ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ  
ಬೆಂಗಳೂರು

ಉದ್ಯೋಗ ನೀತಿ ಪಾಲನೆಗೆ ಸರ್ಕಾರ ಸೂಚನೆ

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಸರ್ಕಾರ ಭೂಮಿ, ವಿದ್ಯುತ್, ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸುತ್ತದೆ ಹೀಗಿರುವಾಗ ಕನ್ನಡಿಗರಿಗೆ ಉದ್ಯೋಗ ನೀಡುವ ಬದ್ಧತೆಯನ್ನು ಅವರೂ ಪ್ರದರ್ಶಿಸಬೇಕು ಎಂದು ಡಿಸಿಎಂ ಡಾ. ಜಿ.ಪರಮೇಶ್ವರ ಉದ್ಯಮಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ಯಮಿಗಳು ಅರ್ಹ, ಸ್ಥಳೀಯ ಕನ್ನಡಿಗರಿಗೆ ಉದ್ಯೋಗವಕಾಶ ನೀಡಬೇಕು ಎಂಬ ನೀತಿ ಪಾಲಿಸುವಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಗಂಗಡಿ ಉದ್ಯಮಿಗಳಿಗೆ ಪಾಠ ಹೇಳಿದ್ದಾರೆ.

ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯಸರ್ಕಾರ ಭೂಮಿ, ವಿದ್ಯುತ್, ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸುತ್ತದೆ ಹೀಗಿರುವಾಗ ಕನ್ನಡಿಗರಿಗೆ ಉದ್ಯೋಗ ನೀಡುವ ಬದ್ಧತೆಯನ್ನೂ ಅವರೂ ಪ್ರದರ್ಶಿಸಬೇಕು ಎಂದು ಸೋಮವಾರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬುದು ಹೊಸ ವಿಚಾರವೇನಲ್ಲ. ಈ ನೀತಿ ಮೊದಲಿನಿಂದ ಜಾರಿಯಲ್ಲಿದೆ. ಎಲ್ಲ ಕೈಗಾರಿಕೆಗಳು ಪಾಲಿಸಬೇಕು. ನಾವೇನೂ ಅರ್ಹತೆ ಇಲ್ಲದವರಿಗೆ ಉದ್ಯೋಗ ನೀಡಬೇಕೆಂದು ಹೇಳುತ್ತಿಲ್ಲ.

ಅಗತ್ಯ ವಿದ್ಯಾರ್ಹತೆ ಹಾಗೂ ಕೌಶಲ ಹೊಂದಿದ ಕನ್ನಡಿಗರಿಗೆ ಅವರ ಅರ್ಹತೆ ಆಧರಿಸಿ ಉದ್ಯೋಗ ನೀಡಬೇಕು. ಈ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಿದೆ. ಮುಖ್ಯಮಂತ್ರಿ ಕೂಡ ಇದನ್ನೇ ಹೇಳಿದ್ದಾರೆ ಎಂದರು.

ಕೆಲವು ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಅಟೆಂಡರ್ ಹಾಗೂ ಕೆಳಹಂತದ ಹುದ್ದೆಗಳನ್ನು ನೀಡುತ್ತಿರುವ ಬಗ್ಗೆ ವರದಿಯಾಗಿದೆ. ಈ ಪ್ರವೃತ್ತಿ ಸರಿಯಲ್ಲ. ಅರ್ಹತೆ, ವಿದ್ಯಾರ್ಹತೆ ಹಾಗೂ ಕೌಶಲಕ್ಕೆ ಅನುಗುಣ ಸೂಕ್ತ ಹುದ್ದೆಗಳನ್ನು ನೀಡಬೇಕು ಎಂದು ತಾಕೀತು ಮಾಡಿದರು.

ಖಾಸಗಿ ಕೈಗಾರಿಕಾ ವಲಯಗಳಲ್ಲಿ ಕನ್ನಡಿಗರ ಉದ್ಯೋಗದ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಿದೆ ಇದು ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ತಂತ್ರಜ್ಞಾನದ ರಾಜಧಾನಿಯಾಗಿ ಬೆಂಗಳೂರು ಗುರುತಿಸಿಕೊಂಡಿದೆ ಎಂದರೆ ಅದರ ಹಿಂದೆ ಕನ್ನಡಿಗರ ಪರಿಶ್ರಮ, ಪ್ರತಿಭೆ, ಬೌದ್ಧಿಕ ಸಾಮರ್ಥ್ಯ, ಉದ್ಯಮಶೀಲತೆಯ ಕೊಡುಗೆ ಇದೆ.

ವಸ್ತುಸ್ಥಿತಿ ಹೀಗಿದ್ದಾಗ ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಅನ್ಯಾಯ ಆಗುತ್ತಿದೆ. ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಲಾಗುತ್ತಿದೆ ಎಂಬುದು ಸರಿಯಲ್ಲ. ನಾವಿದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಅರ್ಹತೆ ಇಲ್ಲದೆ ತಿರಸ್ಕರಿಸುವುದು ಬೇರೆ ಆದರೆ ಮಾತೃಭಾಷೆ ಕನ್ನಡ ಎಂಬ ಕಾರಣಕ್ಕೆ ನಿರಾಕರಿಸುವ ಉದ್ಧಟತನ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ನೆಲದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆ ಕನ್ನಡಿಗರ ಪ್ರತಿಭೆ- ಸಾಮರ್ಥ್ಯ ನಿರ್ಲಕ್ಷ್ಯ ಮಾಡಬಾರದು. ಕನ್ನಡಿಗರಿಗೆ ನ್ಯಾಯಯುತ ಉದ್ಯೋಗವಕಾಶ ಸಿಗಬೇಕು. ಯಾವುದೇ ಕಂಪೆನಿ ಈ ವಿಷಯದಲ್ಲಿ ನಿಜವಾಗಿ ಉದ್ದಟತನ ತೋರಿದರೆ ಸರ್ಕಾರಕ್ಕೆ ದೂರು ನೀಡಬಹುದು ಎಂದು ಸಲಹೆ ನಿಡಿದ್ದಾರೆ.