"ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನದಡಿ ರೈಲ್ವೆ ಇಲಾಖೆಯ ಜಾಗದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯಗಳನ್ನು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್​ ಪರಿಶೀಲನೆ ನಡೆಸಿದರು. ಪಾಲಿಕೆ ಆಯುಕ್ತ ಡಿ.ಎಸ್​. ರಮೇಶ್​ , ರೈಲ್ವೆ ವಿಭಾಗದ ಎಡಿಆರ್​ಎಂ ಪ್ರವಿಣ್​ ಕತರಕಿ ಮತ್ತಿತರರು ಇದ್ದರು. 
ಬೆಂಗಳೂರು

ರೈಲು ಹಳಿಗಳ ಪಕ್ಕದ ಪ್ರದೇಶ ಸ್ವಚ್ಛಗೊಳಿಸಿ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್​ ಸೂಚನೆ

ಬೆಂಗಳೂರು: ರೈಲುಹಳಿಗಳ ಸಮೀಪದ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಗ್ರೇಟರ್​ ರೈಲ್ವೆ ಅಧಿಕಾರಿಗಳಿಗೆ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್​ ಸೂಚನೆ ನೀಡಿದ್ದಾರೆ.

ನಗರದಾದ್ಯಂತ "ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನದಡಿ ಬೃಹತ್​ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ರೈಲ್ವೆ ಇಲಾಖೆಯ ಜಾಗದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯಗಳ ಪರಿಶೀಲನೆಗಾಗಿ ಮಂಗಳವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳ್ಳಾರಿ ರಸ್ತೆಯ ಯಲಹಂಕ ರೈಲ್ವೆ ಕೆಳಸೇತುವೆ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿ ಕಟ್ಟಡ ಭಗ್ನಾವಶೇಷಗಳನ್ನು ಕೂಡಲೇ ತೆರವುಗೊಳಿಸಬೇಕು. ತ್ಯಾಜ್ಯ ಮತ್ತೆ ಬಿಸಾಡದಂತೆ ಬೇಲಿ ಅಳವಡಿಸುವಂತೆ ನಿರ್ದೇಶಿಸಿದರು.
ತ್ಯಾಜ್ಯ ವರ್ಗಾವಣೆ ಸ್ಥಳ ನಿರ್ಮಿಸಿ:
ಥಣಿಸಂದ್ರ ಮುಖ್ಯ ರಸ್ತೆಯ ಬಳಿಯ ರೈಲು ಹಳಿ ಪಕ್ಕದಲ್ಲಿರುವ ಪಾಲಿಕೆ ಜಾಗವನ್ನು ಬಳಸಿಕೊಂಡು, ರಸ್ತೆಬದಿಯಲ್ಲಿ ಆಟೋ ಟಿಪ್ಪರ್​ನಿಂದ ಕಾಂಪ್ಯಾಕ್ಟರ್​ಗೆ ತ್ಯಾಜ್ಯ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಕೂಡಲೇ ಈ ಜಾಗಕ್ಕೆ ಸ್ಥಳಾಂತರಿಸಲು ಸೂಚಿಸಿದರು.
ಸ್ವಚ್ಛತಾ ಕಾರ್ಯ ಪರಿಶೀಲನೆ:
ಹೊರ ವರ್ತುಲ ರಸ್ತೆಯ ರಾಮಮೂರ್ತಿನಗರ ಬಳಿಯ ಸರ್ವೀಸ್​ ರಸ್ತೆ ಬದಿಯಲ್ಲಿ ಸಿ ಆ್ಯಂಡ್​ ಡಿ ತ್ಯಾಜ್ಯ ತೆರವು ಕಾರ್ಯಾಚರಣೆ ನಡೆಯುತ್ತಿರುವುದನ್ನು ವೀಕ್ಷಿಸಿದ ಮಹೇಶ್ವರ ರಾವ್​, ಸ್ವಚ್ಛತಾ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಹೇಳಿದರು.
ಪಾಲಿಕೆ ಆಯುಕ್ತರಾದ ಡಿ.ಎಸ್​. ರಮೇಶ್​ , ಪಿ. ಸುನೀಲ್​ ಕುಮಾರ್​, ರೈಲ್ವೆ ವಿಭಾಗದ ಎಡಿಆರ್​ಎಂ ಪ್ರವಿಣ್​ ಕತರಕಿ, ಜಂಟಿ ಆಯುಕ್ತ ಮೊಹಮ್ಮದ್​ ನಯೀಮ್​ ಮೊಮಿನ್​ ಉಪಸ್ಥಿತರಿದ್ದರು.

ಸಮನ್ವಯದಿಂದ ಸ್ವಚ್ಛತೆ ಮಾಡಿ

ಹೊರ ವರ್ತುಲ ರಸ್ತೆಯ ಸರ್ವೀಸ್​ ರಸ್ತೆ ಭಾಗದುದ್ದಕ್ಕೂ ಸಿ ಆ್ಯಂಡ್​ ಡಿ ತ್ಯಾಜ್ಯ, ಗಿಡ-ಗಂಟಿಗಳು ಹಾಗೂ ಅನುಪಯುಕ್ತ ಸಾಮಗ್ರಿಗಳಿವೆ. ರೈಲ್ವೆ ಹಾಗೂ ಕೆ-ರೈಡ್​ ಅಧಿಕಾರಿಗಳೊಂದಿಗೆ ಸಭೆ ನಡೆಸಿ  ಸಮನ್ವಯದೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಪೂರ್ವ ಪಾಲಿಕೆ ಆಯುಕ್ತರಿಗೆ ಮಹೇಶ್ವರ ರಾವ್​ ಸೂಚಿಸಿದರು. ಕಸ್ತೂರಿನಗರ ಮೇಲ್ಸೇತುವೆಯ ಕೆಳಭಾಗದ ರೈಲ್ವೆ ಹಳಿ ಬದಿಯಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ, ಮತ್ತೆ ತ್ಯಾಜ್ಯ ಸುರಿಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಪೂರ್ವ, ಕೇಂದ್ರ ಪಾಲಿಕೆಗಳು, ಕೆ-&ರೈಡ್​ ಹಾಗೂ ಮೆಟ್ರೋ ವತಿಯಿಂದ ಕೈಗೊಳ್ಳಬೇಕಿರುವ ಕಾಮಗಾರಿಗಳು ಮತ್ತು ಕಾರ್ಯಗಳ ವಿವರಗಳನ್ನು ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.