- ಶೇ.30 ಫಲಾನುಭವಿಗಳ ಸರ್ವೆ ಬಾಕಿ
- ಮಾಹಿತಿ ನೀಡದವರಿಗೆ ಯೋಜನೆಯಿಂದ ಕೊಕ್ ಭೀತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಗೆ ನಿಗದಿಯಾಗಿದ್ದ ಗಡುವು ಮತ್ತೆ ವಿಸ್ತರಣೆಯಾಗಿದೆ. ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಉದ್ದೇಶದಿಂದ ಜು.1ರಿಂದ ಆರಂಭವಾಗಿರುವ ಮನೆ-ಮನೆ ಸಮೀಕ್ಷೆ ಆ.31ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಫಲಾನುಭವಿಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸೆ.30ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ರಾಜ್ಯಾದ್ಯಂತ ಬರೋಬ್ಬರಿ 1.65 ಕೋಟಿ ಫಲಾನುಭವಿಗಳನ್ನು ಹೊಂದಿರುವ ಯೋಜನೆಯ ಪರಿಷ್ಕರಣೆ ಎಸ್ಕಾಂಗಳಿಗೆ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಶೇ.71 ಸಮೀಕ್ಷೆ ಪೂರ್ಣಗೊಂಡಿದ್ದರೂ, ಇನ್ನೂ ಶೇ.29 ಫಲಾನುಭವಿಗಳ ಮಾಹಿತಿ ಸಂಗ್ರಹಿಸಬೇಕಿದೆ. ಮನೆಗೆ ತೆರಳಿದಾಗ ಮಾಲೀಕರು ಲಭ್ಯವಿಲ್ಲದಿರುವುದು, ಅಪಾರ್ಟ್ಮೆಂಟ್ಗಳಲ್ಲಿ ಸಮೀಕ್ಷಾ ಸಿಬ್ಬಂದಿಗೆ ಅಗತ್ಯ ಮಾಹಿತಿ ದೊರೆಯದಿರುವುದು ಸೇರಿ ಹಲವು ಕಾರಣಗಳಿಂದ ಪ್ರಕ್ರಿಯೆ ನಿಧಾನಗೊಂಡಿದೆ.
ಡೋರ್ಲಾಕ್ಗೂ ಡಿಜಿಟಲ್ ಪರಿಹಾರ:
ಮನೆಗೆ ತೆರಳಿದ ಸಂದರ್ಭದಲ್ಲಿ ಗ್ರಾಹಕರು ಲಭ್ಯವಿಲ್ಲದಿದ್ದರೆ, ಸಮೀಕ್ಷಾ ಸಿಬ್ಬಂದಿ "ಡೋರ್ ಲಾಕ್' ಆಯ್ಕೆ ಮೂಲಕ ಸಂದೇಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಅಕೌಂಟ್ ಐಡಿ ನಮೂದಿಸಿದ ಬಳಿಕ ಸಿಬ್ಬಂದಿಯ ಸಂಪರ್ಕ ಸಂಖ್ಯೆಯೂ ಗ್ರಾಹಕರಿಗೆ ರವಾನೆಯಾಗಲಿದೆ. ಈ ಮೂಲಕ ಬಾಕಿ ಉಳಿದಿರುವ ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸಲು ಎಸ್ಕಾಂಗಳು ಮುಂದಾಗಿವೆ.
ಗೃಹಜ್ಯೋತಿ ಪರಿಷ್ಕರಣೆಯ ಪ್ರಮುಖ ಉದ್ದೇಶ ಫಲಾನುಭವಿಗಳ ನೈಜತೆ ಪರಿಶೀಲನೆಯಾಗಿದ್ದು, ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ನೀಡದ ಫಲಾನುಭವಿಗಳ ಅರ್ಹತೆ ಪ್ರಶ್ನಾರ್ಹವಾಗಲಿದೆ. ಹೀಗಾಗಿ ಸೆ.30ರೊಳಗೆ ಸಮೀಕ್ಷೆ ಪೂರ್ಣಗೊಳಿಸುವುದು ಸರ್ಕಾರ ಹಾಗೂ ಎಸ್ಕಾಂಗಳಿಗೆ ಮಹತ್ವದ ಹಂತವಾಗಿದೆ. ಪರಿಷ್ಕರಣೆ ಬಳಿಕವೇ ಅರ್ಹರ ಪಟ್ಟಿಯಲ್ಲಿ ಯಾರು ಉಳಿಯುತ್ತಾರೆ, ದಾಖಲೆ ನೀಡದವರನ್ನು ಹೇಗೆ ಪರಿಗಣಿಸಲಾಗುತ್ತದೆ ಎಂಬುದು ಸ್ಪಷ್ಟವಾಗಲಿದೆ.
ರಾಜ್ಯದಲ್ಲಿ 1,65,32,652 ಗೃಹಜ್ಯೋತಿ ಫಲಾನುಭವಿಗಳಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲೇ 68,86,860 ಮಂದಿ ಇದ್ದಾರೆ. ಹೀಗಾಗಿ ಬಾಕಿ ಇರುವ ಸಮೀಕ್ಷೆ ಪೂರ್ಣಗೊಳಿಸುವುದು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ಕೋಟ್ಯಂತರ ರೂಪಾಯಿ ವೆಚ್ಚದ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಶುದ್ಧೀಕರಿಸುವ ಪ್ರಮುಖ ಕಸರತ್ತಾಗಿದೆ.