ಜಿಬಿಎ 
ಬೆಂಗಳೂರು

ಗಣೇಶ ಹಬ್ಬದ ಹಿನ್ನೆಲೆ ಕೆ.ಆರ್​. ಮಾರುಕಟ್ಟೆಯಲ್ಲಿ ವಿಶೇಷ ಸ್ವಚ್ಛತೆ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಮೂರು ದಿನಗಳಲ್ಲಿ 110 ಟನ್​ ತ್ಯಾಜ್ಯ ತೆರವು
  • 100 ಪೌರಕಾರ್ಮಿಕರು ಹಾಗೂ 26 ಮಾರ್ಷಲ್​ಗಳು ಭಾಗಿ
ಬೆಂಗಳೂರು: ಗೌರಿ-&ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೇಂದ್ರ ಪಾಲಿಕೆ ವ್ಯಾಪ್ತಿಯ ಚಾಮರಾಜಪೇಟೆ ವಿಭಾಗದ ಕೆ.ಆರ್​. ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಸ್ವಚ್ಛತಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು, ಒಟ್ಟು 110 ಟನ್​ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ಕೇಂದ್ರ ಪಾಲಿಕೆ ಆಯುಕ್ತ ಜಿ. ಜಗದೀಶ್​ ತಿಳಿಸಿದ್ದಾರೆ.
ಸೆ.14 ರಿಂದ 16ರ ವರೆಗೆ ಮೂರು ದಿನಗಳ ಕಾಲ ನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, ಕೆ.ಆರ್​.ಮಾರುಕಟ್ಟೆ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ತರಕಾರಿ ತ್ಯಾಜ್ಯ ಹಾಗೂ ಇತರೆ ಹಬ್ಬದ ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸಲು ವಿಶೇಷ ತಂಡಗಳು ಹಾಗೂ ಯಂತ್ರೋಪಕರಣಗಳನ್ನು ಬಳಸಲಾಯಿತು.
ತೆರವು ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೂರು ದಿನಗಳಲ್ಲಿ ಒಟ್ಟಾರೆ 100 ಪೌರಕಾರ್ಮಿಕರು ಹಾಗೂ 26 ಮಾರ್ಷಲ್​ಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ, ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯವನ್ನು ನಿರಂತರವಾಗಿ ಕೈಗೊಂಡಿರುತ್ತಾರೆ ಎಂದು ತಿಳಿಸಿದರು.
ತೆರವು ಕಾರ್ಯಾಚರಣೆಗೆ 6 ಜೆಸಿಬಿ ಹಾಗೂ 14 ಕಾಂಪ್ಯಾಕ್ಟರ್​ಗಳನ್ನು ಬಳಸಲಾಯಿತು. ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.