- ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಸೂಚನೆ
- ಶೇ.20 ನಿವೇಶನ ಮಾಲೀಕರಿಂದ ನಿಯಮ ಪಾಲನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ವಚ್ಛಗೊಳಿಸಬೇಕಾದ ಖಾಲಿ ನಿವೇಶನಗಳನ್ನು ಗುರುತಿಸಿ ಅವುಗಳಿಗೆ ನೋಟಿಸ್ ಅಂಟಿಸಿ, ತ್ವರಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಕುರಿತು ಸೋಮವಾರ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿ, ಖಾಲಿ ನಿವೇಶನಗಳ ಮಾಲೀಕರು ಸ್ವತ@ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಆ.22ರ ವರೆಗೆ ಗಡುವು ನೀಡಲಾಗಿತ್ತು. ಆದರೆ, ಈ ಪೈಕಿ ಕೆಲವೇ ಪ್ರದೇಶಗಳಲ್ಲಿ ಶೇ.20 ನಿವೇಶನಗಳ ಮಾಲೀಕರು ಮಾತ್ರ ಸ್ವತ@ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಎಲ್ಲ ಖಾಲಿ ನಿವೇಶನಗಳಲ್ಲಿಯೂ ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಐದೂ ನಗರ ಪಾಲಿಕೆಗಳಲ್ಲಿ ಸಿದ್ಧತೆಗಳನ್ನು ಮಾಡಿಕೊಂಡು ಸ್ವಚ್ಛತಾ ಕಾರ್ಯವನ್ನು ಸಕ್ರಿಯವಾಗಿ ನಡೆಸಬೇಕು. ಇದಕ್ಕೆ ತಗುಲುವ ವೆಚ್ಚವನ್ನು ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡಬೇಕು ಎಂದು ಸೂಚಿಸಿದರು.
ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಾದ ಖಾಲಿ ನಿವೇಶನಗಳನ್ನು ಕಂದಾಯ ಅಧಿಕಾರಿಗಳು ಗುರುತಿಸಿ ಪಟ್ಟಿ ಮಾಡಬೇಕು. ಪಟ್ಟಿ ಮಾಡಲಾದ ನಿವೇಶನಗಳಿಗೆ ಮಾರ್ಷಲ್ಗಳು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರು ನೋಟಿಸ್ ಅಂಟಿಸಬೇಕು. ಬಳಿಕ ಪಾಲಿಕೆಯ ವತಿಯಿಂದ ನಿವೇಶನಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಇದೇ ಗುರುವಾರದಿಂದ ಎಲ್ಲ ನಗರ ಪಾಲಿಕೆಗಳಲ್ಲಿಯೂ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯವನ್ನು ಆರಂಭಿಸಬೇಕು. ಮುಂದಿನ ಸೋಮವಾರದಿಂದ ಈ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ವಚ್ಛತಾ ಕಾರ್ಯ ಕೈಗೊಳ್ಳದಿರುವ ಖಾಲಿ ನಿವೇಶನಗಳ ಮಾಹಿತಿಯನ್ನು ನಾಗರಿಕರು "ಕ್ಲಿಯರ್ ಇಟ್' ಆ್ಯಪ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಈ ಸಂಬಂಧ ತಂತ್ರಾಂಶದಲ್ಲಿ ಅಗತ್ಯ ವ್ಯವಸ್ಥೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರು.
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್, ಪಿ. ಸುನೀಲ್ ಕುಮಾರ್, ಕೆ.ಎನ್. ರಮೇಶ್, ಜಿ. ಜಗದೀಶ್, ಡಾ.ಕೆ.ವಿ. ರಾಜೇಂದ್ರ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತದ ಸಿಇಒ ಕರೀಗೌಡ ಉಪಸ್ಥಿತರಿದ್ದರು.
ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೊದಲು ಮತ್ತು ನಂತರದ ಸ್ಥಿತಿಯನ್ನು ಜಿಯೋ-ಲೊಕೇಷನ್ಸಹಿತ ವೀಡಿಯೋದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಈ ವೀಡಿಯೋ ದಾಖಲೆಗಳ ಆಧಾರದ ಮೇಲೆಯೇ ಗುತ್ತಿಗೆದಾರರಿಗೆ ಹಣ ಪಾವತಿಸುವ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಸ್ವಚ್ಛತಾ ಕಾರ್ಯ ಕೈಗೊಂಡ ಬಳಿಕ ಸಂಗ್ರಹವಾಗುವ ತ್ಯಾಜ್ಯ ಹಾಗೂ ಭಗ್ನಾವಶೇಷಗಳನ್ನು ರಸ್ತೆ ಬದಿ ಅಥವಾ ಇತರೆ ಖಾಲಿ ಜಾಗಗಳಲ್ಲಿ ವಿಲೇವಾರಿ ಮಾಡಬಾರದು. ಪಾಲಿಕೆ ಗುರುತಿಸಿರುವ ಅಧಿಕೃತ ಸ್ಥಳಗಳಲ್ಲಿಯೇ ಅವುಗಳನ್ನು ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಸಂಬಂಧ "ಕ್ಲಿಯರ್ ಇಟ್' ಆ್ಯಪ್ನಲ್ಲಿ ಸ್ವಚ್ಛತಾ ಕಾರ್ಯದ ಸಂಪೂರ್ಣ ಮಾಹಿತಿಯು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಸೂಚಿಸಿದರು.