- 37 ನಿವೇಶನದಾರರಿಗೆ ನೋಟಿಸ್
- 24 ಗಂಟೆಯಲ್ಲಿ ಸ್ವಚ್ಛಗೊಳಿಸಲು ಸೂಚನೆ
ಬೆಂಗಳೂರು: ಖಾಲಿ ನಿವೇಶನಗಳನ್ನು ಅನೈರ್ಮಲ್ಯದ ತಾಣಗಳನ್ನಾಗಿ ಪರಿವರ್ತಿಸುವ ಮಾಲೀಕರ ವಿರುದ್ಧ ಉತ್ತರ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಅನೈರ್ಮಲ್ಯದಿಂದ ಕೂಡಿರುವ 37 ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು, 24 ಗಂಟೆಯೊಳಗೆ ಕಸ, ಕಳೆಗಿಡ ಹಾಗೂ ನಿಮಾರ್ಣ ತ್ಯಾಜ್ಯ ತೆರವುಗೊಳಿಸಿ ನಿವೇಶನವನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದೆ.
ಉತ್ತರ ಪಾಲಿಕೆ ಆಯುಕ್ತ ಪಿ. ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ನಿವೇಶನಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆರವುಗೊಳಿಸಿ, ನಿಗದಿತ ಸ್ಥಳದಲ್ಲಿ ಸೂಕ್ತವಾಗಿ ವಿಲೇವಾರಿ ಮಾಡುವಂತೆ ಮಾಲೀಕರಿಗೆ ಸೂಚಿಸಲಾಗಿದೆ.
ಪಾಲಿಕೆಯಿಂದಲೇ ಸ್ವಚ್ಛತೆ, ತೆರಿಗೆ ಜತೆ ವೆಚ್ಚ ವಸೂಲಿ:
ನೋಟಿಸ್ ನೀಡಿರುವ 37 ನಿವೇಶನಗಳ ಮಾಲೀಕರು ನಿಗದಿತ 24 ಗಂಟೆಯೊಳಗೆ ಸ್ವತ@ ಸ್ವಚ್ಛತಾ ಕಾರ್ಯ ಕೈಗೊಂಡರೆ ಯಾವುದೇ ಕ್ರಮ ಇರುವುದಿಲ್ಲ. ಆದರೆ ಗಡುವಿನೊಳಗೆ ನಿವೇಶನ ಸ್ವಚ್ಛಗೊಳಿಸದಿದ್ದರೆ ಪಾಲಿಕೆಯೇ ತೆರವುಗೊಳಿಸಲಿದೆ. ಈ ಕಾರ್ಯಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸಂಬಂಧಿಸಿದ ಆಸ್ತಿ ಮಾಲೀಕರ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುವುದು ಎಂದು ತಿಳಿಸಿದೆ.
ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಅಡಿಯಲ್ಲಿ ಆಸ್ತಿ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ನೀಡಲಾಗಿದ್ದ ಗಡುವು ಮುಕ್ತಾಯವಾಗಿದ್ದು, ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದ ಆಸ್ತಿ ಮಾಲೀಕರಿಗೆ ದಂಡ ವಿಧಿಸುವ ಪ್ರಕ್ರಿಯೆಗೆ ಗುರುವಾರ (ಆ.27) ಚಾಲನೆ ಲಭಿಸಲಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಬೆಳಗ್ಗೆ 11 ಗಂಟೆಗೆ ಶಾಂತಿನಗರ ಕ್ಷೇತ್ರದಲ್ಲಿ ಚಾಲನೆ ನೀಡಲಿದ್ದಾರೆ. ಈ ವೇಳೆ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಉಪಸ್ಥಿತರಿರುವರು.