ಜಿಬಿಎ 
ಬೆಂಗಳೂರು

ಎಲ್​ಇಡಿ ಬೀದಿದೀಪದಿಂದ ಶೇ.61 ವಿದ್ಯುತ್​ ಉಳಿತಾಯ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೃಷ್ಣ ಬೈರೇಗೌಡ ಹೇಳಿಕೆ
  • ದೀಪ ಸುಸ್ಥಿಯಲ್ಲಿಲ್ಲದಿದ್ದರೆ ಗುತ್ತಿಗೆದಾರರಿಗೆ ದಂಡ!

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಗರದ ಎಲ್​ಇಡಿ ಬೀದಿದೀಪಗಳನ್ನು ಅಳವಡಿಸುವ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ ಶೇ.61.01 ವಿದ್ಯುತ್​ ಉಳಿತಾಯ ಮಾಡಬಹುದು. ಆದರೆ, ಈ ಯೋಜನೆ ಕುಂಟುತ್ತಾ ಸಾಗಲು ಕಾರಣವೇನು ಎಂದು ಅಧಿಕಾರಿಗಳಲ್ಲಿ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟೀಕರಣ ಕೇಳಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಎಲ್​ಇಡಿ ಬೀದಿ ದೀಪಗಳನ್ನು ಅಳವಡಿಸುವ ಕುರಿತು ಎಲೆಕ್ಟ್ರಿಕ್​ ಇಂಜಿನಿಯರ್​ಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದರು.
ಎಲ್​ಇಡಿ ಬಲ್ಬ್​ಗಳನ್ನು ಅಳವಡಿಸುವ ಕುರಿತು 2025 ಮೇ 7 ಮತ್ತು 15 ರಂದು ಕಾರ್ಯಾದೇಶ ನೀಡಲಾಗಿದೆ. ಯೋಜನೆಯಂತೆ ನಗರದಾದ್ಯಂತ ಒಟ್ಟು 3,02,919 ಎಲ್​ಇಡಿ ದೀಪಗಳನ್ನು ಅಳವಡಿಸಬೇಕಿತ್ತು, ಆದರೆ ಪ್ರಸ್ತುತ 2,67,270 ದೀಪಗಳನ್ನು ಮಾತ್ರ ಅಳವಡಿಸಲಾಗಿದೆ. ಅಲ್ಲದೆ, ಒಟ್ಟು 24,677 ಸಿಸಿಎಂಎಸ್​ ಪ್ಯಾನಲ್​ಗಳನ್ನು ಅಳವಡಿಸಬೇಕಿತ್ತು, ಆದರೆ ಪ್ರಸ್ತುತ 7,567 ಪ್ಯಾನಲ್​ಗಳನ್ನು ಮಾತ್ರ ಅಳವಡಿಸಲಾಗಿರುವುದು ಯಾಕೆ? ಬಾಕಿ ಕೆಲಸ ಕುಂಟುತ್ತಾ ಸಾಗಲು ಕಾರಣವೇನು? ಎಂದು ಅಸಮಾಧಾನ ಹೊರಹಾಕಿದರು.
ಅಧಿಕಾರಿಗಳು ಸೂಕ್ತ ಸಮಯಕ್ಕೆ ಯೋಜನೆಯನ್ನು ಪೂರ್ಣಗೊಳಿಸದೆ ಬೋಗಸ್​ ಅಂಕಿಅಂಶಗಳನ್ನು ನೀಡುತ್ತಿರುವುದು ಸರಿಯಲ್ಲ. ಬಾಕಿ ಉಳಿದಿರುವ ಎಲ್ಲ ಎಲ್​ಇಡಿ ದೀಪಗಳು ಮತ್ತು ಸಿಸಿಎಂಎಸ್​ ಪ್ಯಾನಲ್​ಗಳನ್ನು ಅಳವಡಿಸಲು ಆ.3ರಿಂದ ಜಾರಿಗೆ ಬರುವಂತೆ ಹೆಚ್ಚುವರಿ 2 ತಿಂಗಳ ಕಾಲಾವಕಾಶ ನೀಡುವುದಾಗಿ ತಿಳಿಸಿದರು.

ಗುತ್ತಿಗೆದಾರರಿಗೆ ದಂಡ

'ಸಹಾಯ' ಪೋರ್ಟಲ್​ನಲ್ಲಿ ಸ್ವೀಕೃತವಾಗುವ ದೂರುಗಳ ಪೈಕಿ ಶೇ.34 ಕಾರ್ಯನಿರ್ವಹಿಸದ ಬೀದಿ ದೀಪಗಳ ಕುರಿತ ದೂರುಗಳು ದಾಖಲಾಗುತ್ತಿವೆ. ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕರು ನೀಡಿದ ದೂರುಗಳನ್ನು 48 ಗಂಟೆಗಳ ಒಳಗಾಗಿ ಪರಿಹರಿಸಬೇಕು. ಒಂದು ವೇಳೆ ಗುತ್ತಿಗೆದಾರರು ಈ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಬೀದಿ ದೀಪಗಳನ್ನು ಸುಸ್ಥಿತಿಯಲ್ಲಿಡಲು ವಿಫಲರಾದ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ದೀಪಗಳ ಸಂಖ್ಯೆ ಮತ್ತು ವಿಳಂಬವಾದ ದಿನಗಳ ಆಧಾರದ ಮೇಲೆ ದಂಡದ ಮೊತ್ತವನ್ನು ಲೆಕ್ಕಹಾಕಬೇಕು. ಅಲ್ಲದೆ, ಸರಿಯಾಗಿ ಸ್ಪಂದಿಸದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಗಳನ್ನೂ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್​, ನಗರ ಪಾಲಿಕೆ ಆಯುಕ್ತರಾದ ಕೆ.ಎನ್​. ರಮೇಶ್​ , ಡಾ.ಕೆ.ವಿ. ರಾಜೇಂದ್ರ, ಮುಖ್ಯ ಅಭಿಯಂತರರಾದ ಆನಂದ್​, ಸ್ವಯಂಪ್ರಭಾ ಇದ್ದರು.

ಪ್ರಾಥಮಿಕ ಅಂಕಿಅಂಶಗಳಿಲ್ಲದೆ ಸಭೆಗೆ ಯಾಕೆ ರ್ಬತೀರಿ?

ನಿಮ್ಮದೆ ಇಲಾಖೆಯ ಕಾರ್ಯ ಪ್ರಗತಿಯ ಬಗ್ಗೆ ಪ್ರಾಥಮಿಕ ಅಂಕಿಅಂಶಗಳೂ ಇಲ್ಲದೆ ಸಭೆಗೆ ಯಾಕೆ ರ್ಬತೀರಿ, ಸಂಬಂಧಿತ ಸಚಿವರು ಸಭೆ ಕರೆದಿದ್ದಾರೆ ಎಂದ ಮೇಲೆ ಕನಿಷ್ಠ ಸಿದ್ಧತೆಯೂ ಇಲ್ಲದೆ ಬರುವುದು ಎಷ್ಟು ಸರಿ? ಎಂದು ಸಚಿವ ಕೃಷ್ಣ ಬೈರೇಗೌಡರು ಅಧಿಕಾರಿಗಳ ವಿರುದ್ಧ ಮಾತಿನ ಚಾಟಿ ಬೀಸಿದರು. ಪ್ರಸ್ತುತ ನಗರದ 5 ಪಾಲಿಕೆಗಳಲ್ಲಿ ಬೀದಿ ದೀಪಗಳಿಗೆ ವಿದ್ಯುತ್​ ಬಿಲ್​ ಎಷ್ಟು ಪಾವತಿಸಲಾಗುತ್ತಿದೆ. ಎಲ್​ಇಡಿ ದೀಪ ಅಳವಡಿಸಿದ ನಂತರದ ವ್ಯತ್ಯಾಸ ಎಷ್ಟು ಎಂಬ ಅಂಕಿಅಂಶ ನೀಡುವಂತೆ ಸಚಿವರು ಸಭೆಯಲ್ಲಿ ಕೋರಿದರು. ಆದರೆ, ಅಧಿಕಾರಿಗಳ ಬಳಿ ಯಾವುದೇ ಅಧಿಕೃತ ಅಂಕಿಅಂಶ ಇರಲಿಲ್ಲ. ಈ ವೇಳೆ ಅಸಮಾಧಾನ ಹೊರಹಾಕಿದ ಅವರು, ಬೇಸಿಕ್​ ಡೇಟಾ ಇಲ್ಲದೆ ನನ್ನ ಮುಖ ನೋಡಿಕೊಂಡು ಹೋಗಲು ಬಂದಿದ್ದಾ? ಸರ್ಕಾರಿ ನೌಕರಿ ಅಂದ್ರೆ ಕೈಬೀಸ್ಕಂಡು ಬಬೋರ್ದು ಹೋಗ್ಬೋದು ಎಂಬ ಧೋರಣೆ ಬೆಳೆದುಬಿಟ್ಟಿದೆ. ಅಧಿಕಾರಿಗಳ ಇಂತಹ ವರ್ತನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಎಂದು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.