- ಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ
- ಅಪಾರ್ಟ್ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಬರಲಿದೆ ಮಸೂದೆ
- ಅಭಿಪ್ರಾಯ ಸಲ್ಲಿಸಲು ಆ. 6ರವರೆಗೆ ಅವಕಾಶ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಪಾರ್ಟ್ಮೆಂಟ್ ಮಾಲೀಕರ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದಶಕಗಳಿಂದ ಕೂಗು ಕೇಳುತ್ತಲೇ ಇದೆ. ಗೊಂದಲಗಳ ಸುಳಿಯಲ್ಲಿ ಇದ್ದ 50 ವರ್ಷಗಳ ಹಿಂದಿನ ಕಾಯ್ದೆಯನ್ನು ರದ್ದುಗೊಳಿಸಿ, ಸರಳ ಹಾಗೂ ನ್ಯಾಯದ ಚೌಕಟ್ಟಿನೊಳಗೆ "ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ &-2026' ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇರಿಸಿದೆ.
ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯ್ದೆ-&1972 ಹಾಗೂ ಕರ್ನಾಟಕ ಓನರ್ಶಿಪ್ ಫ್ಲ್ಯಾಟ್ಸ್ ಕಾಯ್ದೆ-&1972 ಕಾಯ್ದೆಯಲ್ಲಿ ಅಪಾರ್ಟ್ಮೆಂಟ್ ಸಂಘಗಳ ನೋಂದಣಿ, ನಿರ್ವಹಣೆ, ಮಾಲೀಕತ್ವ, ಪರಭಾರೆ, ಮರು ಅಭಿವೃದ್ಧಿ ಸೇರಿ ಹಲವು ವಿಷಯಗಳಲ್ಲಿ ಸ್ಪಷ್ಟತೆ ಕೊರತೆಯಿಂದ ಹಲವು ಕಾನೂನಾತ್ಮಕ ತೊಡಕುಗಳು ಎದುರಾಗುತ್ತಿತ್ತು. ಇದೀಗ ಹೊಸ ಕಾಯ್ದೆಯ ಕರಡು ರೂಪಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ನಗರದ ಜವಾಹರಲ್ ಲಾಲ್ ನೆಹರು ತಾರಾಲಯ ಸಭಾಂಗಣದಲ್ಲಿ ಬುಧವಾರ ಮಸೂದೆ ಕುರಿತು ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಸಂವಾದ ನಡೆಸಿದರು.
ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ:
ಅಪಾರ್ಟ್ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಆಸ್ತಿಯನ್ನು ನೀವು ಖರೀದಿಸಿದ ಮೇಲೆ ನೀವೇ ಅದರ ಮಾಲೀಕರು. ಈ ವಿಚಾರದಲ್ಲಿ ಅನುಮಾನವಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಅಪಾರ್ಟ್ಮೆಂಟ್ಗಳ ನೋಂದಣಿ, ಮಾಲೀಕತ್ವ, ಬ್ಯಾಂಕ್ ಸಾಲಸೌಲಭ್ಯ ಮೊದಲಾದ ವಿಷಯಗಳಲ್ಲಿ ಗೊಂದಲವಿದೆ. ಈ ನಿಟ್ಟಿನಲ್ಲಿ ಆಸ್ತಿ ಕೊಂಡವರಿಗೆ ಅನುಕೂಲವಾಗುವಂತೆ ಈ ವಿಧೇಯಕ ಜಾರಿಗೆ ತರಲಾಗುತ್ತಿದೆ. ಈ ಸಂಬಂಧ ಸರ್ಕಾರದಿಂದ ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ ಸಾರ್ವಜನಿಕರು, ಅಪಾರ್ಟ್ಮೆಂಟ್ ಪ್ರತಿನಿಧಿಗಳು, ಶಾಸಕರು ಒಳಗೊಂಡಂತೆ ಮುಕ್ತವಾಗಿ ಸಲಹೆ ಅಭಿಪ್ರಾಯ ಸಲ್ಲಿಸಲು ಆ.6ರವರೆಗೆ ಅವಕಾಶ ನೀಡಲಾಗಿದೆ. ಆನ್ಲೈನ್ ಮೂಲಕವೂ ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದರು.
ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸಿದ ಬಳಿಕ ವಿಧೇಯಕ ಜಾರಿ ಕುರಿತು ಸಂಪುಟದಲ್ಲಿ ಚರ್ಚಿಸಿ ಜತೆಗೆ ಡೆವಲಪರ್ಗಳೊಂದಿಗೆ ಕಾನೂನಿನ ಬಗ್ಗೆ ಮನವರಿಕೆ ಮಾಡಿ ಬಳಿಕ ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಬೆಂಗಳೂರಿನಲ್ಲಿ 40 ಲಕ್ಷ ಆಸ್ತಿಗಳಿದ್ದು, ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಇ&ಖಾತೆ ನೀಡಲಾಗಿದೆ. ಕೆಲವು ಮಂದಿ ಕಡಿಮೆ ವಿಸ್ತೀರ್ಣದಲ್ಲಿ ಅಥವಾ ಕಂದಾಯ ಜಮೀನಿನಲ್ಲಿ ಯಾವುದೇ ಮೂಲಸೌಕರ್ಯವಿಲ್ಲದೆ ಹೆಚ್ಚು ಅಂತಸ್ತಿನ ಕಟ್ಟಡ ನಿರ್ಮಿಸಿ, ನಿಯಮ ಉಲ್ಲಂಘಿಸಿರುವ ಉದಾಹರಣೆ ಇವೆ. ಈ ಬಗ್ಗೆ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕಾಯ್ದೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಕೃಷ್ಣಬೈರೇಗೌಡ ಮಾತನಾಡಿ, 50 ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಅಪಾರ್ಟ್ಮೆಂಟ್ಗಳು ಹಾಗೂ ನಿವಾಸಿಗಳ ಸಂಖ್ಯೆಯೂ ಹೆಚ್ಚಿದೆ. ಮಾಲೀಕರ ಹಿತ ಕಾಯಲು ಕಾನೂನು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಇರುವ ಕಾಯ್ದೆಯನ್ನು ಸರಳೀಕರಣಗೊಳಿಸಿ ಸ್ಪಷ್ಟ ಕಾನೂನು ರಚಿಸುವ ಉದ್ದೇಶದಿಂದ ಹೊಸ ಕಾಯ್ದೆ ರೂಪಿಸಲಾಗಿದೆ ಎಂದರು.
ಅಪಾರ್ಟ್ಮೆಂಟ್ ಕಾಯ್ದೆಯನ್ನು ಜಾರಿಗೊಳಿಸುವ ಕುರಿತು 2023ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಅದರಂತೆ ಹಲವು ಬದಲಾಣೆಗಳೊಂದಿಗೆ ಮಸೂದೆ ಕರಡು ಸಿದ್ಧಪಡಿಸಿದ್ದು, ಅಪಾರ್ಟ್ಮೆಂಟ್ ಮಾಲೀಕರು, ನಿವಾಸಿಗಳ ಅಭಿಪ್ರಾಯ, ಸಲಹೆ ಪಡೆದು ಸಂಪುಟದಲ್ಲಿ ಚರ್ಚಿಸಿ ಕಾನೂನು ಚೌಕಟ್ಟಿನಲ್ಲಿ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಕಾಯ್ದೆಯಲ್ಲಿನ ಪ್ರಮುಖ ಅಂಶಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ವಿವರಿಸಿದರು. ಬಳಿಕ ಅಪಾರ್ಟ್ಮೆಂಟ್ ಪ್ರತಿನಿಧಿಗಳು ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ಪ್ರಶ್ನೋತ್ತರದ ಮೂಲಕ ಮಸೂದೆ ಕುರಿತು ಸಂವಾದ ನಡೆಸಿದರು. ಸಚಿವರಾದ ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ವಿಧಾನಪರಿಷತ್ ಸದಸ್ಯ ಡಾ.ಟಿ.ಎ. ಶರವಣ, ರಮೇಶ್ ಬಾಬು, ರಾಜೀವ್ ಗೌಡ ಮತ್ತಿತರರಿದ್ದರು.
ಬೋರ್ಡ್ಲ್ಲಿ ನನ್ನ ಹೆಸರು ಬರೆದಿದ್ದರು!
ಅಪಾರ್ಟ್ಮೆಂಟ್ ನಿವಾಸಿಗಳಾದ ಮೇಲೆ ಒಪ್ಪಂದ ಮಾಡಿಕೊಳ್ಳುವಾಗ ಒಂದು ರೀತಿ, ನೋಂದಣಿ ವೇಳೆ ಮತ್ತೊಂದು ರೀತಿ.. ಇದು ಬೇಸರ ತಂದಿದೆ. ಕೆಲವರಿಂದ ತಕರಾರು ಮೂಲಕ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಉದಾಹರಣೆಗೆ, ನನ್ನ ಅಪಾರ್ಟ್ಮೆಂಟ್ನಲ್ಲಿ ನನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳುವ ಮೊದಲೇ ನನ್ನ ಹೆಸರನ್ನೇ ನೋಟಿಸ್ ಬೋರ್ಡ್ನಲ್ಲಿ ಹಾಕಿದ್ದರು. ಬೆನ್ನಿಗಾನಹಳ್ಳಿಯಲ್ಲೂ ಇದೇ ರೀತಿ ಮಾಡಿದ್ದರು. ಒಳಗೆ ನನ್ನನ್ನು ಬಿಡುವುದಿಲ್ಲ ಎಂದಿದ್ದರು ಎಂದು ಡಿಕೆಶಿ ಸ್ಮರಿಸಿದರು.
2ನೇ ಏರ್ಪೋರ್ಟ್ಗೆ ಸ್ಥಳ ಹುಡುಕಾಟ
ನಗರದಲ್ಲಿ 1.35 ಕೋಟಿ ರೂ. ವಾಹನಗಳಿದ್ದು, ಗುಂಡಿಗಳನ್ನು ಮುಚ್ಚಲೆಂದೇ 4 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಹೈ ರೈಸ್ ಕಟ್ಟಡಗಳ ಬಗ್ಗೆ ಗಮನಹರಿಸಿ, ರಸ್ತೆಗಳನ್ನು ವಿಸ್ತರಿಸುವ ಬಗ್ಗೆ ಒತ್ತು ನೀಡಲಾಗುತ್ತಿದೆ. 132 ಕಿಮೀ ಪೆರಿಫೆರಲ್ ವರ್ತುಲ ರಸ್ತೆ (ಬೆಂಗಳೂರು ಬಿಜಿನೆಸ್ ಕಾರಿಡಾರ್) ನಿಮಾರ್ಣವಾಗುತ್ತಿದೆ. ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಭೂಸ್ವಾಧಿನಕ್ಕೆ ರಾಜ್ಯದಲ್ಲಿ ರೈತರಿಗೆ ಗರಿಷ್ಠ ಮೊತ್ತದ ಪರಿಹಾರ ನೀಡಲಾಗುತ್ತಿದೆ. 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಮಾರ್ಣಕ್ಕೆ ಸರ್ಕಾರ ಮುಂದಾಗಿದ್ದು, ಸೂಕ್ತ ಸ್ಥಳ ಹುಡುಕಾಟ ನಡೆಯುತ್ತಿದೆ ಎಂದು ಡಿಕೆಶಿ ಮಾಹಿತಿ ನೀಡಿದರು.
ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆಗೆ ಸಂಬಂಧಿಸಿ ರಾಜ್ಯದಲ್ಲಿ ಸಮಗ್ರ ಕಾನೂನು ರೂಪಿಸಲು ಸರ್ಕಾರ ಕೈಗೊಂಡಿರುವ ಉಪಕ್ರಮ ಸ್ವಾಗತಾರ್ಹ. ಮನೆ ಮಾಲೀಕರ ಹಕ್ಕುಗಳ ರಕ್ಷಣೆ, ಬಿಲ್ಡರ್ಗಳ ಉತ್ತರದಾಯಿತ್ವ, ಅಪಾರ್ಟ್ಮೆಂಟ್ ಸಂಘಗಳ ಅಧಿಕಾರ, ಪಾರದರ್ಶಕ ಹಾಗೂ ಸ್ವಯಂ ಆಡಳಿತಕ್ಕೆ ಬಲ ನೀಡುವ ಸಮಗ್ರ ಕಾನೂನು ರಾಜ್ಯಕ್ಕೆ ಅಗತ್ಯವಾಗಿದೆ.
ನಗರಗಳ ಬೆಳವಣಿಗೆಯೊಂದಿಗೆ ಅಪಾರ್ಟ್ಮೆಂಟ್ ವಲಯದ ಸವಾಲುಗಳೂ ಬದಲಾಗುತ್ತಿವೆ. ಮನೆ ಖರೀದಿದಾರರ ಹಕ್ಕುಗಳಿಗೆ ಸ್ಪಷ್ಟ ರಕ್ಷಣೆ, ಪಾರದರ್ಶಕ ಆಡಳಿತ ಹಾಗೂ ಪುನರ್ ಅಭಿವೃದ್ಧಿಗೆ ಅನುಕೂಲಕರ ಕಾನೂನು ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ಈ ಕರಡು ಮಸೂದೆ ಉತ್ತಮ ಆರಂಭವಾಗಿದ್ದು, ಎಲ್ಲ ಪಕ್ಷಗಳ ಅಭಿಪ್ರಾಯಗಳನ್ನು ಒಳಗೊಂಡ ಸಮಗ್ರ ಕಾನೂನು ರೂಪುಗೊಳ್ಳಬೇಕು.