ಜಯನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟು ವಶಪಡಿಸಿಕೊಂಡಿರುವ ವಾಹನಗಳ ಸ್ಥಳಾಂತರಕ್ಕೆ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಶಾಸಕ ಸಿ.ಕೆ. ರಾಮಮೂರ್ತಿ, ಜಿಬಿಎ ದಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಇತರರು ಇದ್ದರು.
- ಜಯನಗರದಲ್ಲಿ ಸಚಿವ ಕೃಷ್ಣ ಬೈರೇಗೌಡ ಚಾಲನೆ
- ಹತ್ತಾರು ವರ್ಷಗಳಿಂದ ನಿಂತಿರುವ ಪ್ರಕರಣ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಪಘಾತ ಇತ್ಯಾದಿ ಪ್ರಕರಣ ಸಂಬಂಧಪಟ್ಟ ಸುಮಾರು 11,341 ವಾಹನಗಳನ್ನು ನಗರದ ವಿವಿಧ ಭಾಗಗಳಲ್ಲಿ ಇರುವ ಜಾಗಕ್ಕೆ ಸ್ಥಳಾಂತರಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಜಯನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಚಾಲನೆ ನೀಡಿದರು.
ಬಳಿಕ ವರದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರು ಜನರಿಗೆ ಕಾಡುವ ಹಳೇ ಸಮಸ್ಯೆಗಳಲ್ಲಿ ಇದೂ ಒಂದು. ಈಗಾಗಲೇ ಪಾದಚಾರಿ ಮಾರ್ಗ ತೆರವು, ಖಾಲಿ ನಿವೇಶನಗಳ ಸ್ವಚ್ಛತೆ ಹಾಗೂ ಇತರ ನಗರ ಸೌಂದರೀಕರಣ ಕೆಲಸಗಳು ನಡೆಯುತ್ತಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆಗಳ ಸಹಕಾರದಿಂದ ನಗರದ ಪೊಲೀಸ್ ಠಾಣೆಯ ಸುತ್ತಮುತ್ತ ಹತ್ತಾರು ವರ್ಷಗಳಿಂದ ನಿಂತಿರುವ ಪ್ರಕರಣಗಳ ಸಂಬಂಧ ಜಪ್ತಿ ಮಾಡಿರುವ ವಾಹನಗಳು, ಅಪಘಾತಕ್ಕೆ ಒಳಪಟ್ಟು ವಶಪಡಿಸಿಕೊಂಡಿರುವ ವಾಹನಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಪೊಲೀಸ್ ಠಾಣೆಗಳಲ್ಲಿರುವ ವಾಹನಗಳು ತುಕ್ಕು ಹಿಡಿದಿದ್ದು, ರಾತ್ರಿ ವೇಳೆ ಬಿಡಿಭಾಗಗಳ ಕಳವು ಇತ್ಯಾದಿ ಅಕ್ರಮ ಚಟುವಟಿಕೆಗಳಿಗೂ ತುತ್ತಾಗುತ್ತಿದ್ದು, ಜನರು ರಸ್ತೆಗಳಲ್ಲಿ ಓಡಾಡಲು ಅಡ್ಡಿಯಾಗುತ್ತಿದೆ ಎಂದು ಜನಪ್ರತಿನಿಧಿಗಳ ಆದಿಯಾಗಿ ಹಲವರಿಂದ ದೂರು ಬರುತ್ತಿರುವ ಹಿನ್ನೆಲೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಗಿಗುಡ್ಡ ಸೇರಿ ಜಿಬಿಎ ವ್ಯಾಪ್ತಿಯ ವಿವಿಧ 7 ಭಾಗಗಳಲ್ಲಿ ಸ್ಥಳಾಂತರಕ್ಕೆ ಜಾಗ ನಿಗದಿ ಮಾಡಿದ್ದು, ಇದಕ್ಕಾಗಿ ಕಂದಾಯ ಇಲಾಖೆ 26 ಎಕರೆ ಜಾಗವನ್ನು ನೀಡಿದೆ ಎಂದು ತಿಳಿಸಿದರು.
ಕೋರ್ಟ್ ಪ್ರಕರಣಗಳು ಇತ್ಯರ್ಥ ಆಗುವ ತನಕ ನಗರದ ಪೊಲೀಸ್ ಠಾಣೆಗಳಲ್ಲಿ ಬಿದ್ದಿರುವ ವಾಹನಗಳನ್ನು ವಿವಿಧ ಜಾಗಗಳಿಗೆ ಸ್ಥಳಾಂತರಿಸಲಾಗುವುದು. ಅಲ್ಲದೆ ಎಲ್ಲ ಸ್ಥಳಗಳಿಗೆ ಬೇಲಿ ಹಾಕಿ ರಕ್ಷಣೆ ನೀಡುವುದರ ಜತೆಗೆ ಸಿಸಿ ಕ್ಯಾಮರಾ ಕಣ್ಗಾವಲಲ್ಲಿ ಇರಿಸಲಾಗುವುದು. ಪೊಲೀಸ್ ಬಂದೋಬಸ್ತ್ ಕೂಡ ನೀಡಲಾಗುವುದು ಎಂದು ಹೇಳಿದರು.
ಶಾಸಕ ಸಿ.ಕೆ. ರಾಮಮೂರ್ತಿ, ಜಿಬಿಎ ದಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮತ್ತಿತರರು ಇದ್ದರು. ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಹಾಗೂ ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಜಯನಗರದಿಂದ 111 ವಾಹನಗಳ ತೆರವು
ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ಭಾಗವಾಗಿ ಜಯನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ನಿಲುಗಡೆ ಮಾಡಲಾಗಿದ್ದ ಒಟ್ಟು 111 ಹಳೇ ವಾಹನಗಳನ್ನು ರಾಗಿಗುಡ್ಡಕ್ಕೆ ಸ್ಥಳಾಂತರಿಸಲಾಯಿತು.
ಜಯನಗರವನ್ನು ಏಷ್ಯಾದಲ್ಲೇ ಅತ್ಯಂತ ಶ್ರೇಷ್ಠ ಬಡಾವಣೆ ಎಂದು ಗುರುತಿಸಲಾಗುತ್ತಿದೆ. ಅಂಥದ್ದರಲ್ಲಿ ಇಲ್ಲಿನ ಪೊಲೀಸ್ ಠಾಣೆಯ ಸುತ್ತಮುತ್ತ ಹಳೇ ವಾಹನಗಳು ಬಿದ್ದು, ಅವ್ಯವಸ್ಥಿತವಾಗಿ ಕಾಣುತ್ತಿರುವುದು ಅಸಹ್ಯ. ಇದು ಈಗಿನ ಸಮಸ್ಯೆಯಲ್ಲ, 2 ದಶಕಗಳಿಂದ ಇರುವಂತದ್ದು. ಇಲ್ಲಿನ ವಾತಾವರಣವನ್ನು ಬದಲಾಯಿಸುವ ಉದ್ದೇಶದಿಂದ ವಾಹನಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛ ಮಾಡಲಾಗುವುದು.