ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)-2026 ಪ್ರಕ್ರಿಯೆಯಲ್ಲಿ 18 ವರ್ಷ ಮೇಲ್ಪಟ್ಟ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಹಾಗೂ ಬೂತ್ಮಟ್ಟದ ಅಧಿಕಾರಿಗಳು (ಬಿಎಲ್ಒ) ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸೂಚಿಸಿದ್ದಾರೆ.
ಕೇಂದ್ರ ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಶೇಷ ನೋಂದಣಿ ಅಭಿಯಾನದ ಪರಿಶೀಲನೆ ನಡೆಸಿದ ಅವರು, ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್ನ ಬಾಲ್ಡ್ವಿನ್ ಗರ್ಲ್ಸ್ ಶಾಲೆಯ ಬೂತ್ ನಂ.47 ಮತ್ತು 48 ಹಾಗೂ ಅಗರಂ ವಾರ್ಡ್ನ ಆಸ್ಟಿನ್ ಟೌನ್ನ ಸರ್ಕಾರಿ ತಮಿಳು ಮತ್ತು ಆಂಗ್ಲ ಪ್ರೌಢಶಾಲೆಯಲ್ಲಿನ ಮತದಾರರ ವಿಚಾರಣೆ ಕೇಂದ್ರಕ್ಕೆ ಭೇಟಿ ನೀಡಿದರು. ಎಸ್ಐಆರ್ ನೋಟಿಸ್ಗಳ ವಿಚಾರಣೆ, ನಮೂನೆ-&6 ವಿತರಣೆ ಹಾಗೂ ಮತದಾರರ ನೋಂದಣಿ ಕಾರ್ಯದ ಪ್ರಗತಿ ಪರಿಶೀಲಿಸಿದರು.
ಶಾಂತಿನಗರ ಕ್ಷೇತ್ರದ ಶಾಂತಲಾನಗರ ವಾರ್ಡ್ನ ಲ್ಯಾಂಗ್ಫೋರ್ಡ್ ರಸ್ತೆಯ ಅಪಾರ್ಟ್ಮೆಂಟ್ಗೆ ತೆರಳಿದ ವಿ. ಅನ್ಬುಕುಮಾರ್ ಅವರು ನಮೂನೆ-&6 ವಿತರಿಸಿದರು. ಬಳಿಕ ಮತದಾರರ ವಿಚಾರಣೆ ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಅರ್ಜಿಗಳನ್ನು ವಿತರಿಸಿದರು. ಅರ್ಜಿ ಭರ್ತಿಯಲ್ಲಿ ಅನುಮಾನಗಳಿದ್ದವರಿಗೆ ಸಹಾಯ ಮಾಡುವಂತೆ ಸ್ಥಳದಲ್ಲಿದ್ದ ಕಂದಾಯ ಸಿಬ್ಬಂದಿಗೆ ಸೂಚಿಸಿದರು.
ಪ್ರತಿಯೊಬ್ಬ ಮತದಾರರೂ ದೇಶದ ಅಮೂಲ್ಯ ಆಸ್ತಿ. ಮತದಾನ ಸೇರಿ ವಿವಿಧ ಸರ್ಕಾರಿ ಸೌಲಭ್ಯ ಪಡೆಯಲು ಮತದಾರರ ಗುರುತಿನ ಚೀಟಿ ಅಗತ್ಯವಾಗಿದ್ದು, ಅರ್ಹ ಪ್ರತಿಯೊಬ್ಬರಿಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವ ಹಕ್ಕಿದೆ. ಹೀಗಾಗಿ ವಿಚಾರಣೆ ಕೇಂದ್ರಗಳಿಗೆ ಆಗಮಿಸುವ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಯುವಜನರೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೌಜನ್ಯ ಹಾಗೂ ಸಂಯಮದಿಂದ ವರ್ತಿಸಬೇಕು ಎಂದು ತಿಳಿಸಿದರು.
ಎಂ.ಜಿ. ರಸ್ತೆಯ ಪಿಯುಬಿ ಕಟ್ಟಡದ 10ನೇ ಮಹಡಿಯ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ನೋಂದಣಾಧಿಕಾರಿಗಳು ಹಾಗೂ ಬಿಎಲ್ಒಗಳು ತಂಡವಾಗಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಎಸ್ಐಆರ್ ಕಾರ್ಯವನ್ನು ತ್ವರಿತ ಹಾಗೂ ಪರಿಣಾಮಕಾರಿಯಾಗಿ ಪೂರ್ಣಗೊಳಿಸಬೇಕು ಎಂದರು.
ಬಿಎಲ್ಒಗಳಿಗೆ ತೊಂದರೆ ನೀಡದಂತೆ ಸೂಚನೆ
ಎಸ್ಐಆರ್ ಪ್ರಕ್ರಿಯೆಯ ಯಶಸ್ಸಿಗೆ ತಳಮಟ್ಟದಲ್ಲಿ ಶ್ರಮಿಸುತ್ತಿರುವ ಬಿಎಲ್ಒಗಳಿಗೆ ಅವರ ಮಾತೃ ಇಲಾಖೆ ಅಥವಾ ಎಸ್ಐಆರ್ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅವರೊಂದಿಗೆ ಸಂಯಮದಿಂದ ವರ್ತಿಸಿ ಕಾರ್ಯನಿರ್ವಹಿಸಲು ಮತದಾರರ ನೋಂದಣಾಧಿಕಾರಿಗಳಿಗೆ ಅನ್ಬುಕುಮಾರ್ ಸೂಚಿಸಿದರು.
ಅನಕ್ಷರಸ್ಥರಿಗೆ ನಮೂನೆ-&6 ಭರ್ತಿ ಮಾಡಲು ಸಹಕರಿಸುವುದು, ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಗೌರವ ನೀಡುವುದು, ಸಲ್ಲಿಸಿರುವ ದಾಖಲೆಗಳ ಸರಿತಪ್ಪುಗಳ ಕುರಿತು ತಕ್ಷಣ ಮಾಹಿತಿ ನೀಡುವುದು, ಅಗತ್ಯ ದಾಖಲೆಗಳ ಬಗ್ಗೆ ಸ್ಪಷ್ಟಪಡಿಸುವುದು ಹಾಗೂ ಸಾರ್ವಜನಿಕರ ಸಮಯ ವ್ಯರ್ಥವಾಗದಂತೆ ತ್ವರಿತವಾಗಿ ಕೆಲಸ ಪೂರ್ಣಗೊಳಿಸುವಂತೆ ಅನ್ಬುಕುಮಾರ್ ಸೂಚಿಸಿದರು.