ಓಕಳೀಪುರ ಅಷ್ಟಪಥ ಕಾರಿಡಾರ್ನ ಬಾಕಿ ಕಾಮಗಾರಿಗಳ ಪ್ರಗತಿಯನ್ನು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಪರಿಶೀಲಿಸಿದರು. ಅಪರ ಆಯುಕ್ತ ವೆಂಕಟಾಚಲಪತಿ, ಮುಖ್ಯ ಅಭಿಯಂತರ ವಿಜಯ್ಕುಮಾರ್ ಹರಿದಾಸ್ ಇದ್ದರು.
- ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತರ ಸೂಚನೆ
ಬೆಂಗಳೂರು: ಓಕಳೀಪುರ ಅಷ್ಟಪಥ ಕಾರಿಡಾರ್ನ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪರಿಷತ ವೇಳಾಪಟ್ಟಿ ಸಿದ್ಧಪಡಿಸಿ, ಅದರಂತೆ ಕಾಮಗಾರಿಗಳನ್ನು ಕೈಗೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಸೂಚಿಸಿದ್ದಾರೆ.
ಕೇಂದ್ರ ಪಾಲಿಕೆ ವ್ಯಾಪ್ತಿಯ ಗಾಂಧಿನಗರದಲ್ಲಿರುವ ಓಕಳೀಪುರ ಅಷ್ಟಪಥ ಕಾರಿಡಾರ್ನ ಬಾಕಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರೈಲ್ವೆ ನಿಲ್ದಾಣದ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಪ್ರೋಚ್ ಕಾಮಗಾರಿ ಪ್ರಗತಿಯಲ್ಲಿದ್ದು, ರಿಟೇನಿಂಗ್ ವಾಲ್ ಕಾಮಗಾರಿಗೆ ವೇಗ ನೀಡಿ, ಪರಿಷತ ವೇಳಾಪಟ್ಟಿಯಂತೆ ಕಾಲಮಿತಿಯೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೆಂಪೇಗೌಡ ಬಸ್ ನಿಲ್ದಾಣದಿಂದ ರಾಜಾಜಿನಗರದೆಡೆಗಿನ ರೈಲ್ವೆ ಹಳಿ ಕೆಳಭಾಗದಲ್ಲಿರುವ ಬಾಕ್ಸ್ ಭಾಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ವಾಹನ ಸಂಚಾರಕ್ಕೆ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಚೆನ್ನೆ$ ರೈಲ್ವೆ ಹಳಿಯ ಕೆಳಭಾಗದಲ್ಲಿ ರೈಲ್ವೆ ಇಲಾಖೆಯಿಂದ ಎರಡು ಬಾಕ್ಸ್ ಪುಶಿಂಗ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದೇ ಸ್ಥಳದಲ್ಲಿ ರೈಲ್ವೆ ಇಲಾಖೆಯಿಂದ ನಿರ್ಮಿಸಬೇಕಿರುವ ತಡೆಗೋಡೆ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಾಕ್ಸ್ ಅಳವಡಿಸಿರುವ ಮಾರ್ಗದಲ್ಲಿ ಕಟ್ಟಡ ಅವಶೇಷ, ಮಣ್ಣು ಸೇರಿ ಸುಮಾರು 300 ಲೋಡ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಮಳೆನೀರು ಸರಾಗವಾಗಿ ಹರಿದುಹೋಗಲು 1,200 ಮಿ.ಮೀ. ವ್ಯಾಸದ ಚರಂಡಿ ನಿಮಾರ್ಣ ಕಾಮಗಾರಿ ಶೇ.65 ಪೂರ್ಣಗೊಂಡಿದ್ದು, ಬಾಕಿ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.