ಜಿಬಿಎ 
ಬೆಂಗಳೂರು

ಆಗಸ್ಟ್​ ಒಳಗೆ ಜಿಬಿಎ ಚುನಾವಣೆಗೆ ಕಸರತ್ತು|gba

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಸುಪ್ರೀಂ ಗಡುವಿನ ಬೆನ್ನಲ್ಲೇ ಚುನಾವಣಾ ಆಯೋಗ ಚುರುಕು
  • ಜುಲೈನಲ್ಲಿ ವೇಳಾಪಟ್ಟಿ ಸಾಧ್ಯತೆ
ಬೆಂಗಳೂರು: ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಆಗಸ್ಟ್​ 31ರೊಳಗೆ ಕಡ್ಡಾಯವಾಗಿ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್​ ನೀಡಿರುವ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಸಿದ್ಧತೆಗಳನ್ನು ವೇಗಗೊಳಿಸಿದೆ. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿ, ಆಗಸ್ಟ್​ ಮೂರನೇ ವಾರದಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜು.10ರೊಳಗೆ ಚುನಾವಣಾ ದಿನಾಂಕ ಘೋಷಣೆಯ ನಿರೀೆ ಇದ್ದು, ವೇಳಾಪಟ್ಟಿ ಪ್ರಕಟವಾದ ಕೂಡಲೇ ಜಿಬಿಎ ವ್ಯಾಪ್ತಿಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಾಗಲಿದೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹಾಗೂ ಸಿಬ್ಬಂದಿ ಕೊರತೆಯನ್ನು ಪರಿಗಣಿಸಿ, ಚುನಾವಣೆ ನಡೆಸಲು ನೀಡಿದ್ದ ಜೂನ್​ 30ರ ಗಡುವನ್ನು ಸುಪ್ರೀಂ ಕೋರ್ಟ್​ ಆಗಸ್ಟ್​ 31ರವರೆಗೆ ವಿಸ್ತರಿಸಿದೆ. ಆದರೆ ಇದೇ ಕೊನೆಯ ಅವಕಾಶ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಮತ್ತೊಮ್ಮೆ ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ರಾಜ್ಯ ಸರ್ಕಾರ ಸೆಪ್ಟೆಂಬರ್​ ಅಂತ್ಯದವರೆಗೆ ಕಾಲಾವಕಾಶ ಕೋರಿ ಮನವಿ ಸಲ್ಲಿಸಿದ್ದರೂ, ನ್ಯಾಯಾಲಯ ಅದನ್ನು ತಿರಸ್ಕರಿಸಿರುವುದು ಚುನಾವಣಾ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಿದೆ.
ಸದ್ದಿಲ್ಲದೇ ಸಿದ್ಧತೆ ಆರಂಭ:
ಸುಪ್ರೀಂ ಕೋರ್ಟ್​ ಆದೇಶದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಸದ್ದಿಲ್ಲದೆ ಚುನಾವಣಾ ಸಿದ್ಧತೆ ಕೈಗೊಂಡಿದೆ. ಮತದಾರರ ಪಟ್ಟಿ ಅಂತಿಮಗೊಳಿಸುವುದು, ಮತಗಟ್ಟೆಗಳ ಗುರುತಿಸುವಿಕೆ, ಸಿಬ್ಬಂದಿ ನಿಯೋಜನೆ ಸೇರಿ ವಿವಿಧ ಹಂತದ ಕಾರ್ಯಗಳು ನಡೆಯುತ್ತಿವೆ. ಎಲ್ಲ ಸಿದ್ಧತೆ ಪೂರ್ಣಗೊಂಡ ಬಳಿಕ ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಸುದ್ದಿಗೋಷ್ಠಿ ನಡೆಸಿ, ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಕ್ಷಗಳಲ್ಲೂ ಚಟುವಟಿಕೆ
ಇತ್ತ ಆಡಳಿತಾರೂಢ ಕಾಂಗ್ರೆಸ್​ ಪಕ್ಷವೂ ಚುನಾವಣೆ ಎದುರಿಸಲು ಸಜ್ಜಾಗಿದೆ. ಐದು ನಗರಪಾಲಿಕೆಗಳ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಈಗಾಗಲೇ ಸಂಘಟನಾ ಚಟುವಟಿಕೆ ಚುರುಕುಗೊಳಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಮನೆಮನೆಗೆ ಭೇಟಿ, ಸರ್ಕಾರದ ಸಾಧನೆಗಳು ಹಾಗೂ ಗ್ಯಾರಂಟಿ ಯೋಜನೆಗಳ ಪ್ರಚಾರ, ವಾರ್ಡ್​ವಾರು ಮತದಾರರ ಮಾಹಿತಿ ಸಂಗ್ರಹಣೆ ಮತ್ತು ಜನಸಂಪರ್ಕ ಕಾರ್ಯಕ್ರಮಗಳಿಗೆ ಒತ್ತು ನೀಡುವಂತೆ ಪಕ್ಷದ ನಾಯಕರು ಸೂಚಿಸಿದ್ದಾರೆ.