ಜಿಬಿಎ 
ಬೆಂಗಳೂರು

ಅನಾಥ ವಾಹನಗಳ ಹರಾಜಿಗೆ ಜಿಬಿಎ ಸಿದ್ಧತೆ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ನೋಟಿಸ್​ಗಳಿಗೆ ಪ್ರತಿಕ್ರಿಯಿಸದ ಮಾಲೀಕರು
  • ಸ್ಥಳ ಬದಲಾಯಿಸಿ ನಿಲ್ಲಿಸುವುದು ಹೊಸ ಸವಾಲು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಗರದಲ್ಲಿ ವರ್ಷಗಳಿಂದ ರಸ್ತೆ, ಬೀದಿಬದಿ ಹಾಗೂ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವ ಮಾಲೀಕರಿಲ್ಲದ ವಾಹನಗಳ ವಿರುದ್ಧ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಠಿಣ ಕ್ರಮಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ತೆರವುಗೊಳಿಸಿ ಡಂಪಿಂಗ್​ ಯಾರ್ಡ್​ಗೆ ಸಾಗಿಸಿರುವ 50 ಅನಾಥ ವಾಹನಗಳನ್ನು ಹರಾಜು ಹಾಕಲು ಸಿದ್ಧತೆ ನಡೆಸಿದೆ.
ಬೆಂಗಳೂರು ದಕ್ಷಿಣ ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಹಳೆಯ ಹಾಗೂ ಮಾಲೀಕರಿಲ್ಲದ ವಾಹನಗಳನ್ನು ಕಳೆದ ಒಂದು ತಿಂಗಳಿನಿಂದ ಗುರುತಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ವೇಳೆ ಹಲವು ವಾಹನಗಳನ್ನು ಜಪ್ತಿ ಮಾಡಿ ಜಿಬಿಎಯ ಡಂಪಿಂಗ್​ ಯಾರ್ಡ್​ಗೆ ಸ್ಥಳಾಂತರಿಸಲಾಗಿದೆ.
ನೋಟಿಸ್​ಗೂ ಕ್ಯಾರೆ ಎನ್ನದ ಮಾಲೀಕರು:
ಮಾಲೀಕರಿಗೆ ತಮ್ಮ ವಾಹನಗಳನ್ನು ಬಿಡಿಸಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಜಿಬಿಎ ಅಧಿಕಾರಿಗಳು ವಾಹನಗಳಿಗೆ ನೋಟಿಸ್​ ಅಂಟಿಸುವ ಜತೆಗೆ ಪತ್ರಿಕಾ ಪ್ರಕಟಣೆಗಳ ಮೂಲಕವೂ ಮಾಹಿತಿ ನೀಡಿದ್ದಾರೆ. ಆದರೂ 50 ಮಾಲೀಕರ ಪೈಕಿ ಈವರೆಗೆ ಯಾರೊಬ್ಬರೂ ವಾಹನ ಬಿಡಿಸಿಕೊಳ್ಳಲು ಮುಂದೆ ಬಂದಿಲ್ಲ. ಹೀಗಾಗಿ ಇವುಗಳನ್ನು ಅನಾಥ ವಾಹನಗಳೆಂದು ಪರಿಗಣಿಸಿ ಹರಾಜು ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಸ್ಥಳ ಬದಲಾಯಿಸುವುದೇ ಹೊಸ ಸವಾಲು: 
ವಾಹನಗಳಿಗೆ ನೋಟಿಸ್​ ಅಂಟಿಸಿದ ಬಳಿಕ ಕೆಲವರು ಅವುಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸುತ್ತಿರುವುದು ಅಧಿಕಾರಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ವಿವಿಧ ನಗರಪಾಲಿಕೆಗಳ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯೂ ತೆರವು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳನ್ನು ವಾಹನ ನಿಲುಗಡೆಗೆ ಬಳಸಿಕೊಂಡು ಜನರ ಸಂಚಾರಕ್ಕೆ ಅಡ್ಡಿಪಡಿಸುವವರ ವಿರುದ್ಧವೂ ಕ್ರಮ ಮುಂದುವರಿಯಲಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.

ಪಾದಚಾರಿ ಮಾರ್ಗಕ್ಕೆ ಮುಕ್ತಿ?

ಅನಾಥ ವಾಹನಗಳ ತೆರವು ಕೇವಲ ರಸ್ತೆ ಸ್ವಚ್ಛತೆಗೆ ಸೀಮಿತವಾಗದೆ, ಸಾರ್ವಜನಿಕರ ಸಂಚಾರದ ಹಕ್ಕು ರಕ್ಷಿಸುವ ಅಭಿಯಾನವಾಗಬೇಕಿದೆ. ಮೊದಲ ಹಂತದ 50 ವಾಹನಗಳ ಹರಾಜಿನ ಬಳಿಕವೂ ನಗರದೆಲ್ಲೆಡೆ ಇದೇ ಮಾದರಿಯ ಕಾರ್ಯಾಚರಣೆ ವಿಸ್ತರಣೆಯಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ವಾಹನ ತೆರವು ಜತೆಗೆ ಅವು ಮತ್ತೆ ರಸ್ತೆಗಿಳಿಯದಂತೆ ನಿಗಾ ವ್ಯವಸ್ಥೆ ರೂಪಿಸಿದರೆ ಮಾತ್ರ ಅಭಿಯಾನಕ್ಕೆ ಶಾಶ್ವತ ಫಲ ಸಿಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.