ಖಾಲಿ ನಿವೇಶನವನ್ನು ಸ್ವಚ್ಛ ಮಾಡುತ್ತಿರುವ ಜಿಬಿಎ ಸಿಬ್ಬಂದಿ.
- ಖಾಲಿ ನಿವೇಶನ ಪಾಲಿಕೆಯಿಂದಲೇ ಸ್ವಚ್ಛ
ಬೆಂಗಳೂರು: ನೋಟಿಸ್ ನೀಡಿದರೂ ಖಾಲಿ ನಿವೇಶನ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಪಾಲಿಕೆ ಅಧಿಕಾರಿಗಳು ನಿವೇಶನವನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯಾಚರಣೆ ನಡೆಸಿದರು.
ಜಯನಗರ 9ನೇ ಬ್ಲಾಕ್ನ 25ನೇ ಮುಖ್ಯರಸ್ತೆಯಲ್ಲಿರುವ ನಂ.1289ರ ನಿವೇಶನವು ರವೀಂದ್ರ ಅವರಿಗೆ ಸೇರಿದ್ದು, ಹಲವು ದಿನಗಳಿಂದ ಕಸ, ಹೂಳು ಹಾಗೂ ಗಿಡಗಂಟಿಗಳಿಂದ ಅಸ್ವಚ್ಛವಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿವೇಶನ ಮಾಲೀಕರಿಗೆ ಪಾಲಿಕೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು. ನಿಗದಿತ ಅವಧಿಯಲ್ಲೂ ಸ್ವಚ್ಛಗೊಳಿಸದಕ್ಕೆ ಆಯುಕ್ತ ಕೆ.ಎನ್. ರಮೇಶ್ ನೇತೃತ್ವದಲ್ಲಿ ಸೋಮವಾರ ಪಾಲಿಕೆ ಸಿಬ್ಬಂದಿಯೇ ಸ್ಥಳಕ್ಕೆ ತೆರಳಿ ಸಂಪೂರ್ಣ ಸ್ವಚ್ಛಗೊಳಿಸಿದರು.
ನಿವೇಶನದಲ್ಲಿ ಮೂರು ಲೋಡ್ಗೂ ಅಧಿಕ ಹೂಳು ಹಾಗೂ ತ್ಯಾಜ್ಯ ಪತ್ತೆಯಾಗಿದ್ದು, ಸ್ವಚ್ಛತೆ ಮತ್ತು ತ್ಯಾಜ್ಯ ಸಾಗಣೆ ವೆಚ್ಚದ ಜತೆಗೆ ನಿಯಮಾನುಸಾರ ದಂಡವನ್ನೂ ಮಾಲೀಕರ ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.