪ್ರಗತಿಯ ಸಂಕೇತ ಎಂದು ಸಚಿವರು ಸ್ಪಷ್ಟಪಡಿಸಿದರು.

ನೀರು, ಒಳಚರಂಡಿ ಮೂಲಸೌಕರ್ಯಕ್ಕೆ ಒತ್ತು:

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ 24/7 ನೀರು ಸರಬರಾಜು ಯೋಜನೆಗಳನ್ನು ವಿಸ್ತರಿಸುವುದು, ರಾಜ್ಯದ ವಿವಿಧ ನಗರಗಳಲ್ಲಿ ನೀರು ಮತ್ತು ಒಳಚರಂಡಿ ಮೂಲಸೌಕರ್ಯವನ್ನು ಬಲಪಡಿಸುವುದು ಹಾಗೂ ತ್ಯಾಜ್ಯನೀರಿನ ಸಂಸ್ಕರಣೆ ಮತ್ತು ಮರುಬಳಕೆಗೆ ಉತ್ತೇಜನ ನೀಡಲು ಸರ್ಕಾರ ಆದ್ಯತೆ ನೀಡಿದೆ ಎಂದು ಸಚಿವ ಡಾ. ಯತೀಂದ್ರ ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆಯುಐಡಿಎಫ್​​ಸಿ ಅಧ್ಯಕ್ಷ ಎಸ್.ಎನ್. ನಾರಾಯಣಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಭೂ ಬಾಲನ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ ಸೇರಿ ಇತರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಜನಕೇಂದ್ರಿತ ಮತ್ತು ಸುಸ್ಥಿರ ನಗರ ಸಾರಿಗೆ:

ನಗರಗಳಲ್ಲಿ ಹೆಚ್ಚುತ್ತಿರುವ ಸಂಚಾರ ಸಿಕ್ಕು ಹಾಗೂ ಪ್ರಯಾಣದ ಅಗತ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಬಲಪಡಿಸಬೇಕಿದೆ. ಜತೆಗೆ ಉಪನಗರ ರೈಲು ವ್ಯವಸ್ಥೆ, ಪಾದಚಾರಿ ಮತ್ತು ಸೈಕಲ್ ಮೂಲಸೌಕರ್ಯ ಹಾಗೂ ತಂತ್ರಜ್ಞಾನ ಆಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

4 ಪ್ರಮುಖ ಆಧಾರ ಸ್ತಂಭಗಳಿಗೆ ಆದ್ಯತೆ:

ರಾಜ್ಯದ ನಗರಾಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ 4 ಪ್ರಮುಖ ಆಧಾರ ಸ್ತಂಭಗಳ ಮೇಲೆ ವಿಶೇಷ ಗಮನಹರಿಸುತ್ತಿದೆ. ನಗರ ಆಡಳಿತ ಮತ್ತು ಸಮಗ್ರ ಯೋಜನೆ, ಮೂಲಸೌಕರ್ಯ ಅಭಿವೃದ್ಧಿಗೆ ಪರಿಣಾಮಕಾರಿ ಹಣಕಾಸು ವ್ಯವಸ್ಥೆ/ಯೋಜನೆಗಳ ಸಮರ್ಪಕ ಅನುಷ್ಠಾನ, 24/7 ಕುಡಿಯುವ ನೀರು, ಒಳಚರಂಡಿ ಸೌಲಭ್ಯ ಹಾಗೂ ಸುಸ್ಥಿರ, ಜನಕೇಂದ್ರಿತ ನಗರ ಸಾರಿಗೆ ವ್ಯವಸ್ಥೆಯತ್ತ ಕೇಂದ್ರೀಕರಿಸಲಾಗಿದೆ ಎಂದು ಸಚಿವರು ತಿಳಿಸಿದರು.