- ಮತದಾರರ ವಿಶೇಷ ಪರಿಷ್ಕರಣೆ ನೆಪ
- ಡಿಸೆಂಬರ್ 31ರ ವರೆಗೆ ಕಾಲಾವಕಾಶ ಕೋರಿಕೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯ 369 ವಾರ್ಡ್ಗಳಿಗೆ ನಡೆಯಬೇಕಿರುವ ಸ್ಥಳಿಯ ಸಂಸ್ಥೆಗಳ ಚುನಾವಣೆಯನ್ನು ಆ.31ರೊಳಗೆ ನಡೆಸುವ ಬದಲು ಡಿ.31ರವರೆಗೆ ನಾಲ್ಕು ತಿಂಗಳ ಕಾಲಾವಕಾಶ ನೀಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಿಂದ ಆಡಳಿತ ಯಂತ್ರ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ ಚುನಾವಣೆ ನಡೆಸಲು ತೀವ್ರ ಆಡಳಿತಾತ್ಮಕ ಹಾಗೂ ಮಾನವ ಸಂಪನ್ಮೂಲದ ಕೊರತೆ ಎದುರಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಈ ಹಿಂದೆ ಮೇ 20ರಂದು ನಡೆದ ವಿಚಾರಣೆ ವೇಳೆ ಚುನಾವಣೆ ವಿಳಂಬಗೊಳಿಸಲು ಜಿಬಿಎ ವಿಳಂಬ ತಂತ್ರ ಅನುಸರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೇ ಕೊನೆಯ ಅವಕಾಶವಾಗಿದ್ದು, ಚುನಾವಣೆ ನಡೆಸುವ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಎಚ್ಚರಿಕೆ ನೀಡಿತ್ತು.
ಜು.9ರಂದು ಸಲ್ಲಿಸಲಾದ ಅರ್ಜಿಯಲ್ಲಿ, ಎಸ್ಐಆರ್ ಕಾರ್ಯಕ್ಕೆ 8,872 ಬೂತ್ಮಟ್ಟದ ಅಧಿಕಾರಿಗಳು, 938 ಮೇಲ್ವಿಚಾರಕರು, 28 ಚುನಾವಣಾ ನೋಂದಣಾಧಿಕಾರಿಗಳು, 75 ಸಹಾಯಕ ಅಧಿಕಾರಿಗಳು ಸೇರಿ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಲಾಗಿದೆ. ಮನೆಮನೆಗೆ ತೆರಳಿ ಮತದಾರರ ವಿವರ ಸಂಗ್ರಹಿಸುವ ಕಾರ್ಯದ ಜತೆಗೆ ಖಾಲಿ ಮನೆಗಳಿಗೆ ಕನಿಷ್ಠ ಮೂರು ಬಾರಿ ಮರುಭೇಟಿ ನೀಡಬೇಕಾಗಿರುವುದರಿಂದ ಸಿಬ್ಬಂದಿ ಸಂಪೂರ್ಣವಾಗಿ ಈ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ವಿವರಿಸಲಾಗಿದೆ.
ಬೆಂಗಳೂರು ಜಿಲ್ಲೆಯಲ್ಲಿ ಮಾತ್ರ 1.03 ಕೋಟಿಗೂ ಅಧಿಕ ಮತದಾರರಿದ್ದು, ಇದು ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ ಸುಮಾರು ಆರನೇ ಒಂದು ಭಾಗವಾಗಿದೆ. ಸುಮಾರು 40 ಲಕ್ಷ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ಜಿಬಿಎ ಹಾಗೂ ಐದು ನಗರ ಪಾಲಿಕೆಗಳ ಸಿಬ್ಬಂದಿ ಸಂಪೂರ್ಣವಾಗಿ ಎಸ್ಐಆರ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಿರಂತರ ನಿವಾಸ ಬದಲಾವಣೆ ಹಾಗೂ ನಗರಾಂತರ ವಲಸೆಯಿಂದ ಮತದಾರರ ಪಟ್ಟಿಯ ಪರಿಷ್ಕರಣೆ ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಇದೇ ಅವಧಿಯಲ್ಲಿ ನಗರ ಪಾಲಿಕೆ ಚುನಾವಣೆ ನಡೆಸುವುದು ಆಡಳಿತಾತ್ಮಕವಾಗಿ ದೊಡ್ಡ ಸವಾಲಾಗಿದೆ. ಹೀಗಾಗಿ ನ್ಯಾಯಸಮ್ಮತ ಹಾಗೂ ಸುಗಮ ಚುನಾವಣೆಗೆ ಡಿಸೆಂಬರ್ ಅಂತ್ಯದವರೆಗೆ ಕಾಲಾವಕಾಶ ನೀಡುವಂತೆ ಜಿಬಿಎ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.
ಈವರೆಗೆ ಗುರಿ ಜನಸಂಖ್ಯೆಯ ಶೇ.51.8 ಮಂದಿಗೆ ತಲುಪಲಾಗಿದ್ದು, ಸುಮಾರು 53.85 ಲಕ್ಷ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಆ.5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ಗುರಿ ಹೊಂದಲಾಗಿದೆ. ಬಳಿಕ ಸೆ.25ರೊಳಗೆ ಸೇರ್ಪಡೆ ಹಾಗೂ ಹೆಸರು ಕೈಬಿಡುವ ಕುರಿತು ಸಲ್ಲಿಕೆಯಾಗುವ ಸುಮಾರು ಒಂದು ಲಕ್ಷ ಅರ್ಜಿಗಳನ್ನು ಪ್ರತಿ ಚುನಾವಣಾ ನೋಂದಣಾಧಿಕಾರಿ ಪರಿಶೀಲಿಸಬೇಕಿದೆ. ಅಂತಿಮ ಮತದಾರರ ಪಟ್ಟಿಯನ್ನು ಅ.7ರಂದು ಪ್ರಕಟಿಸುವ ವೇಳಾಪಟ್ಟಿಯೂ ನಿಗದಿಯಾಗಿದೆ.