- ನೀಲಿ ಮಾರ್ಗಕ್ಕೆ ಮತ್ತೆ ವಿಳಂಬದ ಭೀತಿ
- ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಪ್ರಯಾಣಿಕರ ನಿರೀಕ್ಷೆಗೆ ಮತ್ತೊಂದು ಹೊಡೆತ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋದ ಬಹುನಿರೀಕ್ಷಿತ ನೀಲಿ ಮಾರ್ಗಕ್ಕೆ ಮೊದಲ ಚಾಲಕರಹಿತ ರೈಲು ಸೆಟ್ ಆಗಮಿಸಿರುವುದು ನಗರದ ಸಾರ್ವಜನಿಕರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದರೂ, ಕಾಮಗಾರಿ ಅಪೂರ್ಣವಾಗಿರುವುದು ಆ ನಿರೀಕ್ಷೆಗೆ ತಣ್ಣೀರು ಎರಚಿದೆ.
ಸಿಲ್ಕ್ಬೋರ್ಡ್ನಿಂದ ಕೆ.ಆರ್.ಪುರಂವರೆಗಿನ ಮೊದಲ ಹಂತದ 2ಎ ಮಾರ್ಗದಲ್ಲಿ ಇನ್ನೂ ಪೂರ್ಣ ಪ್ರಮಾಣದ ಹಳಿ ಸಿದ್ಧವಾಗಿಲ್ಲದ ಕಾರಣ ಹೊಸ ರೈಲಿನ ಪರೀಕ್ಷಾ ಸಂಚಾರವೇ ಆರಂಭಿಸಲು ಸಾಧ್ಯವಾಗದ ಪರಿಸ್ಥಿತಿ ನಿಮಾರ್ಣವಾಗಿದೆ.
ಸಿಲ್ಕ್ಬೋರ್ಡ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58 ಕಿ.ಮೀ. ಉದ್ದದ ನೀಲಿ ಮಾರ್ಗ ಕಾಮಗಾರಿ ಹಲವು ವರ್ಷಗಳಿಂದ ಸಾಗುತ್ತಿದ್ದು, ಇನ್ನೂ ಸಂಪೂರ್ಣಗೊಳ್ಳಿಲ್ಲ. ಮೊದಲ ಹಂತದ 19.5 ಕಿ.ಮೀ. ಮಾರ್ಗದಲ್ಲಿ ಕೇವಲ ಶೇ.86ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. ಹೀಗಾಗಿ 2026ರ ಡಿಸೆಂಬರ್ನಲ್ಲಿ ಉದ್ಘಾಟನೆ ಮಾಡುವ ಗುರಿ ಮತ್ತೊಮ್ಮೆ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ.
ನಗರದ ಅತ್ಯಂತ ದಟ್ಟ ಸಂಚಾರದ ಐಟಿ ಕಾರಿಡಾರ್ಗಳಾದ ಹೊರವರ್ತುಲ ರಸ್ತೆ, ಮಾರತ್ತಹಳ್ಳಿ, ಮಹಾದೇವಪುರ, ಕೆ.ಆರ್.ಪುರಂ ಹಾಗೂ ಎಚ್ಎಸ್ಆರ್ ಭಾಗದ ಲಕ್ಷಾಂತರ ಜನರು ಈ ಮಾರ್ಗದ ಕಾರ್ಯಾಚರಣೆಯನ್ನು ಎದುರು ನೋಡುತ್ತಿದ್ದಾರೆ. ಆದರೆ ಬಾಕಿ ಉಳಿದಿರುವ ಸಿವಿಲ್, ಟ್ರ್ಯಾಕ್ ಹಾಗೂ ವ್ಯವಸ್ಥಾಪನಾ ಕಾಮಗಾರಿಗಳು ಪೂರ್ಣಗೊಳ್ಳಲು ಇನ್ನೂ ಹಲವು ತಿಂಗಳುಗಳು ಬೇಕಾಗುವ ಸಾಧ್ಯತೆ ಇದೆ.
ರೈಲುಗಳ ತಪಾಸಣೆ, ಪ್ರಾಯೋಗಿಕ ಸಂಚಾರ ಹಾಗೂ ಸುರಕ್ಷತಾ ಪರೀಕ್ಷೆಗಳಿಗೆ ಕೂಡ ಸಾಕಷ್ಟು ಸಮಯದ ಅಗತ್ಯವಿದೆ. 13 ನಿಲ್ದಾಣಗಳ ನಿಮಾರ್ಣ ಮತ್ತು ಪ್ರಮುಖ ಗರ್ಡರ್ ಅಳವಡಿಕೆ ಪೂರ್ಣಗೊಂಡಿದ್ದರೂ ಅಂತಿಮ ಹಂತದ ಕೆಲಸಗಳು ಬಾಕಿಯಿರುವುದರಿಂದ ನೀಲಿ ಮಾರ್ಗವು 2027ರ ಮೊದಲಾರ್ಧದಲ್ಲಿ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆ ಕಾಣಿಸುತ್ತಿದೆ. ಬೆಂಗಳೂರಿನ ಸಂಚಾರ ಸಿಕ್ಕಿನ ಸಮಸ್ಯೆಗೆ ಪರಿಹಾರವೆಂದು ಪರಿಗಣಿಸಲಾದ ಈ ಮಹತ್ವಾಕಾಂಕ್ಷಿ ಯೋಜನೆ ಮತ್ತೊಮ್ಮೆ ವಿಳಂಬದ ಸುಳಿವು ನೀಡಿರುವುದು ಪ್ರಯಾಣಿಕರಲ್ಲಿ ನಿರಾಸೆ ಮೂಡಿಸಿದೆ.