stormwaterdrains 
ಬೆಂಗಳೂರು

ಮಳೆನೀರುಗಾಲುವೆಗಳ ಮೇಲ್ದರ್ಜೆಗೆ ಜಿಬಿಎ ಸಿದ್ಧತೆ

ಪ್ರಮುಖ ಮುಖ್ಯಾಂಶಗಳು

  • * 11 ಪ್ಯಾಕೇಜ್‌ಗಳಿಗೆ ಒಪ್ಪಿಗೆ ಕೋರಿ ಸರ್ಕಾರಕ್ಕೆ ರವಾನೆ
  • * ಮುಂದಿನ ವರ್ಷಾರಂಭದಲ್ಲಿ ಕಾರ್ಯಾದೇಶ ನೀಡಿಕೆ
  • * 24/36 ತಿಂಗಳಲ್ಲಿ ಕಾಮಗಾರಿ ಪೂರ್ಣಕ್ಕೆ ಗಡುವು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ವೇಳೆ ಉದ್ಭವಿಸುವ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೂಪಿಸಿರುವ ‘ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ’ (ಕೆಡಬ್ಲ್ಯುಎಸ್‌ಆರ್‌ಪಿ) ಅಡಿಯಲ್ಲಿ ಮಳೆನೀರುಗಾಲುವೆಗಳ ಮೇಲ್ದರ್ಜೆಗೇರಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಿದ್ಧತೆ ನಡೆಸಿದೆ.
ದಶಕಗಳಿಂದ ನಗರವನ್ನು ಕಾಡುತ್ತಿರುವ ಪ್ರವಾಹ ಸಮಸ್ಯೆ ನಿವಾರಿಸಿಕೊಳ್ಳಲು ಹಣಕಾಸಿನ ಕೊರತೆ ಕಾಡುತ್ತಿತ್ತು. ಸರ್ಕಾರ ಹಾಗೂ ಪಾಲಿಕೆ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಮಳೆಗಾಲ ಬಂದಾಗಲಷ್ಟೇ ಪರಿಹಾರಕ್ಕೆ ಮುಂದಾಗುವ ತಾತ್ಕಾಲಿಕ ಕ್ರಮಗಳಿಂದ ನಗರದ ಜನರಿಗೆ ಪ್ರವಾಹ ಭೀತಿ ಕಾಡುತ್ತಿದೆ. ಇದನ್ನು ಒಂದೇ ಬಾರಿ ನಿವಾರಿಸಿ ನಗರವನ್ನು ಪ್ರವಾಹಮುಕ್ತಗೊಳಿಸಲು ವಿಶ್ವಬ್ಯಾಂಕ್ ನೆರವು ಪಡೆಯಲಾಗಿದೆ. ಮೂರು ವರ್ಷಗಳ ಸತತ ಪ್ರಯತ್ನದ ಲವಾಗಿ 2 ಸಾವಿರ ಕೋಟಿ ರೂ. ನೆರವು ಲಭಿಸಿದ್ದು, ಈ ಅನುದಾನದಡಿ ಒಮ್ಮೆಲೇ ಎಲ್ಲೆಡೆ ಉಂಟಾಗುತ್ತಿರುವ ಪ್ರವಾಹ ತಡೆಗೆ ಸ್ಪಷ್ಟ ಪರಿಹಾರ ಚೌಕಟ್ಟು ರೂಪಿಸಿ ಯೋಜನೆ ಸಿದ್ಧಪಡಿಸಲಾಗಿದೆ.
ನಗರದಲ್ಲಿರುವ ಮಳೆನೀರುಗಾಲುವೆಗಳು 4 ಕಣಿವೆ (ಹೆಬ್ಬಾಳ, ವೃಷಭಾವತಿ, ಚಲ್ಲಘಟ್ಟ, ಕೋರಮಂಗಲ) ವ್ಯಾಪ್ತಿಯ 860 ಕಿ.ಮಿ. ಉದ್ದಕ್ಕೂ ವಿಸ್ತರಿಸಿದೆ. ಆಯಾ ಪ್ರದೇಶ ಆಧರಿಸಿ 40-100 ಅಡಿ ಅಗಲವಾಗಿ ಹರಿಯುವ ಈ ನೀರುಗಾಲುವೆಯೇ ಪ್ರವಾಹಕ್ಕೆ ಆಸ್ಪದ ನೀಡಿದೆ. ಹಲವೆಡೆ ಸರಿಯಾದ ತಡೆಗೋಡೆ ಇಲ್ಲದಿರುವುದು, ತಗ್ಗುಪ್ರದೇಶಗಳಲ್ಲಿ ನೀರುಗಾಲುವೆಗೆ ಮಳೆನೀರು ಸರಾಗವಾಗಿ ಹರಿಯದಿರುವುದು, ಹೂಳು ತುಂಬಿರುವುದು ಇತ್ಯಾದಿ ಕಾರಣದಿಂದ ಇವುಗಳು ಮೃತ್ಯುಕೂಪಗಳಾಗಿ ಮಾರ್ಪಟ್ಟಿವೆ. ಇದರಿಂದ ಕೆರೆ, ಕಾಲುವೆಗಳ ಬದಿಯಿರುವ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನೀರುಪಾಲು ಆಗುವುದು ಮುಂದುವರಿದಿದೆ. ಈ ಸಮಸ್ಯೆ ನಿವಾರಿಸಲು ಮಳೆನೀರುಗಾಲುವೆಗಳಿಗೆ ಆರ್‌ಸಿಸಿ ರಿಟೈನಿಂಗ್ ವಾಲ್‌ಗಳು ಸೇರಿ ನೀರಿನ ಧಾರಣ ರಚನೆ, ಪ್ರಕೃತಿ ಆಧಾರಿತ ಪರಿಹಾರ ರಚನೆ, ಕಲ್ವರ್ಟ್ ಮತ್ತು ಸೇತುವೆಗಳ ಪ್ರವಾಹ ರಕ್ಷಣಾ ರಚನೆಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಯೋಜನೆ ಪೂರ್ಣಗೊಂಡಲ್ಲಿ ನಗರವು ಪ್ರವಾಹಮುಕ್ತ ಆಗಲಿದೆ ಎಂದು ಜಿಬಿಎ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಸರ್ಕಾರದಿಂದ ಅನುಮೋದನೆ ನಿರೀಕ್ಷೆ:

ಪ್ರಸ್ತುತ ಕೈಗೆತ್ತಿಕೊಳ್ಳಲಿರುವ ಯೋಜನೆ ಅಡಿ ಕಾಮಗಾರಿ ನಡೆಯುವ ಸ್ಥಳಗಳು ಜಿಬಿಎ ಗಡಿಯಲ್ಲೇ ಇವೆ. ನಗರದ ಹೊರವಲಯದ ವಿಧಾನಸಭಾ ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ಈ ನೀರುಗಾಲುವೆಗಳನ್ನು ಮೇಲ್ದರ್ಜೆಗೇರಿಸಲು ಒಟ್ಟು 16 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಇವುಗಳಿಗೆ ಆಹ್ವಾನಿಸಿದ್ದ ಟೆಂಡರ್ ಪೈಕಿ 11ಅನ್ನು ಅನುಮೋದನೆ ಕೋರಿ ಸರ್ಕಾರಕ್ಕೆ ಕಡತ ರವಾನಿಸಲಾಗಿದೆ. ದೊಡ್ಡ ಮೊತ್ತದ ಹಣಕಾಸು ವ್ಯವಹಾರ ಇರುವುದರಿಂದ ಸರ್ಕಾರದ ಒಪ್ಪಿಗೆ ಅತ್ಯಗತ್ಯವಾಗಿದೆ. ಉಳಿದ 5ರ ಪೈಕಿ ನಾಲ್ಕಕ್ಕೆ ಮರುಟೆಂಡರ್ ಆಹ್ವಾನಿಸುತ್ತಿದ್ದು, ಮತ್ತೊಂದಕ್ಕೆ ಹೊಸದಾಗಿ ಟೆಂಡರ್ ಆಹ್ವಾನಿಸಿ ಅಂತಿಮಗೊಳಿಸಲಾಗುತ್ತದೆ ಎಂದು ಜಿಬಿಎ ಮಳೆನೀರುಗಾಲುವೆ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಬಿಎ ವ್ಯಾಪ್ತಿಯ ಮಳೆನೀರುಗಾಲುವೆ ವಿವರ:

ಒಟ್ಟು ಉದ್ದ - 860 ಕಿ.ಮೀ.
ಕೆಲಸ ಪೂರ್ಣ - 491 ಕಿ.ಮೀ.
ಕೆಲಸದ ಪ್ರಗತಿ - 125 ಕಿ.ಮೀ.
ಬಾಕಿ ಉಳಿಕೆ - 173.9 ಕಿ.ಮೀ.

ಪಿಎಂಸಿಗೆ ಟೆಂಡರ್ ಆಹ್ವಾನ:

ಪ್ಯಾಕೇಜ್‌ಗಳಾಗಿ ವಿಂಗಡಿಸಿರುವ ಕಾಮಗಾರಿಗಳನನ್ನು 12/36 ತಿಂಗಳಿನಲ್ಲಿ ಪೂರ್ಣಗೊಳಿಸಲು ಗಡುವು ನೀಡಲಾಗುತ್ತದೆ. ಇವುಗಳ ಮೇಲೆ ನಿರಂತರ ಮೇಲ್ವಿಚಾರಣೆ ವಹಿಸಲು ಯೋಜನಾ ನಿರ್ವಹಣೆ, ಮೇಲ್ವಿಚಾರಣೆ ಹಾಗೂ ಗುಣಮಟ್ಟ ನಿಯಂತ್ರಣ (ಪಿಎಂಸಿ) ಕಾರ್ಯಕ್ಕೆ ಟೆಂಡರ್ ಆಹ್ವಾನಿಸಲಾಗಿದೆ. ಈ ಸೇವೆ ನೀಡಲಿರುವ ಗುತ್ತಿಗೆ ಕಂಪನಿಯಿಂದ ಸತತವಾಗಿ ನಿಗಾ ವಹಿಸಿ ಪ್ರಾಜೆಕ್ಟ್ ಪೂರ್ಣಗೊಳಿಸಲು ಜಿಬಿಎ ಮುಂದಾಗಿದೆ.

ಒತ್ತುವರಿ ಇಲ್ಲದೆಡೆ ಕಾಮಗಾರಿ ಶುರು:

ಮಹಾನಗರದಲ್ಲಿ ಹಲವೆಡೆ ನೀರುಗಾಲುವೆಗಳು ಒತ್ತುವರಿಗೆ ಒಳಗಾಗಿವೆ. ಹಾಲಿ 2,602 ಪ್ರಕರಣಗಳನ್ನು ಗುರುತಿಸಿದ್ದು, 1,480ಅನ್ನು ತೆರವುಗೊಳಿಸಲಾಗಿದೆ. ಉಳಿದ 1,122 ಪ್ರಕರಣಗಳಲ್ಲಿ ಕಡಿಮೆ ಉದ್ದ/ವಿಸ್ತೀರ್ಣ ಇದು ಕಾಮಗಾರಿ ಕೈಗೆತ್ತಿಕೊಳ್ಳಲು ಸಮಸ್ಯೆಯಾಗದು. ಒತ್ತುವರಿಮುಕ್ತ ಇರುವ ನೀರುಗಾಲುವೆಗಳನ್ನೇ ಮೊದಲು ಮೇಲ್ದರ್ಜೆಗೇರಿಸಲಾಗುತ್ತದೆ. ಬಳಿಕ ಒತ್ತುವರಿ ಇದ್ದ ಕಡೆ ಸಮಸ್ಯೆ ನಿವಾರಿಸಿ ಮುಂದಡಿ ಇಡಲು ಜಿಬಿಎ ಯೋಜನೆ ರೂಪಿಸುತ್ತಿದೆ.

ಪ್ರವಾಹಮುಕ್ತ ನೀರುಗಾಲುವೆಯಿಂದಾಗುವ ಪ್ರಯೋಜನ?:

* ಮಳೆಗಾಲದಲ್ಲಿ ರಾಜಕಾಲುವೆ ಬದಿಯಿರುವ ಮನೆಗಳಿಗೆ ನೀರು ನುಗ್ಗುವುದಕ್ಕೆ ತಡೆ.
* ತಗ್ಗುಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ಸರಾಗ ಹರಿವಿಗೆ ಆಸ್ಪದ.
* ರಾಜಕಾಲುವೆಗಳಿಂದ ನೇರವಾಗಿ ಕೆರೆಗಳಿಗೆ ಮಳೆನೀರು ಹರಿಯುವಿಕೆಗೆ ಅವಕಾಶ.
* ರಾಜಕಾಲುವೆಗಳಲ್ಲಿ ತ್ಯಾಜ್ಯನೀರು ಹರಿಯುವಿಕೆಗೆ ತಡೆಹಾಕಿ ಮಳೆನೀರು ಹರಿದುಹೋಗಲು ವ್ಯವಸ್ಥೆ.
* ನೀರುಗಾಲುವೆಗಳಲ್ಲಿನ ಮಲೀನ/ತ್ಯಾಜ್ಯ ನೀರು ಶುದ್ಧೀಕರಿಸಿ ಕರೆಗೆ ವಾಪಸ್ ಹರಿಸುವುದು.
* ಭವಿಷ್ಯದಲ್ಲಿ ಮಳೆನೀರುಗಾಲುವೆ ಬದಿಯ ಬಫರ್ ಜಾಗದಲ್ಲಿ ರಸ್ತೆ ನಿರ್ಮಿಸಲು ಅವಕಾಶ.
"

ವಿಶ್ವಬ್ಯಾಂಕ್ ನೆರವಿನಡಿ ಕೈಗೆತ್ತಿಕೊಳ್ಳಲಿರುವ ಕೆಡಬ್ಲ್ಯುಎಸ್‌ಆರ್‌ಪಿ ಯೋಜನೆಯಡಿ 11 ಪ್ಯಾಕೇಜ್‌ಗಳಿಗೆ ಒಪ್ಪಿಗೆ ಕೋರಿ ಕಡತವನ್ನು ಸರ್ಕಾರಕ್ಕೆ ರವಾನಿಸಲಾಗಿದೆ. ಇದಕ್ಕೆ ಶೀಘ್ರವೇ ಒಪ್ಪಿಗೆ ಸಿಗುವ ಸಾಧ್ಯತೆ ಇದ್ದು, ಆ ಬಳಿಕ ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುವುದು. ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಲು ಜಿಬಿಎ ಸಿದ್ಧತೆ ನಡೆಸಿದೆ.

- ರಾಜೇಶ್, ಜಿಬಿಎ ಮುಖ್ಯ ಇಂಜಿನಿಯರ್ (ಮಳೆನೀರುಗಾಲುವೆ)