- ವ್ರತಾಚರಣೆಗೆ ಪ್ರೋತ್ಸಾಹ ನೀಡುವ ಉದ್ದೇಶ
- ಆಂಧ್ರ ಪ್ರದೇಶದಲ್ಲಿ ತಯಾರಾದ ಮೂರ್ತಿಗಳು
ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಸಾಮಾನ್ಯವಾಗಿ ಗಣೇಶನ ಅಂಶಾವತಾರಗಳ ಮೂರ್ತಿಗಳು ಗಮನಸೆಳೆಯುವುದು ಮಾಮೂಲಿ. ಆದರೆ, ಈ ಬಾರಿ ರಾಜಧಾನಿಗೆ ಬಂದಿಳಿದ "ಗಜಗೌರಿ' ವಿಗ್ರಹವು ವಿಶೇಷ ಎನಿಸಿದೆ.
ಗಣಪನ ಆರಾಧನೆಯಂತೆ "ಗಜಗೌರಿ' ವ್ರತವನ್ನು ವ್ಯಾಪಕವಾಗಿ ಆಚರಿಸುವ ಉದ್ದೇಶದಿಂದ "ಗಜಗೌರಿ' ಮೂರ್ತಿಗಳನ್ನು ತಯಾರಿಸಲಾಗಿದೆ. ದೇವಲೋಕದ ಐರಾವತ ಆನೆಯ ಮೇಲೆ ಸಿಂಹಾಸನದಲ್ಲಿ ಗೌರಿದೇವಿ ಕುಳಿತಿರುವಂತೆ ಆಕರ್ಷಕವಾಗಿ ನಿರ್ಮಾಣ ಮಾಡಲಾಗಿದೆ. 6 ಅಡಿ ಎತ್ತರ, ಎರಡೂವರೆ ಅಡಿ ಅಗಲವಿರುವ ಈ ವಿಗ್ರಹವನ್ನು ಮಣ್ಣಿನಿಂದ ತಯಾರಿಸಲಾಗಿದೆ. ಆಂಧ್ರ ಪ್ರದೇಶದಲ್ಲಿ ತಯಾರಿಸಲಾದ ಗಜಗೌರಿಯ 5 ವಿಗ್ರಹಗಳನ್ನು ಪ್ರಸಿದ್ಧ ಗಣೇಶ ಮೂರ್ತಿ ತಯಾರಕರಾದ ಶ್ರೀ ವಿನಾಯಕ ಆ್ಯಂಡ್ ಕಂಪನಿ ಮಾಲೀಕ ಎಂ. ಶ್ರೀನಿವಾಸ್ ರಾಜಧಾನಿಗೆ ಪರಿಚಯಿಸಿದ್ದಾರೆ.
ಭಾದ್ರಪದ ಮಾಸದಲ್ಲಿ ಕರ್ನಾಟಕದಲ್ಲಿ ವಿಶೇಷವಾಗಿ ಆಚರಿಸಲಾಗುವ ಧಾರ್ಮಿಕ ಆರಾಧನೆಗಳಲ್ಲಿ ಗಜಗೌರಿ ವ್ರತವೂ ಒಂದು. ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಇದನ್ನು ಅಶ್ವಿನಿ ಶುಕ್ಲ ಪಕ್ಷ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ವ್ರತದ ಮಹತ್ವವನ್ನು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಕೌರವರ ತಾಯಿ ಗಾಂಧಾರಿ ಮತ್ತು ಪಾಂಡವರ ತಾಯಿ ಕುಂತಿ ತಮ್ಮ ಪುತ್ರರ ಕಲ್ಯಾಣಕ್ಕಾಗಿ ಇದನ್ನು ಮಾಡಿದರು ಎನ್ನಲಾಗುತ್ತದೆ. ಗಾಂಧಾರಿಗೆ ತನ್ನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಗಜಗೌರಿ ವ್ರತವನ್ನು ಮಾಡುವಂತೆ ನಾರದ ಋಷಿ ಸಲಹೆ ನೀಡಿದ್ದ. ಅವಳು ಮಣ್ಣಿನಿಂದ ಆನೆಯನ್ನು ಮಾಡಿ ವ್ರತವನ್ನು ಮಾಡುತ್ತಾಳೆ. ಆದರೆ, ಕುಂತಿ ವ್ರತವನ್ನು ಮಾಡಲು ತಮ್ಮ ಮಕ್ಕಳ ಸಹಾಯ ಪಡೆಯುತ್ತಾಳೆ. ಪಾಂಡವ ಸಹೋದರರಾದ ಭೀಮ ಮತ್ತು ಅರ್ಜುನರು ಇಂದ್ರನ ಬಿಳಿ ಆನೆ ಐರಾವತವನ್ನು ಭೂಮಿಗೆ ತರಿಸಿ, ಗಜಗೌರಿ ವ್ರತ ಆಚರಿಸಿದರು ಎಂದು ಹೇಳಲಾಗುತ್ತದೆ.
ತರಹೇವಾರಿ ರೂಪದಲ್ಲಿರುವ ಗಣಪ ಈ ಬಾರಿಯೂ ಮೈವೆತ್ತಿದ್ದಾನೆ. ಕೆಂಪೇಗೌಡರ ಖಡ್ಗ ಹಿಡಿದುಕೊಂಡು ನಿಂತಿರುವ ಗಣೇಶ, ಹುಲಿಯ ಮೇಲೆ ಕುಳಿತ ಮಾದೇಶ್ವರನ ರೂಪದ ವಿಗ್ರಹ ವಿಭಿನ್ನವಾಗಿವೆ. "ಮಗು ಗಣಪ' ಗ್ರಾಹಕರ ಮನಸ್ಸನ್ನು ಗೆದ್ದಿದ್ದು, ಮಾರುಕಟ್ಟೆಯಲ್ಲಿ ಇದರ ೋಟೋ ಕ್ಲಿಕ್ಕಿಸುವವರ ಸಾಲೇ ಇದೆ. ನರ್ತನ ಮಾಡುವ ಭಂಗಿಯಲ್ಲಿ ಕಮಲದ ಮೇಲೆ ನಿಂತಿರುವ ಪಾಂಡುರಂಗ ಗಣಪನು ವಿಶೇಷವಾಗಿದೆ. ರಾಣಿ ಚನ್ನಮ್ಮಅವತಾರದ ಗೌರಿ ವಿಗ್ರಹವೂ ಆಕರ್ಷಕವಾಗಿದೆ.
ನಾವು ಸುಮಾರು 80 ವರ್ಷಗಳಿಂದ ಮೂರ್ತಿ ನಿರ್ಮಾಣ ಕಾಯಕದಲ್ಲಿ ತೊಡಗಿದ್ದೇವೆ. ಈ ಬಾರಿ ಗಜಗೌರಿ ಮೂರ್ತಿಯು ವಿಶೇಷವಾಗಿದ್ದು, ಇದನ್ನು ವ್ರತ ಆಚರಿಸುವವರು ಮಾತ್ರ ತೆಗೆದುಕೊಂಡು ಹೋಗುತ್ತಾರೆ. ಗಣೇಶನ ಆರಾಧನೆಯು ವ್ಯಾಪಕ ಪ್ರಸಿದ್ಧಿ ಪಡೆದಿದ್ದು, ಅದರಂತೆ ಗಜಗೌರಿ ವ್ರತವೂ ಆಚರಿಸುವ ಉದ್ದೇಶದಿಂದ ಮೂರ್ತಿಗಳ ನಿರ್ಮಾಣ ಮಾಡಲಾಗಿದೆ. ಒಂದು ಮೂರ್ತಿಗೆ ಸುಮಾರು 30 ಸಾವಿರ ರೂ. ಬೆಲೆ ಇದ್ದು, ಈ ಬಾರಿ 5 ಮೂರ್ತಿಗಳನ್ನು ಬೆಂಗಳೂರಿಗೆ ತರಲಾಗಿದೆ.