- ಡೊಳ್ಳುಕುಣಿತ, ವಾಕಥಾನ್ ಮೂಲಕ ವಿಶೇಷ ಜಾಗೃತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಹಿನ್ನೆಲೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಅರಿವು ಮೂಡಿಸಲು, ವಿಶೇಷ ಜನಜಾಗೃತಿ ಅಭಿಯಾನಗಳಿಗೆ ಚಾಲನೆ ದೊರೆತಿದೆ.
ಶನಿವಾರ ಹಾಗೂ ಭಾನುವಾರ ರಜಾ ದಿನಗಳಲ್ಲೂ ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ನೆರವಾಗಲು ಸರ್ಕಾರಿ ರಜಾ ದಿನಗಳಲ್ಲೂ ನಮ್ಮ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮತ್ತು ಸಿಬ್ಬಂದಿ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಕುಳಿತು ಸಾರ್ವಜನಿಕರ ಸಂದೇಹಗಳನ್ನು ನಿವಾರಿಸಿ ಸಹಾಯ ಮಾಡಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ಈಗಾಗಲೇ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದು ಕಂಡುಬಂದಲ್ಲಿ, ಅರ್ಹ ನಾಗರಿಕರು ನಮೂನೆ&-6 ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಿ ತಕ್ಷಣವೇ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗಬಾರದು ಎಂಬುದು ಚುನಾವಣಾ ಆಯೋಗದ ದೃಢ ಸಂಕಲ್ಪವಾಗಿದೆ.
ವಿಚಾರಣಾ ನೋಟಿಸ್ ಪಡೆದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮತಗಟ್ಟೆ ಅಥವಾ ಚುನಾವಣಾ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಭಾರತೀಯ ಪೌರತ್ವ, ವಯಸ್ಸು ಹಾಗೂ ನಿವಾಸದ ಪೂರಕ ದಾಖಲೆಗಳನ್ನು ಒದಗಿಸಿ ಹೆಸರುಗಳನ್ನು ಸುಲಭವಾಗಿ ಖಚಿತಪಡಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕರು ಸದುಪಯೋಗಪಡಿಸಿ:
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗದ ಮತದಾರರು ಈ ವಿಶೇಷ ಅಭಿಯಾನಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ಮತಗಟ್ಟೆಗಳಿಗೆ ಭೇಟಿ ನೀಡಿ ಕರಡು ಪಟ್ಟಿಯನ್ನು ಪರಿಶೀಲಿಸಿ, ಅರ್ಹರಿದ್ದಲ್ಲಿ ಅಗತ್ಯ ನಮೂನೆ-6 ಮತ್ತು ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಚುನಾವಣಾಧಿಕಾರಿಗಳು ಮನವಿ ಮಾಡಿದರು.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಸುತ್ತಮುತ್ತಲಿನ ಜನನಿಬಿಡ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಡೊಳ್ಳುಕುಣಿತ ಕಲಾತಂಡಗಳ ಸಮೇತ ಜಾಥಾ ನಡೆಸಿ ಸಾರ್ವಜನಿಕರ ಗಮನ ಸೆಳೆಯಲಾಯಿತು. ಈ ವೇಳೆ ಮತದಾನವು ಸಂವಿಧಾನಬದ್ಧ ಹಕ್ಕಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕಲಾಪ್ರದರ್ಶನದ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಯಿತು.
ಶೇ. 23.61 ನೋಟಿಸ್ಗಳ ವಿಚಾರಣೆ ಪೂರ್ಣ
ದಕ್ಷಿಣ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆ. 24 ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 10,86,756 ಮತದಾರರಿದ್ದಾರೆ. ಈ ಪೈಕಿ ವಿವರಗಳಲ್ಲಿ ವ್ಯತ್ಯಾಸವಿರುವ ಹಾಗೂ ಮಾಹಿತಿ ಅಪೂರ್ಣವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 4,18,109 ನೋಟಿಸ್ಗಳನ್ನು ಜನರೇಟ್ ಮಾಡಲಾಗಿದೆ. ಇವುಗಳಲ್ಲಿ ಈಗಾಗಲೇ 98,720 (ಶೇ. 23.61) ನೋಟಿಸ್ಗಳ ವಿಚಾರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಉಳಿದ ವಿಚಾರಣೆಗಳನ್ನು ಮುಂಬರುವ ಒಂದು ಅಥವಾ ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗ ಕೆ.ಎನ್. ರಮೇಶ್ ಮಾಹಿತಿ ನೀಡಿದರು.
ಎಂ.ಜಿ. ರಸ್ತೆಯಲ್ಲಿ ಜಾಗೃತಿ ವಾಕಥಾನ್
ಎಸ್ಐಆರ್ ವಿಶೇಷ ಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ಕೇಂದ್ರ ಪಾಲಿಕೆ ಆಯುಕ್ತ ಜಿ. ಜಗದೀಶ್ ನೇತೃತ್ವದಲ್ಲಿ ಕೇಂದ್ರ ಪಾಲಿಕೆ ವ್ಯಾಪ್ತಿಯ ಮಹಾತ್ಮ ಗಾಂಧಿ ರಸ್ತೆಯಲ್ಲಿ ವಾಕಥಾನ್ ನಡೆಸುವ ಮೂಲಕ ಎಸ್ಐಆರ್ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ಅಪರ ಆಯುಕ್ತ (ಅಭಿವೃದ್ಧಿ)ಆರ್. ವೆಂಕಟಾಚಲಪತಿ, ಅಪರ ಆಯುಕ್ತೆ (ಕಂದಾಯ) ಲಕ್ಷ$್ಮಮ್ಮ, ಜಂಟಿ ಆಯುಕ್ತರಾದ ಕೆ. ರಂಗನಾಥ್, ಹೇಮಂತ್ ಶರಣ್, ಉಪ ಆಯುಕ್ತ ಅಬ್ದುಲ್ ರಬ್ ಉಪಸ್ತಿತರಿದ್ದರು.