- ಸಂಸದ ತೇಜಸ್ವಿ ಸೂರ್ಯ ಹೇಳಿಕೆ
- ಲಾಲ್ಬಾಗ್ನಲ್ಲಿ ನಾಗರಿಕರ ಜತೆಗೂಡಿ ಪ್ರತಿಭಟನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಉದ್ಯಾನವನಗಳನ್ನು ಉಳಿಸುವುದು ಅಪರಾಧವೆಂದಾರೆ ಪ್ರತಿದಿನವೂ ನಾವು ಆ ಅಪರಾಧ ಮಾಡಲು ಸಿದ್ಧ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪ್ರಸ್ತಾವಿತ ಸುರಂಗ ರಸ್ತೆ ಯೋಜನೆ ಹಾಗೂ ಉದ್ಯಾನವನದ ಜಮೀನಿನ ಶೇ. 5ರವರೆಗೆ ಮೂಲಸೌಕರ್ಯ ಮತ್ತಿತರ ಉದ್ದೇಶಗಳಿಗೆ ಬಳಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಭಾನುವಾರ ಲಾಲ್ಬಾಗ್ನಲ್ಲಿ ಆಯೋಜಿಸಿದ್ದ ನಾಗರಿಕರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆಗೆ ಕಾನೂನು ಇದೆ. ಆ ಕಾನೂನನ್ನು ಉಲ್ಲಂಘಿಸುವವರೇ ನಿಜವಾದ ಕ್ರಿಮಿನಲ್ಗಳು. ತುಂಡುತುಂಡಾಗಿ ಕತ್ತರಿಸಲು ಲಾಲ್ಬಾಗ್ ಪಿಜ್ಜಾ ಅಲ್ಲ. ಇದು ಬೆಂಗಳೂರಿನ ಆಸ್ತಿ ಹಾಗೂ ಜೀವನಾಡಿ. ಬೆಂಗಳೂರಿಗೆ ಅಭಿವೃದ್ಧಿಯ ಅಗತ್ಯ ಇದೆ. ಆದರೆ, ಅದಕ್ಕಾಗಿ ಉಳಿದಿರುವ ಹಸಿರು ಪ್ರದೇಶಗಳನ್ನು ಬಲಿ ಕೊಡಬಾರದು. ಲಾಲ್ಬಾಗ್ನ 5 ಎಕರೆ, ಹೆಬ್ಬಾಳ ಕೆರೆಯ ಮೂರೂವರೆ ಎಕರೆ ಕಬಳಿಸುವುದು ಅಥವಾ ಸ್ಯಾಂಕಿ ಕೆರೆಗೆ ಧಕ್ಕೆ ತರುವುದು ಅಭಿವೃದ್ಧಿಯಲ್ಲ. ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಹಸಿರು ಪ್ರದೇಶಗಳನ್ನು ಸಂರಕ್ಷಿಸುವುದೇ ನಿಜವಾದ ಅಭಿವೃದ್ಧಿ ಎಂದರು.
ಸುರಂಗ ರಸ್ತೆ ಯೋಜನೆ ಕೈಬಿಡಬೇಕು. ಯೋಜನೆ ಮುಂದುವರಿಸಿದರೆ ಪ್ರತಿವಾರ ಬೆಂಗಳೂರಿನ ಬೇರೆ ಬೇರೆ ಉದ್ಯಾನವನಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಮುಂದಿನ ಭಾನುವಾರವೂ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು. ವಿಧಾನಸೌಧ ಚಲೋ ಸೇರಿ ಹಂತ ಹಂತವಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪರಿಸರ ಪ್ರೇಮಿಗಳು, ವಾಯುವಿಹಾರಿಗಳು, ಯುವಜನತೆ ಭಾಗವಹಿಸಿದ್ದರು.
ಲಾಲ್ಬಾಗ್ ಪಶ್ಚಿಮ ದ್ವಾರದಿಂದ ಹೆಬ್ಬಂಡೆ ಪ್ರದೇಶದವರೆಗೆ ಪಾದಯಾತ್ರೆ ನಡೆಸಿ, ಬಂಡೆಯನ್ನು ಅಪ್ಪಿಕೊಂಡು ಉದ್ಯಾನವನ ರಕ್ಷಣೆಯ ಸಂಕಲ್ಪ ವ್ಯಕ್ತಪಡಿಸಿದರು. "ಇದು ಟ್ರ್ರೇಲರ್ ಅಷ್ಟೇ, ಪಿಕ್ಚರ್ ಬಾಕಿ ಇದೆ' ಎಂದರು. "ಲಾಲ್ಬಾಗ್ನಲ್ಲಿ ವಾಕ್& ಲಾಲ್ಬಾಗ್ಗಾಗಿ ವಾಕ್' ಘೋಷಣೆ ಕೂಗಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಡಾ. ಸಿ.ಎನ್. ಮಂಜುನಾಥ್, ಪಿ.ಸಿ. ಮೋಹನ್, ಶಾಸಕ ಸಿ.ಕೆ. ರಾಮಮೂರ್ತಿ, ಪರಿಸರವಾದಿ ಅ.ನ. ಯಲ್ಲಪ್ಪ ರೆಡ್ಡಿ, ನಟಿ ಪಣೀತಾ ಸುಭಾಷ್ ಮತ್ತಿತರರು ಇದ್ದರು.
ಲಾಲ್ಬಾಗ್ ಉಳಿಸುವುದಷ್ಟೇ ನಮ್ಮ ಉದ್ದೇಶವಲ್ಲ. ನಮ್ಮ ಬೆಂಗಳೂರು ಹಾಗೂ ಕರ್ನಾಟಕವನ್ನು ಉಳಿಸುವುದು ಹೆಗ್ಗುರಿ. ರಾಜ್ಯದಲ್ಲಿ ಚರ್ಚೆಯೇ ಇಲ್ಲದೆ ಕಠಿಣ ಮಸೂದೆಯೊಂದನ್ನು ಅಂಗೀಕರಿಸಲಾಗಿದೆ. ಇದರ ಅಗತ್ಯವೇನಿತ್ತು? ರಿಯಲ್ ಎಸ್ಟೇಟ್ ಸರ್ಕಾರವಾಗಿರುವುದರಿಂದಲೇ ಇಂತಹ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ರಾಜ್ಯಪಾಲರು ಮಸೂದೆಯನ್ನು ವಾಪಸ್ ಕಳುಹಿಸಿದ್ದು, ಸರ್ಕಾರ ಅದನ್ನು ಮರು ಮಂಡಿಸದಿರಲು ಚಿಂತಿಸುತ್ತಿದೆ. ಒಂದು ವೇಳೆ ಮರುಮಂಡಿಸಿದರೆ, ರಾಷ್ಟ್ರಪತಿವರೆಗೂ ಕೊಂಡೊಯ್ಯಲು ಸಿದ್ಧ.
— ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ನ್ಯಾಯಯುತ ಕಾರಣದಿಂದ ಒಂದು ಸತ್ಕಾರ್ಯಕ್ಕಾಗಿ ನಾವು ಧ್ವನಿ ಎತ್ತಿದರೆ, ಜನರು ನಮಗೆ ಬೆಂಬಲ ಸೂಚಿಸುತ್ತಾರೆ ಎಂಬುದಕ್ಕೆ ಇಲ್ಲಿ ನೆರೆದಿರುವವರೇ ಸಾ. ಈ ಒಗ್ಗಟ್ಟು ಹೊಸ ಭರವಸೆಯನ್ನು ಮೂಡಿಸಿದೆ. ಜಾಥಾದ ನೇತೃತ್ವ ವಹಿಸಿದ್ದ 91 ವರ್ಷದ ಹಿರಿಯರಾದ ಯಲ್ಲಪ್ಪ ರೆಡ್ಡಿ ಅವರಿಂದ ಹಿಡಿದು, ಆರು ತಿಂಗಳ ಹಸುಗೂಸುಗಳವರೆಗೆ ತನ್ನ ಹಸಿರನ್ನು ಮತ್ತು ಉದ್ಯಾನವನಗಳನ್ನು ಉಳಿಸಿಕೊಳ್ಳಲು ಇಡೀ ಬೆಂಗಳೂರೇ ಒಟ್ಟಾಗಿ ನಿಂತಿತು. ಎಂತಹ ಅದ್ಭುತ ಜನತೆ!
— ತೇಜಸ್ವಿ ಸೂರ್ಯ, ಸಂಸದ