ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಯಿಂದ ಉಂಟಾಗುವ ಪರಿಸರದ ಅಪಾಯಗಳನ್ನು ಎತ್ತಿ ತೋರಿಸಲು ಲಾಲ್ಬಾಗ್ ನಡಿಗೆದಾರರ ಸಂ ವತಿಯಿಂದ ಲಾಲ್ಬಾಗ್ ಕೆರೆ ಸಮೀಪ ಜಾಗೃತಿ ಕಾರ್ಯಕ್ರಮ ನಡೆಯಿತು. ಸಂದ ಅಧ್ಯಕ್ಷ ಎಸ್. ಉಮೇಶ್ ಕುಮಾರ್, ಡಾ. ಶಶಿ ಕುಮಾರ್, ಪ್ರೊ. ಬಿ.ವಿ. ಸುಮಾ ಇದ್ದರು.
- ಉದ್ಯಾನ ಪ್ರದೇಶದ ಶೇ.5 ಅನ್ಯ ಬಳಕೆಗೆ ಅವಕಾಶ
- ಸುರಂಗ ರಸ್ತೆ ಮಾರ್ಗಕ್ಕೆ ನೆರವು ನೀಡುವ ಹುನ್ನಾರ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಉದ್ಯಾನಗಳು ಹಾಗೂ ಹಸಿರು ಪ್ರದೇಶಗಳ ಸಂರಕ್ಷಣೆಗೆ ಇದ್ದ ಕಾನೂನಿಗೆ ತಿದ್ದುಪಡಿ ತರುವ ರಾಜ್ಯ ಸಚಿವ ಸಂಪುಟದ ನಿರ್ಧಾರ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕ ಸರ್ಕಾರದ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ&1975ಕ್ಕೆ ತಿದ್ದುಪಡಿ ಮಾಡಿ, ಸಾರ್ವಜನಿಕ ಉದ್ದೇಶಗಳಿಗಾಗಿ ಉದ್ಯಾನ&ತೋಟಗಳ ಜಾಗದ ಶೇ.5 ಭಾಗವನ್ನು ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸುವ ಪ್ರಸ್ತಾವಕ್ಕೆ ಪರಿಸರವಾದಿಗಳು, ನಾಗರಿಕ ಸಂಘಟನೆಗಳು ಹಾಗೂ ಬಿಜೆಪಿ ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ತಿದ್ದುಪಡಿಯು ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ಬೋರ್ಡ್ವರೆಗೆ ಉದ್ದೇಶಿಸಿರುವ 17.1 ಕಿ.ಮೀ. ಉದ್ದದ ಉತ್ತರ&ದಕ್ಷಿಣ ಅವಳಿ ಸುರಂಗ ರಸ್ತೆ ಮಾರ್ಗಕ್ಕೆ ಲಾಲ್ಬಾಗ್ ಜಾಗ ಬಳಸಿಕೊಳ್ಳಲು ಅನುಕೂಲ ಮಾಡಿಕೊಡುವ ಪ್ರಯತ್ನವೆಂಬ ಆರೋಪ ಕೇಳಿಬಂದಿದೆ. ಯೋಜನೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಜು.16ರಂದು ಯೋಜನೆಯ ಭವಿಷ್ಯ ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಸರ್ಕಾರಕ್ಕೆ ಸೂಚಿಸಲಾಗಿತ್ತು.
ಇದರ ನಡುವೆಯೇ ಕಾನೂನು ತಿದ್ದುಪಡಿ ಮಾಡುತ್ತಿರುವುದು ನ್ಯಾಯಾಲಯದ ವಿಚಾರಣೆಯನ್ನು ದುರ್ಬಲಗೊಳಿಸುವ ಯತ್ನ ಎಂದು ಪರಿಸರ ಹೋರಾಟಗಾರ ದತ್ತಾತ್ರೇಯ ದೇವರೆ ಆರೋಪಿಸಿದ್ದಾರೆ.
ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ. ಮೋಹನ್ ಅವರು ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದು, ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ನಂತಹ ಹಸಿರು ತಾಣಗಳನ್ನು ರಕ್ಷಿಸುವ ಕಾನೂನುಗಳನ್ನು ಬಲಪಡಿಸಬೇಕೇ ಹೊರತು ಸಡಿಲಿಸಬಾರದು ಎಂದಿದ್ದಾರೆ. ಮಸೂದೆ ಪ್ರಸಕ್ತ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸುರಂಗ ರಸ್ತೆ ಮಾರ್ಗದ ವಿರುದ್ಧ ಲಾಲ್ಬಾಗ್ನಲ್ಲಿ ಹೋರಾಟವೂ ತೀವ್ರಗೊಂಡಿದೆ. 2025ರ ನವೆಂಬರ್ನಲ್ಲಿ ಬಿಜೆಪಿ ನಾಯಕರು 'ಸೇವ್ ಬೆಂಗಳೂರು& ಸ್ಟಾಪ್ ಟನಲ್ ರೋಡ್' ಘೋಷಣೆಯೊಂದಿಗೆ ಮೌನ ಪ್ರತಿಭಟನೆ ನಡೆಸಿದ್ದರು. 2026ರ ಜುಲೈನಲ್ಲಿ ಸಂಸದ ತೇಜಸ್ವಿ ಸೂರ್ಯ, "ಲಾಲ್ಬಾಗ್ ಮಾರಾಟಕ್ಕಿದೆ' ಎಂಬ ಕರಪತ್ರ ಹಂಚಿ ವಿರೋಧ ವ್ಯಕ್ತಪಡಿಸಿದ್ದರು. ಆಗಸ್ಟ್ನಲ್ಲಿ ಲಾಲ್ಬಾಗ್ ನಡಿಗೆದಾರರ ಸಂದ ನೇತೃತ್ವದಲ್ಲಿ ಮಾನವ ಸರಪಳಿ, ಸಾಂಕೇತಿಕ ಪ್ರತಿಭಟನೆಗಳು ಮುಂದುವರಿದಿವೆ.
ಲಾಲ್ಬಾಗ್ನ ಸಂರಕ್ಷಿತ ಜಾಗದ ಶೇ.5 ಭಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸುವ ತಿದ್ದುಪಡಿ ಪ್ರಸ್ತಾವನೆ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಉದ್ಯಾನವನ್ನು ಕೇವಲ ಎಕರೆ ಪ್ರತಿಶತದ ಲೆಕ್ಕದಲ್ಲಿ ನೋಡುವುದು ಅಪಾಯಕಾರಿ. ಶತಮಾನಗಳಷ್ಟು ಹಳೆಯ ಮರಗಳು, ಮಣ್ಣು, ಜಲವ್ಯವಸ್ಥೆ ಹಾಗೂ ಜೀವವೈವಿಧ್ಯ ಒಟ್ಟಾಗಿ ರೂಪಿಸಿರುವ ಈ ಪರಿಸರಕ್ಕೆ ಸಣ್ಣ ಪ್ರಮಾಣದ ಹಾನಿಯೂ ದೊಡ್ಡ ಪರಿಣಾಮ ಬೀರಬಹುದು. ಇಂದು ಶೇ.5ಕ್ಕೆ ಬಾಗಿಲು ತೆರೆದರೆ, ನಾಳೆ ಶೇ.10 ಅಥವಾ 20ಕ್ಕೆ ದಾರಿ ಮಾಡಿಕೊಡುವ ಅಪಾಯವಿದೆ ಎಂದು ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.