gba office 
ಬೆಂಗಳೂರು

ಜಿಬಿಎ: ಸಣ್ಣ ವಾರ್ಡ್‌ ಬೃಹತ್​ ಸವಾಲು

ಪ್ರಮುಖ ಮುಖ್ಯಾಂಶಗಳು

  • ಕಡಿಮೆ ವೋಟರ್ಸ್​​​ ಇರುವೆಡೆ ತೀವ್ರ ಸ್ಪರ್ಧೆ ಸಾಧ್ಯತೆ
  • ಗ್ರೇಟರ್​​ ಬೆಂಗಳೂರು ಎಲೆಕ್ಷನ್​​ ಕೌತುಕ
ಬೆಂಗಳೂರು: ಪಂಚ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಣ್ಣ ವಾರ್ಡ್‌ಗಳನ್ನು ರಚಿಸಿರುವುದು ಅಭ್ಯರ್ಥಿಗಳು ತಮ್ಮ ಗೆಲುವಿನಗೆ ತೀವ್ರ ಪೈಪೋಟಿ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಇದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಕಾರ್ಪೋರೇಷನ್‌ಗಳಲ್ಲಿ ಚುನಾವಣೆ ತಂತ್ರಗಾರಿಕೆ ನಡೆಸುವ ರಾಜಕೀಯ ಪಕ್ಷಗಳಿಗೆ ಹೊಸ ಸವಾಲು ಒಡ್ಡಿದೆ.
ನಿಕಟಪೂರ್ವ ಬಿಬಿಎಂಪಿ ವಿಂಗಡಿಸಿ ಐದು ಪಾಲಿಕೆಗಳನ್ನು ರಚಿಸಲಾಗಿದೆ. ಈ ಪಾಲಿಕೆಗಳ ಪ್ರದೇಶದಲ್ಲಿನ ಜನಸಂಖ್ಯೆ ಹಾಗೂ ಮತದಾರರನ್ನು ಆಧರಿಸಿ ವಾರ್ಡ್ ರಚಿತಗೊಂಡಿವೆ. ಜನಸಂಖ್ಯೆ ವಿರಳವಿರುವ ಕಡೆಗಳಲ್ಲಿ ಸ್ವಾಭಾವಿಕವಾಗಿಯೇ ಸಣ್ಣ ವಾರ್ಡ್‌ಗಳು ಅಸ್ತಿತ್ವಕ್ಕೆ ಬಂದಿವೆ. ವಾರ್ಡ್ ವಿಂಗಡಣೆ ವೇಳೆ 20-30 ಸಾವಿರ ಮತದಾರರು ಇರುವಂತೆ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಇದನ್ನಾಧರಿಸಿ ವಾರ್ಡ್‌ಗಳು ರಚನೆಗೊಂಡಾಗ 15-20 ಸಾವಿರ ಮತದಾರರು ಇರುವ ವಾರ್ಡ್‌ಗಳೂ ರೂಪುಗೊಂಡಿದ್ದು, ಅಭ್ಯರ್ಥಿಗಳು ವಿಜಯ ಸಾಧಿಸಲು ತುರುಸಿನ ಸ್ಪರ್ಧೆ ಎದುರಿಸಿಯೇ ಗೆಲುವಿನ ಗೆರೆ ದಾಟಬೇಕಿರುವುದು ಅನಿವಾರ್ಯವಾಗಿದೆ.
3 ಸಾವಿರ ಮತ ಪಡೆದರೆ ಕಾರ್ಪೋರೇಟರ್ !
ಪೂರ್ವ ಪಾಲಿಕೆಯ ಒಟ್ಟು 50 ವಾರ್ಡ್‌ಗಳಲ್ಲಿ ಅರ್ಧದಷ್ಟು ತಲಾ 20 ಸಾವಿರದೊಳಗೆ ಮತದಾರರಿದ್ದಾರೆ. ಅದರಲ್ಲೂ ವಾರ್ಡ್ ಸಂಖ್ಯೆ - 10ರಲ್ಲಿ (ಕೊತ್ತನೂರು) 10,926 ಮತದಾರರು ಮಾತ್ರ ಇದ್ದಾರೆ. ಅಲ್ಲದೆ ಈ ಪ್ರದೇಶದಲ್ಲಿ 12 ಮತಗಟ್ಟೆ ಮಾತ್ರ ಇವೆ. ಹಾಗಾಗಿ ಈ ವಾರ್ಡ್‌ನಲ್ಲಿ ಸಾಧಾರಣ ಪ್ರಮಾಣದ ವೋಟಿಂಗ್ ಆದಲ್ಲಿ 3 ಸಾವಿರ ಮತ ಪಡೆಯುವ ಅಭ್ಯರ್ಥಿ ಗೆಲುವು ಸಾಧಿಸಬಹುದು ಎನ್ನುತ್ತಾರೆ ರಾಜಕೀಯ ಪರಿಣಿತರು.
85 ವಾರ್ಡ್‌ಗಳಲ್ಲಿ ಜಿದ್ದಾಜಿದ್ದಿ ಸ್ಪರ್ಧೆ:
ಪಂಚ ಪಾಲಿಕೆಗಳಲ್ಲಿ ಒಟ್ಟು 369 ವಾರ್ಡ್‌ಗಳಿವೆ. ಉತ್ತರ - 72, ದಕ್ಷಿಣ - 72, ಪೂರ್ವ -50, ಪಶ್ಚಿಮ - 112 ಹಾಗೂ ಕೇಂದ್ರ ಪಾಲಿಕೆಯಲ್ಲಿ 63 ವಾರ್ಡ್‌ಗಳಿವೆ. ಈ ಐದೂ ಕಾರ್ಪೋರೇಷನ್‌ಗಳಲ್ಲಿ ಇಪ್ಪತ್ತು ಸಾವಿರದೊಳಗೆ ಮತದಾರರನ್ನು ಹೊಂದಿರುವ 85 ವಾರ್ಡ್‌ಗಳಿವೆ. 20-30 ಸಾವಿರದೊಳಗೆ 235 ವಾರ್ಡ್‌, 30-40 ಸಾವಿರದೊಳಗೆ 39 ವಾರ್ಡ್‌ ಹಾಗೂ 40 ಸಾವಿರ ಮೇಲ್ಪಟ್ಟ ಮತದಾರರುಳ್ಳ 14 ವಾರ್ಡ್‌ಗಳಿವೆ. ಈ ಪೈಕಿ ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 30 ವಾರ್ಡ್‌ಗಳು ಇಪ್ಪತ್ತು ಸಾವಿರದೊಳಗಿನ ಮತದಾರರನ್ನು ಹೊಂದಿದ್ದು, ಪೂರ್ವ ಪಾಲಿಕೆಯಲ್ಲೂ ಇಂತಹ 23 ವಾರ್ಡ್‌ಗಳು ಇವೆ.
ಚುನಾವಣೆ ವೇಳೆ ಕಡಿಮೆ ಮತದಾರರುಳ್ಳ ವಾರ್ಡ್‌ಗಳಲ್ಲಿ ಅಕ್ಷರಶಃ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಡುವುದು ನಿಶ್ಚಿತ. ರಾಷ್ಟ್ರೀಯ ಪಕ್ಷಗಳು, ಸಣ್ಣ ಪಾರ್ಟಿಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿರುವ ಕಾರಣ 20 ಸಾವಿರ ಮತದಾರರಿದ್ದರೂ, ಶೇ.60 ವೋಟಿಂಗ್ ನಡೆದಲ್ಲಿ ಅಭ್ಯರ್ಥಿಯೊಬ್ಬರು 5-6 ಸಾವಿರ ಮತ ಪಡೆದು ಜಯ ಸಾಧಿಸಬಹುದಾಗಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
235 ವಾರ್ಡ್‌ಗಳಲ್ಲಿ ನೇರ ಸ್ಪರ್ಧೆ:
ಪಂಚ ಪಾಲಿಕೆಗಳ ವ್ಯಾಪ್ತಿಯಲ್ಲಿನ 369 ವಾರ್ಡ್‌ಗಳಲ್ಲಿ 235ರಲ್ಲಿ ತಲಾ 21-30 ಸಾವಿರ ಮತದಾರರು ಇದ್ದಾರೆ. ಅಂದರೆ ಶೇ.64 ವಾರ್ಡ್‌ಗಳಲ್ಲಿ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಈ ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ವರ್ಚಸ್ಸಿನೊಂದಿಗೆ ಗೆಲುವು ಸಾಧಿಸುವ ಅವಕಾಶ ಇದೆ ಎಂದು ವಿಶ್ಲೇಷಿಸಲಾಗಿದೆ.
ಮತದಾನ ಏರುವ ನಿರೀಕ್ಷೆ:
ಬೆಂಗಳೂರು ನಗರದಲ್ಲಿ ಪ್ರತಿ ಎಲೆಕ್ಷನ್ ನಡೆದಾಗಲೂ ಮತದಾನ ಸರಾಸರಿ ಶೇ.50ರ ಆಸುಪಾಸಿನಲ್ಲೇ ಇರುತ್ತದೆ. ಶೇ.60 ದಾಟಿದ್ದು ತೀರಾ ಅಪರೂಪ. ಈ ಬಾರಿ ಮತದಾನ ಹೆಚ್ಚಳವಾಗುವ ನಿರೀಕ್ಷೆ ಇದ್ದು, ಶೇ.65 ದಾಟಿಸಲು ಚುನಾವಣಾ ಆಯೋಗ ಹಾಗೂ ರಾಜಕೀಯ ಪಕ್ಷಗಲು ಶ್ರಮಪಡುವ ನಿರೀಕ್ಷೆ ಇದೆ.
ಪಂಚ ಪಾಲಿಕೆಗಳಲ್ಲಿನ ಮತದಾರರ ವಿವರ:
ಪಾಲಿಕೆ 20 ಸಾವಿರವರೆಗೆ 20-30 ಸಾವಿರ 30-40 ಸಾವಿರ 40 ಸಾವಿರ ಮೇಲ್ಪಟ್ಟು
ಉತ್ತರ 03 ವಾರ್ಡ್ 54 ವಾರ್ಡ್ 11 ವಾರ್ಡ್ 4 ವಾರ್ಡ್
ದಕ್ಷಿಣ 15 ವಾರ್ಡ್ 47 ವಾರ್ಡ್ 09 ವಾರ್ಡ್ 1 ವಾರ್ಡ್
ಪೂರ್ವ 23 ವಾರ್ಡ್ 26 ವಾರ್ಡ್ 01 ವಾರ್ಡ್ -
ಪಶ್ಚಿಮ 30 ವಾರ್ಡ್ 65 ವಾರ್ಡ್ 16 ವಾರ್ಡ್ 1 ವಾರ್ಡ್
ಕೇಂದ್ರ 14 ವಾರ್ಡ್ 46 ವಾರ್ಡ್ 03 ವಾರ್ಡ್ -
==================================================
ಒಟ್ಟು 85 ವಾರ್ಡ್ 238 ವಾರ್ಡ್ 40 ವಾರ್ಡ್ 6 ವಾರ್ಡ್
ಅತಿಹೆಚ್ಚು ಮತದಾರರಿರುವ ವಾರ್ಡ್:
ಜಕ್ಕೂರು (17) - 42,129
ಥಣಿಸಂದ್ರ (19) - 43,078
ಸಂಪಿಗೆಹಳ್ಳಿ (20) - 45,892
ಕೋಗಿಲು (21) - 40,232
ಸುಬ್ರಹ್ಮಣ್ಯಪುರ (51) - 49,518
ರಾಜರಾಜೇಶ್ವರಿನಗರ (23) - 49,530